ಭಾನುವಾರ, ಡಿಸೆಂಬರ್ 4, 2022
19 °C

ಅಧಿಕಾರಿಗಳು ಹಿಟ್ಲರ್‌ಗಳೇ: ಜೋಶಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲು ಸೇತುವೆ ವಿನ್ಯಾಸಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾನು ಏನು ಹೇಳಿದ್ದೆನೋ ಅದನ್ನು ಬೇಡ ಎನ್ನಲು ಅಧಿಕಾರಿಗಳೇನು ಹಿಟ್ಲರ್‌ಗಳೇ’ ಎಂದು ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ‘ಇದು ಯಾರಪ್ಪನ ಆಸ್ತಿಯೂ ಅಲ್ಲ. ಅಧಿಕಾರಿಗಳು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಕುರಿತು ಮಂಜುಳಾ ಸಭೆ ಕರೆದರೂ ನೀವು ಹೋಗಬೇಡಿ. ನಾನು ಹೇಳಿದಂತೆ ಮಾಡಿ. ಮುಂದೆ ಏನಾಗುತ್ತದೋ ನೋಡೋಣ. ಅಭಿವೃದ್ಧಿ ವಿಷಯದಲ್ಲಿ ಹುಡುಗಾಟಿಕೆ ಸಹಿಸಲಾಗದು’ ಎಂದರು.

ಇದಕ್ಕೂ ಮೊದಲು ಮೇಲು ಸೇತುವೆ ಕುರಿತು ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ‘ಹೊಸೂರು ವೃತ್ತದಿಂದ ಪಾಲಿಕೆವರೆಗೆ ಮೇಲು ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಇದಕ್ಕೆ ಡೆಲ್ಟ್ ನಿರ್ದೇಶಕರೂ ಆಗಿರುವ ವಿ.ಮಂಜುಳಾ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಿಆರ್‌ಟಿಎಸ್‌ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ಏನೂ ತೋಚುತ್ತಿಲ್ಲ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ, ‘ಮೇಲುಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಿಆರ್‌ಟಿಎಸ್ ಮಾರ್ಗದ ಮೂರು ಬಸ್ ನಿಲ್ದಾಣದ ನಡುವೆಯೇ ಸೇತುವೆಯ ಪಿಲ್ಲರ್‌ಗಳು ಬರಲಿವೆ. ವಿನ್ಯಾಸದಂತೆ ಪಿಲ್ಲರ್‌ಗಳನ್ನು ಅಲ್ಲಿಯೇ ನಿರ್ಮಿಸಿ, ಬಸ್ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರೂ ವಿ.ಮಂಜುಳಾ ಅವರು ಬಿಆರ್‌ಟಿಎಸ್ ಆಸ್ತಿ ಮುಟ್ಟಬೇಡಿ ಎನ್ನುತ್ತಿದ್ದಾರೆ. ಸಾರ್ವಜನಿಕರಿಗೆ ಸಹಾಯವಾಗಬಲ್ಲ ಕಾಮಗಾರಿಗೆ ಸರ್ಕಾರದ ಅಧಿಕಾರಿಗಳೇ ಅಡೆತಡೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.