ಬೆಂಗಳೂರು: ‘ದೂರದರ್ಶನ ಅಥವಾ ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಒದಗಿಸಲು ರಾಜ್ಯದಲ್ಲಿರುವ 5,766 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಉಪಕರಣ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಮುಖ್ಯಮಂತ್ರಿಯ ಸಲಹೆಗಾರರಾದ ಪ್ರಶಾಂತ್ ಪ್ರಕಾಶ್ ಮತ್ತು ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಗ್ರಾಮೀಣ ಮಕ್ಕಳ ಶಿಕ್ಷಣ ಮುಂದುವರಿಕೆ ಮತ್ತು ಕಲಿಕಾ ನಿರಂತರತೆಗೆ ಅನುಕೂಲವಾ
ಗುವ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.
‘ಕೋವಿಡ್ ಕಾರಣದಿಂದ ಶಾಲೆಗಳು ಆರಂಭ ಆಗದೇ ಇರುವುದರಿಂದ ಡಿಜಿಟಲ್ ಶಿಕ್ಷಣ ಇಲ್ಲವೇ ಆನ್‌ಲೈನ್‌ನಂಥ ಪರ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳನ್ನು ತಲುಪಬೇಕಾಗಿದೆ’ ಎಂದರು.
‘ಶಾಲೆಗಳಲ್ಲಿನ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಉತ್ತಮಗೊಳಿಸುವುದು ಸೇರಿದಂತೆ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆ ರೂಪಿಸುವ ಕುರಿತಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾವಧಿ ಮುಗಿದ ಕೂಡಲೇ ಆರ್‌ಡಿಪಿಆರ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶಿಕ್ಷಣ ಇಲಾಖೆಯ ಕಾರ್ಯಪಡೆ ಈ ಎಲ್ಲ ಅಂಶಗಳನ್ನು ಅವಲೋಕಿಸಿ ಕ್ರಿಯಾಯೋಜನೆ ರೂಪಿಸಲಿದೆ’ ಎಂದರು.
‘ಮೊಬೈಲ್ ನೆಟ್‌ವರ್ಕ್– ಸಕಾರಾತ್ಮಕ ಸ್ಪಂದನೆ’
‘ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ನಿರಂತರತೆಗೆ ಅನುಕೂಲವಾಗುವಂತೆ ಅಂತರ್ಜಾಲ ನೆಟ್‌ವರ್ಕ್ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಮೊಬೈಲ್ ನೆಟ್-ವರ್ಕ್ ಪೂರೈಕೆದಾರ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಜೊತೆಗೂ ಚರ್ಚಿಸಿದ್ದೇನೆ’ ಎಂದು ಸುರೇಶ್‌ಕುಮಾರ್ ತಿಳಿಸಿದ್ದಾರೆ.
‘ಗ್ರಾಮೀಣ ಪ್ರದೇಶಗಳು ಮತ್ತು ಮಳೆಗಾಲ ಆಗಿರುವುದರಿಂದ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳಿಗೆ ಆನ್‌ಲೈನ್ ಬೋಧನೆಗೆ, ಇಲ್ಲವೇ ದೂರದರ್ಶನ ಚಂದನಾ ಪಾಠಗಳಿಗೆ ತೊಂದರೆ ಆಗಿದೆ. ಈ ಕುರಿತು ತ್ವರಿತವಾಗಿ ಗಮನಹರಿಸುವ ಅಗತ್ಯವಿದ್ದು, ಮಕ್ಕಳ ಬೋಧನಾ ವಿಧಾನದ ಗುಣಮಟ್ಟ ಕಾಪಾಡಬೇಕಾಗಿದೆ. ಮುಖ್ಯಮಂತ್ರಿ ಕೂಡಾ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.