ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪಿಯುಗೆ ಆನ್‌ಲೈನ್‌ ಪರೀಕ್ಷೆ

Last Updated 11 ಜೂನ್ 2021, 18:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರಣ ಪ್ರಥಮ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಉತ್ತೀರ್ಣ ಮಾಡಲಾಗುವುದು ಎಂದು ಘೋಷಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯು, ಈಗ ಆನ್‌ಲೈನ್ ಮೂಲಕ ಪರೀಕ್ಷೆ ನೀಡಿ ಮೌಲ್ಯಮಾಪನ ಮಾಡಲು ಮುಂದಾಗಿದೆ.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಗೆ ದಾಖಲಾತಿ ನೀಡಲು ಹಾಗೂ ವಿದ್ಯಾರ್ಥಿ ವೇತನದ ಸೌಲಭ್ಯಗಳನ್ನು ಪಡೆಯಲು ವಿದ್ಯಾರ್ಥಿಗಳ ಫಲಿತಾಂಶವನ್ನು ಅಂಕಗಳ ಮಾದರಿಯಲ್ಲಿ ನೀಡುವ ಅಗತ್ಯವಿದೆ. ಹಾಗಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆ ಸಮರ್ಥನೆ ನೀಡಿದೆ.

ಸುತ್ತೋಲೆ:

ಪ್ರತಿ ಮೂರು ವಿಷಯಕ್ಕೆ ಒಂದು ಪ್ರಶ್ನೆ ಪತ್ರಿಕೆಯಂತೆ ಒಟ್ಟು ಆರು ವಿಷಯಗಳಿಗೆ ಎರಡು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಇಲಾಖಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದರ ಲಿಂಕ್ ಅನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳಿಸಲಾಗಿದೆ. ವಿದ್ಯಾರ್ಥಿಗಳು ಮೊದಲ ಪ್ರಶ್ನೆಪತ್ರಿಕೆಗೆ ಜೂ. 20ರೊಳಗೆ, ಎರಡನೇ ಪ್ರಶ್ನೆ ಪತ್ರಿಕೆಗೆ ಜೂ.26ರಿಂದ ಜು.5ರೊಳಗೆ ತಮ್ಮದೇ ಹಾಳೆಯಲ್ಲಿ ಉತ್ತರ ಬರೆದು ಅದನ್ನು ಸ್ಕ್ಯಾನ್‌ ಮಾಡಿ ತಮ್ಮ ಕಾಲೇಜಿಗೆ ವಾಟ್ಸ್‌ಆ್ಯಪ್‌, ಇ-ಮೇಲ್ ಅಥವಾ ಅಂಚೆ ಮೂಲಕ ಅಥವಾ ಇನ್ಯಾವುದೇ ಮಾರ್ಗದ ಮೂಲಕ ಕಳುಹಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.

30 ಅಂಕದ ಪ್ರಶ್ನೆ:

ಪ್ರತಿ ವಿಷಯಕ್ಕೆ 30 ಅಂಕದ ಪ್ರಶ್ನೆಯಂತೆ ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಷಯಗಳಿಗೆ 90 ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಗಳು ಕಳುಹಿಸಿದ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ವಿಷಯದ ಉಪನ್ಯಾಸಕರು ಮೊದಲ ಉತ್ತರ ಪತ್ರಿಕೆಯನ್ನು ಜೂ.20ರಿಂದ 25ರೊಳಗೆ, ಎರಡನೇ ಉತ್ತರ ಪತ್ರಿಕೆಯನ್ನು ಜು.6 ರಿಂದ 10ರೊಳಗೆ ಮೌಲ್ಯಮಾ‍ಪನ ಮಾಡಿ ಮುಗಿಸಬೇಕು. ನಂತರ ವಿದ್ಯಾರ್ಥಿ ಪಡೆದ ಅಂಕಗಳ ಜತೆಗೆ ಆಂತರಿಕ ಮೌಲ್ಯಮಾಪನದ (ಇಂಟರ್ನಲ್ ಅಸೆಸ್‌ಮೆಂಟ್‌) ಅಂಕ ಸೇರಿಸಿ ಫಲಿತಾಂಶವನ್ನು ಇಲಾಖೆ ಸೂಚಿಸಿದ ಮಾದರಿಯಲ್ಲಿ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯ (ಎಸ್‌ಎಟಿಎಸ್) ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಈ ಆನ್‌ಲೈನ್ ಪರೀಕ್ಷೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಇಲಾಖೆಯ ಎಲ್ಲ ಜಿಲ್ಲೆಗಳ ಜಿಲ್ಲಾ ಉಪನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ನಿರ್ದೇಶಕಿ ಸ್ನೇಹಲ್ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ಅಸಮಾಧಾನ:

‘ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಎಂದ ಮೇಲೆ ಮೌಲ್ಯಮಾಪನ ಮಾಡುವ ಅಗತ್ಯವೇನಿದೆ? ಈಗ ಎಲ್ಲರೂ ಮನೆಯಲ್ಲಿಯೇ ಪರೀಕ್ಷೆ ಬರೆಯಬೇಕಾಗಿರುವುದರಿಂದ ಎಲ್ಲರ ಉತ್ತರವೂ ಒಂದೇ ರೀತಿಯದ್ದಾಗಿರಲಿದೆ. ಎಲ್ಲರಿಗೂ ಸಮಾನ ಅಂಕ ನೀಡಬೇಕಾಗುತ್ತದೆ. ಇದೊಂದು ವ್ಯರ್ಥ, ಅವೈಜ್ಞಾನಿಕ ಕ್ರಮ‘ ಎಂದು ಕೆಲವು ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT