ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಬಿತ್ತನೆ ಬೀಜ: ಒಳನೋಟ ಪ್ರತಿಕ್ರಿಯೆಗಳು

Last Updated 22 ಮೇ 2022, 15:19 IST
ಅಕ್ಷರ ಗಾತ್ರ

‘ಕಳಪೆ ಬಿತ್ತನೆ ಬೀಜ ತಯಾರಿಕಾ ಕೇಂದ್ರಗಳಿಗೆ ಕಡಿವಾಣ ಹಾಕಿ’

‘ಮಳೆಯಾಧಾರಿತ ಬೇಸಾಯ ಮಾಡುವ ರೈತರು ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದು, ಮೊದಲೇ ಜಮೀನನ್ನು ಬಿತ್ತನೆಗಾಗಿ ತಯಾರು ಮಾಡಿರುತ್ತಾರೆ. ಮಳೆಯಾಗುವ ಮೊದಲೇ ಕೃಷಿ ಇಲಾಖೆಯಿಂದ ರೈತರಿಗೆ ಬೀಜಗಳ ಪೂರೈಕೆಯಾಗಬೇಕು. ಈ ದಿಸೆಯಲ್ಲಿ ಇಲಾಖೆಯವರು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಆದರೆ ಇಲಾಖೆಯ ಸಿಬ್ಬಂದಿಗಳಲ್ಲಿ ಹೊಂದಾಣಿಕೆಯ ಕೊರತೆಯಿಂದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗುತ್ತಲೇ ಇದೆ’.

‘ಸಮಯದ ಅಭಾವ ಹಾಗೂ ಅಗತ್ಯ ಬೀಜಗಳು ಲಭ್ಯವಿಲ್ಲದಿರುವುದರಿಂದ ರೈತರು ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಕಳಪೆ ಬೀಜ ಪಡೆದು ಮೋಸ ಹೋಗುತ್ತಿದ್ದಾರೆ. ಸರ್ಕಾರವು ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಇಲಾಖೆ ಬಲಪಡಿಸಲು ಕ್ರಮ ಕೈಗೊಳ್ಳಬೇಕು’.

–ವೀರಭದ್ರಪ್ಪ ಉಪ್ಪಿನ್, ನಿವೃತ್ತ ಅಧಿಕಾರಿ, ಪಶು ವೈದ್ಯಕೀಯ ವಿಶ್ವವಿದ್ಯಾಲಯ, ಬೀದರ್.

***

‘ಕೃಷಿ ವಿವಿಗಳಲ್ಲೇ ಬಿತ್ತನೆ ಬೀ‌ಜ ಉತ್ಪಾದನೆಯಾಗಲಿ’

‘ಸರಿಯಾದ ಸಮಯಕ್ಕೆ ಮಳೆಯಾಗದೆ, ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ಅನ್ನದಾತ ಈಗ ಕಳಪೆ ಬೀಜ ಮಾರಾಟ ಜಾಲಕ್ಕೆ ಸಿಲುಕಿ ನರಳುವಂತಾಗಿದೆ.ಕೆಲ ಖಾಸಗಿ ಕಂಪನಿಗಳು ಹಲವು ವರ್ಷಗಳಿಂದ ಕಳಪೆ ಬೀಜ ಮಾರಾಟ ಮಾಡುತ್ತಿದ್ದರೂ ಸರ್ಕಾರ ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದೆ’.

‘ಸರ್ಕಾರದ ಉದ್ದೇಶಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಕೃಷಿ ವಿಶ್ವವಿದ್ಯಾಲಯಗಳಲ್ಲೆ ಬೀಜೋತ್ಪಾದನೆ ಮಾಡಲು ಪ್ರೋತ್ಸಾಹ ನೀಡಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೇ ಪಾರದರ್ಶಕವಾಗಿ ಬಿತ್ತನೆ ಬೀಜಗಳು ರೈತರ ಕೈ ಸೇರುವಂತಾಗಬೇಕು’.

–ನಾಗರಾಜ್‌ ಆರ್ಯ, ಚನ್ನಗಿರಿ.

***

‘ಗುಣಮಟ್ಟದ ಬಿತ್ತನೆ ಬೀಜ ಸಿಗುವಂತಾಗಲಿ’

‘ರೈತರು ಈ ದೇಶದ ಬೆನ್ನೆಲುಬು. ಅವರಿಗೆ ಗುಣಮಟ್ಟದ ಬಿತ್ತನೆ ಬೀಜ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಬಿತ್ತನೆ ಬೀಜದ ಗುಣಮಟ್ಟ ಪರಿಶೀಲನೆಗೆ ಪ್ರತ್ಯೇಕ ಸಮಿತಿ ನೇಮಿಸಬೇಕು. ಖಾಸಗಿ ಕಂಪನಿಗಳ ಲಾಬಿಗೆ ಮಣಿಯದೆ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು’.

–ಬಿ.ಎಸ್‌.ಮುಳ್ಳೂರ, ಬೆಳಗಾವಿ.

***

‘ಗಾಯದ ಮೇಲೆ ಬರೆ ಎಳೆದಂತೆ’

‘ಭೂಮಿ ತಾಯಿಯನ್ನೇ ನಂಬಿರುವ ರೈತರು, ಕೃಷಿ ಚಟುವಟಿಕೆಗಾಗಿ ಅಗತ್ಯ ಹಣ ಹೊಂದಿಸಲು ಅವರಿವರ ಬಳಿ ಸಾಲ ಮಾಡಿರುತ್ತಾರೆ. ಕಳಪೆ ಬೀಜದಿಂದಾಗಿ ನಿರೀಕ್ಷಿತ ಬೆಳೆ ಸಿಗದೆ ಕಂಗಾಲಾಗುತ್ತಿದ್ದಾರೆ. ಸಾಲ ತೀರಿಸಲಾಗದೆ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ’.

‘ರೈತರು ಖಾಸಗಿ ಕಂಪನಿಗಳ ಮೇಲೆ ಅವಲಂಬನೆಯಾಗದೆ ತಾವೇ ಬಿತ್ತನೆ ಬೀಜ ತಯಾರಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಅಗತ್ಯವಿದ್ದಾಗ ಮಾತ್ರ ವೈಜ್ಞಾನಿಕ ಪದ್ಧತಿಯತ್ತ ಹೊರಳಬೇಕು. ಹಾಗಾದಾಗ ಮುಂದಿನ ಪೀಳಿಗೆಗೆ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒದಗಿಸಬಹುದು. ಈ ದಿಸೆಯಲ್ಲಿ ರೈತ ಸಮುದಾಯ ಚಿಂತಿಸಬೇಕು’.

‘ಕಳಪೆ ಬಿತ್ತನೆ ಬೀಜ ಉತ್ಪಾದಿಸುವ ಹಾಗೂ ಬಿತ್ತನೆ ಬೀಜದ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕು’.

–ಡಿ.ಮಮತಾ, ಶಾಂತಿನಗರ, ದೊಡ್ಡಬಳ್ಳಾಪುರ.

****

‘ಸರ್ಕಾರ ಕಠಿಣ ಕಾಯ್ದೆ ರೂಪಿಸಲಿ’

‘ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡುವ ಕಂಪನಿಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಆದ್ಯ ಕರ್ತವ್ಯ. ಇದಕ್ಕಾಗಿ ಕಠಿಣ ಕಾಯ್ದೆ ರೂಪಿಸಲು ಮುಂದಾಗಬೇಕು. ಕಾಯ್ದೆ ಜಾರಿಗೊಂಡಾಗ ರೈತರು ನೆಮ್ಮದಿಯಿಂದ ಜೀವನ ಸಾಗಿಸಬಹುದು. ಇಲ್ಲದಿದ್ದರೆ ಮತ್ತಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳಬಹುದು’.

ಮಾರುತಿ ಪ್ರಸಾದ್‌, ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮೈಸೂರು.

****

‘ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ’

‘ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡುವವರನ್ನು ಪತ್ತೆಹಚ್ಚಿ ಜೀವಾವಧಿ ಶಿಕ್ಷೆ ವಿಧಿಸಬೇಕು. ಅವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು’.

‘ಅನ್ನದಾತರಿಗೆ ಮೋಸ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಕಾಳಸಂತೆಯಲ್ಲಿ ಬಿತ್ತನೆ ಬೀಜ ಮಾರುವವರನ್ನೂ ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಆಗಬೇಕು’‍.

–ಕೆ.ಎಸ್‌.ಕುಮಾರಸ್ವಾಮಿ, ಮಾರುತಿ ನಗರ, ತುಮಕೂರು.

***

‘ಕೃಷಿ ಮತ್ತು ರೈತರ ಸ್ಥಿತಿಗತಿ ಸುಧಾರಿಸಲಿ’

‘ರೈತ ಇಡೀ ದೇಶಕ್ಕೆ ಅನ್ನ ನೀಡುವ ಶ್ರೀಮಂತ. ಆದರೆ ಆತನ ಬದುಕು ಮಾತ್ರ ಅತ್ಯಂತ ಶೋಚನೀಯ. ಕಳಪೆ ಬೀಜಗಳ ಬಿತ್ತನೆಯಿಂದ ಇಳುವರಿ ಕುಂಠಿತಗೊಂಡು ಆತ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾನೆ. ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರ ಆತ್ಮಹತ್ಯೆ ಸುದ್ದಿಗಳೂ ಈಗ ಸಾಮಾನ್ಯವಾಗಿವೆ’.

‘ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಅತಿಯಾದ ಬಳಕೆಯಿಂದಮಣ್ಣಿನ ಸತ್ವ ನಾಶವಾಗುತ್ತದೆ. ಇದರ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಯಾವ ಕಾಲದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದರ ಕುರಿತು ತರಬೇತಿ ನೀಡಬೇಕು. ಕಳಪೆ ಬೀಜಗಳನ್ನು ತಯಾರಿಸುವ ಕಂಪನಿಗಳನ್ನು ನಿರ್ಬಂಧಿಸಬೇಕು’.

–ರವಿಕುಮಾರ ಜಾಧವ (ಸೋನೆ), ಹಂಪಿ.

****

‘ಕಂಪನಿಗಳ ಧನದಾಹ ನಿಲ್ಲಲಿ’

‘ಕಂಪನಿಗಳ ಧನದಾಹ ಹಾಗೂ ಸ್ವಾರ್ಥ ಮನಸ್ಥಿತಿಯಿಂದಾಗಿ ಕಳಪೆ ಬಿತ್ತನೆ ಬೀಜಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ರೈತರ ಬದುಕನ್ನು ನಾಶಪಡಿಸುತ್ತಿವೆ. ಕೆಲ ಕಪಟ ಅಧಿಕಾರಿಗಳು ಇಂತಹ ಧನದಾಹಿಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ’.

‘ಬಣ್ಣದ ಮಾತುಗಳಿಂದ, ಜಾಹೀರಾತುಗಳಿಂದ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಾಜಾರೋಷವಾಗಿ ಮಾರಾಟ ಮಾಡುವ ಮೂಲಕ ಮುಗ್ಧ ರೈತರನ್ನು ವಂಚಿಸಲಾಗುತ್ತಿದೆ. ಇಂತಹ ದುರುಳರನ್ನು ಸದೆಬಡಿಯಲು ಸರ್ಕಾರಕ್ಕೆ ಆಗದಿರುವುದು ವಿಪರ್ಯಾಸ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಕೃಷಿ ಇಲಾಖೆಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಲಿ’.

–ಜಿ.ಮಂಜುಳಾ, ಕೋರಮಂಗಲ, ಬೆಂಗಳೂರು.

****

‘ಹೈಬ್ರೀಡ್‌ ಹಾವಳಿ ನಿಲ್ಲಲಿ’

‘ಮುಂಗಾರು ಆರಂಭವಾದಾಗ ಅತಿವೃಷ್ಠಿ ಸೃಷ್ಟಿಯಾದರೆ, ಮತ್ತೊಂದೆಡೆ ಅನಾವೃಷ್ಠಿಯಿಂದ ಕೃಷಿಕರು ಕಂಗಾಲಾಗುತ್ತಿದ್ದಾರೆ. ದೇಸಿಯ ಕೃಷಿ ಬೆಳೆಯ ಬೀಜಗಳ ಜಾಗದಲ್ಲಿ ಹೈಬ್ರೀಡ್ ತಳಿಗಳ ಹಾವಳಿಯಿಂದ ರೈತರು ನೊಂದಿದ್ದಾರೆ. ಬಿತ್ತನೆ ಮಾಡುವ ಸಮಯಕ್ಕೆ ಸರಿಯಾಗಿ ಬೀಜಗಳು ಸಿಗುತ್ತಿಲ್ಲ. ರಸಗೊಬ್ಬರವೂ ಪೂರೈಕೆಯಾಗುತ್ತಿಲ್ಲ. ಕಳ್ಳರ ಸಂತೆಯಲ್ಲಿ, ಕೊಳ್ಳುಬಾಕ ಸಂಸ್ಕೃತಿಯ ಮಾರುಕಟ್ಟೆಯಲ್ಲಿ ಸಿಲುಕಿ ರೈತರು ನರಳುತ್ತಿದ್ದಾರೆ’.

‘ಕಳಪೆ ಬೀಜಗಳಿಂದಾಗಿ ಆಗುವ ನಷ್ಟ ತುಂಬಿಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ರೈತರು ಆಳುವವರನ್ನು ನಂಬುವ ಸ್ಥಿತಿಯಲ್ಲಿಲ್ಲ. ಸರ್ಕಾರವು ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಮಾಡಬೇಕು’.

–ಎಸ್‌.ಸುಧಾ, ಚಿಕ್ಕಮಗಳೂರು.

***

‘ಜಾಗೃತ ದಳ ಬಲಪಡಿಸಿ’

‘ನಕಲಿ ಬಿತ್ತನೆ ಬೀಜ, ನಕಲಿ ರಸಗೊಬ್ಬರ ಮತ್ತು ನಕಲಿ ಕೀಟನಾಶಕ ತಡೆಗಟ್ಟಲು ಮೊದಲು ಜಾಗೃತ ದಳವನ್ನು ಬಲಪಡಿಸಬೇಕು. ಇದಕ್ಕಾಗಿ ಸರ್ಕಾರವು 300ರ ಬದಲು 3000 ಕೃಷಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು’.

-ತಪಶ್ವಿನಿ ಜಗದೀಶ,ಶಹಾಪುರ, ಯಾದಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT