ಮಂಗಳವಾರ, ಜುಲೈ 27, 2021
21 °C

ಮಾನ, ಮರ್ಯಾದೆ ಇದ್ದರೆ ಯಡಿಯೂರಪ್ಪ ತಕ್ಷಣ ಕುರ್ಚಿ ಬಿಡಬೇಕು– ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಬೆಳ್ಳಂದೂರು ಡಿನೋಟಿಫೈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅಧಿಕಾರದಲ್ಲಿದ್ದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲಿದೆ. ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ’ ಎಂದರು.

‘ಮಾನ ಮಾರ್ಯದೆ ಇದ್ದರೆ ಯಡಿಯೂರಪ್ಪ ಕುರ್ಚಿ ಬಿಡಬೇಕು. ಸುಪ್ರೀಂ ಕೋರ್ಟ್‌ಗೆ ಬೇಕಾದರೆ ಹೋಗಲಿ. ಕುರ್ಚಿಯಿಂದ ಕೆಳಗಿಳಿದು ಅಲ್ಲಿ ಹೋರಾಟ ಮಾಡಲಿ’ ಎಂದೂ ಹೇಳಿದರು.

‘ರಾಜೀನಾಮೆ ಕೊಡುವುದಿಲ್ಲ ಎಂದು ಭಂಡತನ ಪ್ರದರ್ಶಿಸಿದರೆ ನಾವು ಪಕ್ಷದಡಿ ಚರ್ಚೆ ಮಾಡಿ ಹೋರಾಟ ರೂಪಿಸುತ್ತೇಬೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ವಾರೆಂಟ್ ಜಾರಿ ಆಗಬಹುದು. ಮುಖ್ಯಮಂತ್ರಿ ಬಂಧನ ಕೂಡ‌ ಮಾಡಬಹುದು. ಈ ಪ್ರಕರಣ ದೊಡ್ಡ ಮಟ್ಟದ ಅಕ್ರಮ’ ಎಂದೂ ಹೇಳಿದರು.

‘ಕಾನೂನು ಬಗ್ಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಕ್ಷಣವೂ ಸ್ಥಾನದಲ್ಲಿ ಕುಳಿತುಕೊಳ್ಳಬಾರದು. ಬಲವಂತವಾಗಿ ಬಿಜೆಪಿ ನಾಯಕರು ಕ್ರಮ ತೆಗೆದುಕೊಳ್ಳಬೇಕು. ತನಿಖೆಯಲ್ಲಿ ಏನೂ ಇಲ್ಲವೆಂದಾದರೆ ಮತ್ತೆ ಮುಖ್ಯಮಂತ್ರಿ ಆಗಲಿ. ನಮ್ಮದೇನೂ ಅಭ್ಯಂತರವಿಲ್ಲ’ ಎಂದರು.

‘ದೇವರಬೀಸನಹಳ್ಳಿ, ವರ್ತೂರು, ವೈಟ್ ಫೀಲ್ಡ್‌ನಲ್ಲಿ ಐಟಿ ಕಾರಿಡಾರ್‌ಗೆ 126 ಎಕರೆ ಭೂಮಿಯನ್ನು 2010–11ರಲ್ಲಿ ಸ್ವಾಧೀನ ಮಾಡಲಾಗಿದೆ. ಸಕಾರಣಗಳಿದ್ದರೆ ಡಿನೊಟಿಫೈ ಮಾಡಬಹುದು. ಕೆಐಎಡಿಬಿ ಸ್ವಾಧೀನಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಡಿನೋಟಿಫೈ ಮಾಡಲಾಗಿದೆ. ಇದು ಸಂಪೂರ್ಣ ಕಾನೂನುಬಾಹಿರ. ಹೀಗಾಗಿ, ಈ ಡಿನೋಟಿಫೈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ’ ಎಂದೂ ದೂರಿದರು.

‘ಯಡಿಯೂರಪ್ಪ ಅವರನ್ನು ಸ್ಥಾನದಿಂದ ಇಳಿಸಲು ಚರ್ಚೆ ನಡೆಯುತ್ತಿದೆ. ಇದು ಅವರ ಹೈಕಮಾಂಡ್‌ಗೆ ದೊಡ್ಡ ಅಸ್ತ್ರ ಸಿಕ್ಕಂತೆ. 2011 ರಲ್ಲೂ  ಇದೇ ರೀತಿಯ ಪ್ರಕರಣ ಅವರ ವಿರುದ್ಧ ಇತ್ತು. ಆಗ ಅವರಿಗೆ ಭಂಡತನ ಇತ್ತು. ಆಗ ಅವರು ರಾಜೀನಾಮೆ ನೀಡಿರಲಿಲ್ಲ. ಆದರೆ, ಈಗ ಮೆತ್ತಗಾಗಿ ಬಿಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನೀಡುತ್ತಾರಾ ನೋಡಬೇಕು’ ಎಂದರು.

‘ನಾ ಕಾವೂಂಗಾ ಕಾನೇ ದೂಂಗಾ ಎಂದು ಮೋದಿ ಹೇಳುತ್ತಾರೆ. ಇದರ ಪಾಲನೆಯಾಗಬೇಕಲ್ಲ. ಇದು ತುಂಬಾ ಗಂಭೀರ ಪ್ರಕರಣ. ಹೈಕೋರ್ಟ್ ಮಹತ್ವದ ಆದೇಶ  ಕೊಟ್ಟಿದೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು