ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಳ ನವೀಕರಣಕ್ಕೆ ಆನ್‌ಲೈನ್‌ ವ್ಯವಸ್ಥೆ’

‘ರುಪ್ಸಾ’ ಪದಾಧಿಕಾರಿಗಳ ಜೊತೆ ಶಿಕ್ಷಣ ಸಚಿವರ ಸಭೆ
Last Updated 6 ಜನವರಿ 2021, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಶೈಕ್ಷಣಿಕ ಸಾಲಿನಿಂದ ಖಾಸಗಿ ಶಾಲೆಗಳ ವಾರ್ಷಿಕ ನವೀಕರಣವನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ಹೇಳಿದರು.

ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘ (ರುಪ್ಸಾ) ಮುಂದಿಟ್ಟ ವಿವಿಧ ಬೇಡಿಕೆಗಳ ಕುರಿತಂತೆ ಸಂಘಟನೆಯ ಪ್ರತಿನಿಧಿಗಳ ಜೊತೆ ಬುಧವಾರ ಚರ್ಚೆ ನಡೆಸಿ‌ದ ಸಚಿವರು, ಆನ್‌ಲೈನ್‌ ನವೀಕರಣ ವ್ಯವಸ್ಥೆ ಅಳವಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ನವೀಕರಣ ಪ್ರಕ್ರಿಯೆಯಲ್ಲಿ‌ ಸುರಕ್ಷತಾ ಕ್ರಮಗಳು ಕಡ್ಡಾಯ. ಅವುಗಳನ್ನು ಆಡಳಿತ ಸಂಸ್ಥೆಗಳು ಪಾಲಿಸಬೇಕು. ಈಗಾಗಲೇ ಮೂರು ತಿಂಗಳ ಕಾಲಾವಕಾಶ ನೀಡಿ ನವೀಕರಿಸಲು ಅನುಮತಿ ನೀಡಲಾಗಿದೆ. ಸುರಕ್ಷತಾ‌ ಕ್ರಮಗಳನ್ನು ಅನುಸರಿಸದ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಆದರೂ, ವಿಷಯವನ್ನು‌ ಸಹಾನುಭೂತಿಯಿ‌ಂದ ಪರಿಶೀಲಿಸಲಾಗುವುದು’ ಎಂದರು.

ಆರ್‌ಟಿಇ ಅನುದಾನ ನೀಡಿಕೆ: ನಿಯಮಗಳ ಪ್ರಕಾರ ಸೆಪ್ಟೆಂಬರ್ ಮತ್ತು ಜನವರಿ ತಿಂಗಳಲ್ಲಿ ಆರ್‌ಟಿಇ ಶುಲ್ಕ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ‘ಶಿಕ್ಷಕರ ಕಲ್ಯಾಣ‌ ನಿಧಿ’ಯಿಂದ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರ ಹಣಕಾಸು ಸಚಿವರಿಗೆ ಪತ್ರ: ಕೊರೊನಾ ಸಂಕಷ್ಟದಿಂದ ಸಾಲ ಮರುಪಾವತಿ ಕಷ್ಟವಾಗಿದ್ದು, ಇಎಂಐ ಮುಂದೂಡಲು ಕ್ರಮ ತೆಗೆದುಕೊಳ್ಳಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಇದು ಕೇಂದ್ರದ ವ್ಯಾಪ್ತಿಗೆ ಒಳಪಡುವ ವಿಷಯ, ಹೀಗಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದೂ ಸಚಿವರು ಹೇಳಿದರು.

ಶಾಲೆಗಳು ಅನುದಾನ ವ್ಯಾಪ್ತಿಗೆ: ‘1995–2000 ಅವಧಿಯಲ್ಲಿ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂಬುದು ಸಹ ಶಿಕ್ಷಣ ಇಲಾಖೆಯ ನಿಲುವು. ಈ ಬಗ್ಗೆ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು’ ಎಂದೂ ಸಚಿವರು ಹೇಳಿದರು.

ಇಲಾಖೆಯ ಆಯುಕ್ತ ಅನ್ಬುಕುಮಾರ್, ಹಿರಿಯ ಅಧಿಕಾರಿಗಳು, ರುಪ್ಸಾ‌ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಸಂಘಟನೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT