ಭಾನುವಾರ, ಆಗಸ್ಟ್ 14, 2022
26 °C
ನೆರವು ಪ್ರಕಟಿಸಿದ ಮೊದಲ ರಾಜ್ಯ ಕರ್ನಾಟಕ: ಅಂದಾಜು ₹300 ಕೋಟಿ ಅಗತ್ಯ

ಕೋವಿಡ್‌ ಸಾವು: ಬಡವರಿಗೆ ₹ 1 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಶ್ರಮಜೀವಿ ವರ್ಗಕ್ಕೆ ಎರಡು ಆರ್ಥಿಕ ಪ್ಯಾಕೇಜ್‌ಗಳನ್ನು ಪ್ರಕಟಿಸಿದ ರಾಜ್ಯ ಸರ್ಕಾರ, ಕುಟುಂಬವನ್ನು ಆರ್ಥಿಕವಾಗಿ ಸಲುಹುವ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ಅಂತಹವರ ಅವಲಂಬಿತರಿಗೆ ತಲಾ ₹1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.

ಬಿಪಿಎಲ್‌ ಕುಟುಂಬದವರಿಗೆ ಹೀಗೆ ಪರಿಹಾರ ನೀಡುವ ಯೋಜನೆ ಘೋಷಿಸಿರುವ ಮೊದಲ ರಾಜ್ಯ ಕರ್ನಾಟಕ.  30 ಸಾವಿರ ಕುಟುಂಬ
ಗಳಿಗೆ ಇದರ ಪ್ರಯೋಜನ ಸಿಗಲಿದ್ದು, ಇದಕ್ಕಾಗಿ ₹300 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ನಡೆಸಿದ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ನಿರ್ಧಾರ ಪ್ರಕಟಿಸಿದರು.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬದವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೀಮಿತವಾಗುವಂತೆ ಈ ಪರಿಹಾರ ಸಿಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಯಾವುದೇ ಬಿಪಿಎಲ್‌ ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದರೂ, ಆ ಕುಟುಂಬದ ದುಡಿಯುವ– ವಯಸ್ಕರ ಹೆಸರಿನಲ್ಲಿ ಪರಿಹಾರದ ಮೊತ್ತ ನೀಡಲಾಗುತ್ತದೆ ಎಂದು ತಿಳಿಸಿದರು.

‘ಕೋವಿಡ್‌ನಿಂದಾಗಿ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ತುತ್ತಾಗಿವೆ. ಅವರ ನೆರವಿಗಾಗಿ ಈ ಪರಿಹಾರ ನೀಡಲಾಗುತ್ತಿದೆ. ಈ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ’ ಎಂದರು.

‘ದೇಶದಲ್ಲಿ ಮೊದಲ ಬಾರಿಗೆ ಈ ರೀತಿಯ ಪರಿಹಾರ ನೀಡಲಾಗುತ್ತಿದೆ. ಬೇರೆ ಯಾವುದೇ ರಾಜ್ಯಗಳಲ್ಲೂ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಕೋವಿಡ್‌ ಇರುವವರೆಗೆ ಈ ಯೋಜನೆಯನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. ಕೋವಿಡ್ ಲಸಿಕೆಗಾಗಿ ನಿಗದಿ ಮಾಡಿದ್ದ ಹಣವನ್ನು ಇದಕ್ಕೆ ಬಳಸಲಾಗುವುದು. ಕೇಂದ್ರ ಸರ್ಕಾರ ಲಸಿಕೆ ಖರೀದಿಸಿ ಕೊಡುವುದರಿಂದ, ರಾಜ್ಯಕ್ಕೆ ಆರ್ಥಿಕ ಹೊರೆ ಕಡಿಮೆ ಆಗಲಿದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಕೋವಿಡ್‌ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ದುಡಿಯುವ ವರ್ಗಕ್ಕೆ ಯಡಿಯೂರಪ್ಪ ಅವರು ಕ್ರಮವಾಗಿ ₹1,250 ಕೋಟಿ ಮತ್ತು ₹500 ಕೋಟಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಪ್ರಕಟಿಸಿದ್ದಾರೆ.

ಪ್ರವಾಸಿ ಗೈಡ್‌ಗಳಿಗೆ ₹5 ಸಾವಿರ ಪರಿಹಾರ:

ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಪ್ರವಾಸಿ ಗೈಡ್‌ಗಳಿಗೆ ಕೋವಿಡ್‌ ಸಂಕಷ್ಟದ ಕಾರಣ ತಲಾ ₹ 5,000 ಪರಿಹಾರ ನೀಡಲು ನಿರ್ಧರಿಸಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ತಿಳಿಸಿದ್ದಾರೆ.

ಇಲಾಖೆಯಲ್ಲಿ ನೋಂದಾಯಿತ 384 ನೋಂದಾಯಿತ ಪ್ರವಾಸಿ ಗೈಡ್‍ಗಳಿದ್ದು, ಅವರೆಲ್ಲ ಸಂಕಷ್ಟದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಹೋಟೆಲ್‍ ಕಾರ್ಮಿಕರಿಗೆ ತಲಾ ₹3,000 ಪರಿಹಾರ ನೀಡಲು ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಲಿದೆ ಎಂದು ಸಚಿವರು ಭರವಸೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು