ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 12ಕ್ಕೆ ಬೇಡಿಕೆ: ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪಟ್ಟು, ಜ.23ರ ಗಡುವು

Last Updated 27 ನವೆಂಬರ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಮುಂಬರುವ ಜನವರಿ 23ರ ಒಳಗೆ ಶೇ 4 ರಿಂದ ಶೇ 12ಕ್ಕೆ ಹೆಚ್ಚಿಸ ಬೇಕು’ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪಟ್ಟು ಹಿಡಿದಿದೆ. ಗಡುವಿನೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸುವ ಬೆದರಿಕೆಯನ್ನೂ ಒಡ್ಡಿದೆ.

ಒಕ್ಕಲಿಗರ ಸಂಘದ ಆವರಣ ದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ
ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಕ್ಕಲಿಗ ನಾಯಕರು ಒಕ್ಕೊರಲಿನಿಂದ ಈ ಬೇಡಿಕೆ ಇಟ್ಟಿದ್ದಾರೆ.

ಸಭೆಯಲ್ಲಿದ್ದ ಕಂದಾಯ ಸಚಿವ ಆರ್‌. ಅಶೋಕ ಅವರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಹಕ್ಕೊತ್ತಾಯದ ಮನವಿಯನ್ನು ನೀಡಿದರು. ‘ಮೀಸಲಾತಿ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಒಕ್ಕಲಿಗ ಸಮುದಾಯದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಸಮುದಾಯದ ಪರವಾಗಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಶೋಕ ಭರವಸೆ ನೀಡಿದರು.

‘ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ 16 ರಷ್ಟಿದೆ. ಆದರೆ, ಮೀಸಲಾತಿ ಶೇ 4 ರಷ್ಟು ಮಾತ್ರ. ನಾಡಿಗೇ ಆಹಾರ ಭದ್ರತೆ ಕೊಟ್ಟಿರುವ ಸಮಾಜ ನಮ್ಮದು. ನಮ್ಮ ಸಮುದಾಯದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಾಂಗದ ಹಿತದೃಷ್ಟಿಯಿಂದ ಸರ್ಕಾರ ನಮಗೆ ಮೀಸಲಾತಿ ಹೆಚ್ಚಿಸಬೇಕು. ‌ಶೇ 15ರವರೆಗೂ ಮೀಸಲಾತಿ ಹೆಚ್ಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು’ ಎಂದು ಸರ್ಕಾರವನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.

‘ನಮ್ಮ ಸಮುದಾಯದ ಜನಸಂಖ್ಯೆಯ ಗಣತಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು ತಿರುಚಲಾಗಿದೆ. ಒಕ್ಕಲಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ 12ರಷ್ಟು ಮೀಸಲಾತಿ ಹೆಚ್ಚಿಸಬೇಕು. ಇದು ಭಿಕ್ಷೆ ಅಲ್ಲ. ನ್ಯಾಯಯುತ ಹಕ್ಕು. ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರಸರ್ಕಾರ ಘೋಷಿಸಿರುವ ಶೇ 10 ಮೀಸಲಾತಿ ನಮ್ಮ ಸಮುದಾಯಕ್ಕೆ ಸಿಗದೇ ಅನ್ಯಾಯ ಆಗಿದೆ. ಡಿಸೆಂಬರ್ 9 ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ದೇವೇಗೌಡರ ನೇತೃತ್ವದಲ್ಲಿ, ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ’ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಶೇ 16 ರಷ್ಟಿರುವ ಒಕ್ಕಲಿಗ ಸಮುದಾಯವನ್ನು ಪ್ರವರ್ಗ 3ಎಗೆ ಸೇರಿಸಿರುವ ಸರ್ಕಾರ, ಈ ಪ್ರವರ್ಗಕ್ಕೆ ಹಲವು ಸಮುದಾಯಗಳನ್ನೂ ಸೇರಿಸಿದೆ. ಈ ವರ್ಗಕ್ಕೆ ನೀಡಿರುವ ಮೀಸಲಾತಿ ಕೇವಲ ಶೇ 4ರಷ್ಟು ಮಾತ್ರ. ಇದನ್ನು ಶೇ 15ಕ್ಕೆ ಹೆಚ್ಚಿಸಬೇಕು. ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ನಗರ ಪ್ರದೇಶದ ಒಕ್ಕಲಿಗರನ್ನು ಹೊರಗಿಡಲಾಗಿದೆ. ಗ್ರಾಮೀಣ ಪ್ರದೇಶದಿಂದ ವಲಸೆ ಬಂದು ನಗರಗಳಲ್ಲಿ ಕೂಲಿ ಮಾಡುತ್ತಿರುವ ಕುಟುಂಬಗಳಲ್ಲಿನ ಮಕ್ಕಳು ಮೀಸಲಾತಿ ಯಿಂದ ವಂಚಿತರಾಗುತ್ತಿದ್ದಾರೆ. ಆರ್ಥಿಕ
ವಾಗಿ ಹಿಂದುಳಿದವರಿಗಿರುವ ಮೀಸಲಾತಿಯಲ್ಲಿ ನಗರ ಪ್ರದೇಶದ ಒಕ್ಕಲಿಗರಿಗೂ ಅವಕಾಶ ಸಿಗಬೇಕು. ಕೇಂದ್ರ ಕೂಡ ಬಿಟ್ಟು ಹೋಗಿರುವ ಒಕ್ಕಲಿಗ ಉಪ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಿಸಿದೆ. ಆ ಮೂಲಕ, ಶೇ 50ರ ಮೀಸಲಾತಿ ಮಿತಿ ಮೀರಲಾಗಿದೆ. ಅದೇ ರೀತಿ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ, ಡಬಲ್ ಎಂಜಿನ್‌ ಸರ್ಕಾರವಿದೆ. ನಮ್ಮ ಎರಡು ಬೇಡಿಕೆಗಳಲ್ಲಿ ಒಂದನ್ನು ಕೇಂದ್ರ ಈಡೇರಿಸಬೇಕು. ಮತ್ತೊಂದನ್ನು ರಾಜ್ಯ ಈಡೇರಿಸಬೇಕು’ ಎಂದರು.

ದೇವೇಗೌಡ, ಎಸ್‌ಎಂಕೆಗೆ ಗೌರವ: ‘ನಮ್ಮ ಸಮಾಜಕ್ಕೆ ದೇವೇಗೌಡ, ಎಸ್‌.ಎಂ. ಕೃಷ್ಣ ಅವರ ಕೊಡುಗೆ ಅಪಾರ. ಜ. 23 ರಂದು ಬಾಲಗಂಗಾಧರನಾಥ ಸ್ವಾಮೀಜಿಯ 10ನೇ ಪುಣ್ಯಸ್ಮರಣೆ. ಅಂದು ಅವರಿಬ್ಬರನ್ನು ಗೌರವಿಸುವ ಕಾರ್ಯಕ್ರಮ ನಿಗದಿ ಮಾಡಿದ್ದೇವೆ. ಅಷ್ಟರೊಳಗೆ ನಮ್ಮ ಬೇಡಿಕೆಯನ್ನೂ ಸರ್ಕಾರ ಈಡೇರಿಸಬೇಕು’ ಎಂದು ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.

‘ಈ ಸಭೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಇಲ್ಲ ಎಂದು ಯಾರೂ ಅಂದುಕೊಳ್ಳಬಾರದು. ಪಂಚರತ್ನ ಯಾತ್ರೆಯಲ್ಲಿರುವ ಕುಮಾರಸ್ವಾಮಿ, ನನ್ನ ಜೊತೆ 3–4 ಬಾರಿ ಮಾತನಾಡಿದ್ದಾರೆ. ದೇವೇಗೌಡರ ಆರೋಗ್ಯ ಇತ್ತೀಚೆಗೆ ಸ್ವಲ್ಪ ಏರುಪೇರಾಗುತ್ತಿದೆ. ಅವರು ಕೂಡಾ ಪತ್ರ ಬರೆದು ತಮ್ಮ ಬೆಂಬಲವ್ಯಕ್ತಪಡಿಸಿದ್ದಾರೆ’ ಎಂದರು.

ನನ್ನ ಕೈಗೆ ಪೆನ್ನು, ಪೇಪರ್ ಕೊಡಿ– ಡಿಕೆಶಿ

‘ಎಸ್.ಎಂ. ಕೃಷ್ಣ ಅವರ ನಂತರ ನನ್ನನ್ನು ಕಾಂಗ್ರೆಸ್ ಪಕ್ಷ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕೂರಿಸಿದೆ. ನನ್ನ ಸಂಘಟನೆಯ ಇತಿಹಾಸ ಒಂದು ಕಡೆಯಾದರೆ, ನಾನು ಒಕ್ಕಲಿಗ ಎಂಬ ಕಾರಣಕ್ಕೆ ಆಯ್ಕೆ ಮಾಡಿರುವುದೂ ಮತ್ತೊಂದು ಸತ್ಯ. ಆರ್. ಅಶೋಕ ಸೇರಿದಂತೆ ಇಲ್ಲಿರುವ ಸಚಿವರು ಒಕ್ಕಲಿಗ ಸಮಾಜದ ಪ್ರತಿನಿಧಿ ಆಗಿರುವುದಕ್ಕೆ ಈ ಸ್ಥಾನಕ್ಕೆ ಬಂದಿದ್ದಾರೆ. ಇದನ್ನು ನಾವೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ನಾವು ಬೇರೆಯವರ ಹಕ್ಕನ್ನು ಕೇಳುತ್ತಿಲ್ಲ. ಈ ಸಮಾಜದ ಜನಸಂಖ್ಯೆ ಎಷ್ಟಿದೆಯೋ ಅದರ ಆಧಾರದಲ್ಲಿ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಿಮ್ಮ ಕೈಯಲ್ಲಿ ಅಧಿಕಾರ ಇಲ್ಲ ದಿದ್ದರೆ ನಿಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಅಧಿಕಾರವನ್ನು ಕೊಡುವುದು, ಬಿಡುವುದು ಈ ಜನಾಂಗದ ಕೈಯಲ್ಲಿ ಮಾತ್ರ ಇದೆ. ನನ್ನ ಕೈಗೆ ಪೆನ್ನು, ಪೇಪರ್ ಕೊಡಿ. ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ನನಗೆ ಗೊತ್ತಿದೆ’ ಎಂದರು.

***

ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದು ಸಾಕು. ಅದನ್ನೇ ದೌರ್ಬಲ್ಯ ಎಂದು ತಿಳಿದುಕೊಂಡಿದ್ದರೆ, ಇನ್ನು ಸಹಿಸುವು‌ದಿಲ್ಲ. ಗಡುವಿನೊಳಗೆ ಬೇಡಿಕೆ ಈಡೇರಿಸಿದರೆ ವಿಜಯೋತ್ಸವ. ಇಲ್ಲದಿದ್ದರೆ ಹೋರಾಟದ ಕಿಚ್ಚು
- ನಂಜಾವಧೂತ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ

ಮೀಸಲಾತಿ ಪ್ರಮಾಣವನ್ನು ಶೇ 12ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಮನವಿಯನ್ನು ಸರ್ಕಾರ ಆದಷ್ಟು ಬೇಗ ಪರಿಗಣಿಸಬೇಕು. ಜ. 23 ರ ಒಳಗೆ ಸಿಹಿ ಸುದ್ದಿ ಕೊಡಬೇಕು
- ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ನಮ್ಮ ಸರ್ಕಾರ ಇರುವಾಗಲೇ ನಮ್ಮ ಸಮುದಾಯ ಎದ್ದು ನಿಂತಿದೆ. ಸಮುದಾಯದ ಪರವಾಗಿ ನಾನು ಬಂದಿದ್ದೇನೆ. ಸರ್ಕಾರದ ಪರವಾಗಿ ನಾನು ಮನವಿ ಸ್ವೀಕರಿಸಿದ್ದು, ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ
- ಆರ್‌. ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT