ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿಗೆ ಒತ್ತಾಯ; ಪಂಚಮಸಾಲಿ ಶಕ್ತಿಪ್ರದರ್ಶನ ಇಂದು

ಬೆಂಗಳೂರಿನಲ್ಲಿ ಮಹಾ ರ‍್ಯಾಲಿ
Last Updated 20 ಫೆಬ್ರುವರಿ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ್ಗ 2ಎ ಮೀಸಲಾತಿಗೆ ಒತ್ತಾಯಿಸಿ ಬೃಹತ್‌ ಪಾದಯಾತ್ರೆ ನಡೆಸಿದ ಲಿಂಗಾಯತ ಪಂಚಮಸಾಲಿ ಸಮುದಾಯವು ನಗರದಲ್ಲಿ ಭಾನುವಾರ ಮಹಾರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ 38 ದಿನಗಳ ಪಾದಯಾತ್ರೆ ಶನಿವಾರ ಅಂತಿಮಗೊಂಡಿದ್ದು, ನಗರದ ಅರಮನೆ ಮೈದಾನದಲ್ಲಿ 21ರಂದು ಮಹಾರ‍್ಯಾಲಿ ಮೂಲಕ ಮುಕ್ತಾಯಗೊಳ್ಳಲಿದೆ. ಸುಮಾರು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ಹೇಳಿದ್ದಾರೆ.

2 ಲಕ್ಷ ಆಸನ: ಎರಡು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಇದಕ್ಕಿಂತ ಹೆಚ್ಚು ಜನ ಸೇರಿದರೂ ಕುಳಿತುಕೊಳ್ಳಲು ತೊಂದರೆಯಾಗದಂತೆ ಮ್ಯಾಟ್‌ಗಳನ್ನು ಹಾಕಲಾಗಿದೆ. ಒಟ್ಟು ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಮಧ್ಯದಲ್ಲಿ ಅತಿಗಣ್ಯರಿಗೆ ಅಂದರೆ ಜನಪ್ರತಿನಿಧಿಗಳಿಗೆ, ಬಲ ಮತ್ತು ಎಡಭಾಗದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪದಾಧಿಕಾರಿಗಳಿಗೆ ಮೀಸಲಿಡಲಾಗಿದೆ.

‘ಮಹಾರ‍್ಯಾಲಿಯಲ್ಲಿ ಹತ್ತು ಲಕ್ಷ ಜನ ಸೇರಿದರೂ ಊಟದ ಕೊರತೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಉತ್ತರ ಕರ್ನಾಟಕದಿಂದ ನಮ್ಮ ಸಮಾಜದವರು 2.5 ಲಕ್ಷ ರೊಟ್ಟಿ ತಂದಿದ್ದಾರೆ. ಜೊತೆಗೆ ಪಲಾವ್ ಮತ್ತು ಮಜ್ಜಿಗೆ ನೀಡಲಾಗುತ್ತದೆ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಮಾ.4ರವರೆಗೆ ಗಡುವು:‘ಸುಮಾರು 600 ಕಿ.ಮೀ. ಪಾದಯಾತ್ರೆಯು ಮುಕ್ತಾಯವಾಗಿದೆ. ಆದರೂ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೀಸಲಾತಿಗಾಗಿ ಮಹಾರ‍್ಯಾಲಿಯಲ್ಲಿ ಮತ್ತೊಮ್ಮೆ ಒತ್ತಾಯಿಸಲಾಗುವುದು. ನಂತರ ವಿಧಾನಸೌಧದವರೆಗೆ ತೆರಳಿ ಧರಣಿ ನಡೆಸಲಾಗುವುದು. ಸರ್ಕಾರಕ್ಕೆ ಮಾ.4ರವರೆಗೆ ಗಡುವು ನೀಡಲಾಗುತ್ತದೆ. ಒಪ್ಪದಿದ್ದರೆ ಮಾ.5ರಿಂದ ವಿಧಾನಸೌಧ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪುನರುಚ್ಚರಿಸಿದರು.

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ:ನಗರದ ಶಿವನಗರದಿಂದ ಶನಿವಾರ ಪಾದಯಾತ್ರೆ ಆರಂಭಗೊಂಡು ಸ್ವಾತಂತ್ರ್ಯ ಉದ್ಯಾನದವರೆಗೆ ಸಾಗಿತು. ನಂತರ, ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಪಾದಯಾತ್ರಿಗಳು, ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೊನೆಗೆ, ಅರಮನೆ ಮೈದಾನ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT