ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಸಂಘರ್ಷ: ಮಾಜಿ ಸಭಾಪತಿಗಳು ಏನಂತಾರೆ?

Last Updated 15 ಡಿಸೆಂಬರ್ 2020, 16:02 IST
ಅಕ್ಷರ ಗಾತ್ರ

ಸದನದ ಗೌರವ ಮಣ್ಣುಪಾಲಾಗಿದೆ

ಶತಮಾನದ ಇತಿಹಾಸವಿರುವ ವಿಧಾನ ಪರಿಷತ್‌ನ ಗೌರವ ಮಂಗಳವಾರದ ಘಟನೆಯಿಂದ ಮಣ್ಣುಪಾಲಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಲ್ಲಿ ಇರುವ ಎಲ್ಲರೂ ಇದಕ್ಕೆ ಕಾರಣ. ಹಿಂದಿನ ಅಧಿವೇಶನದಲ್ಲಿ ಡಿಸೆಂಬರ್‌ 15ರವರೆಗೆ ಕಲಾಪ ನಡೆಸಲು ಸರ್ಕಾರ ಸಿದ್ಧವಿದ್ದಾಗ ಕೆಲವು ಸದಸ್ಯರ ಒತ್ತಡಕ್ಕೆ ಮಣಿದು ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದ್ದು ಸಭಾಪತಿಯವರು ಮಾಡಿದ ತಪ್ಪು. ಪುನಃ ಕಾರ್ಯದರ್ಶಿಯ ಮೂಲಕ ಅಧಿವೇಶನ ಕರೆಸಿದ್ದು ಸರ್ಕಾರದ ತಪ್ಪು. ಸಭಾಪತಿ ಹಾಜರಿದ್ದಾಗಲೂ ಉಪ ಸಭಾಪತಿಯವರು ಪೀಠ ಏರಿ ಕುಳಿತಿದ್ದು, ಉಪ ಸಭಾಪತಿಯವರನ್ನು ದೈಹಿಕವಾಗಿ ಪೀಠದಿಂದ ಎಳೆದು ಹಾಕಿದ್ದು ಕೂಡ ತಪ್ಪುಗಳೇ. ಸಂವಿಧಾನ ಮತ್ತು ಸದನದ ನಿಯಮಾವಳಿಗಳಿಗಿಂತಲೂ ಪ್ರತಿಷ್ಠೆಯನ್ನೇ ಆದ್ಯತೆಯಾಗಿ ತೆಗೆದುಕೊಂಡಿರುವುದೇ ಈ ಸರಣಿ ತಪ್ಪುಗಳಿಗೆ ಕಾರಣ. ಇದಕ್ಕೆ ಎಲ್ಲ ಪಕ್ಷಗಳು, ಸರ್ಕಾರ, ಸಭಾಪತಿ, ಉಪ ಸಭಾಪತಿ ಸಮಾನ ಹೊಣೆಗಾರರು.

– ಬಿ.ಎಲ್‌. ಶಂಕರ್‌, ಮಾಜಿ ಸಭಾಪತಿ

–––––

ಸದನದ ಪರಂಪರೆಗೆ ಅಪಚಾರ

ಮಂಗಳವಾರದ ಘಟನೆಯಿಂದ ವಿಧಾನ ಪರಿಷತ್ತಿನ ಪರಂಪರೆಗೆ ಘೋರ ಅಪಚಾರವಾಗಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು, ಸಭಾಪತಿ, ಉಪ ಸಭಾಪತಿ, ಸಭಾ ನಾಯಕ, ವಿರೋಧ ಪಕ್ಷದ ನಾಯಕ ಎಲ್ಲರೂ ಈ ದುರ್ಘಟನೆಯ ಹೊಣೆ ಹೊರಬೇಕು. ತಕ್ಷಣವೇ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕರಿಸಬೇಕು ಮತ್ತು ಗೋಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ಪಡೆಯಬೇಕೆಂಬ ಸರ್ಕಾರದ ಆತುರವೇ ಮೂಲ ಕಾರಣ. ಸಭಾಪತಿಯವರು ಕೂಡ ಕಲಾಪ ಸಲಹಾ ಸಮಿತಿ ಸಭೆ ಕರೆದು ಚರ್ಚಿಸದೇ ಇದ್ದುದು ತಪ್ಪು. ಸಭಾಪತಿ ಹಾಜರಿದ್ದಾಗಲೂ ಪೀಠ ಏರುವ ಮೂಲಕ ಉಪ ಸಭಾಪತಿ ಬೇಜವಾಬ್ದಾರಿಯುತವಾಗಿ ನಡದುಕೊಂಡಿದ್ದಾರೆ. ಸಭಾಪತಿ ಸದನ ಪ್ರವೇಶಿಸದಂತೆ ತಡೆದಿರುವುದು ಪೀಠಕ್ಕೆ ಮಾಡಿದ ಅವಮಾನ. ಈ ರೀತಿಯ ದುರ್ನಡತೆ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಸದನದ ಎಲ್ಲ ಸದಸ್ಯರೂ ನಾಡಿನ ಜನರ ಕ್ಷಮೆ ಯಾಚಿಸಬೇಕು.

– ವಿ.ಆರ್‌. ಸುದರ್ಶನ್‌, ಮಾಜಿ ಸಭಾಪತಿ

–––––

ಮುತ್ಸದ್ದಿತನವೇ ಕಾಣಿಸಲಿಲ್ಲ

‘ಮೇಲ್ಮನೆ’ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮುತ್ಸದಿತನವೇ ಕಾಣಿಸಲಿಲ್ಲ. ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಂವಿಧಾನದ ಅನುಚ್ಛೇದ 175(2)ರ ಅಡಿಯಲ್ಲಿ ಸ್ಪಷ್ಟವಾದ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂಬುದು ವೇದ್ಯವಾಗುತ್ತದೆ. ಸದನದ ನಿಯಮಾವಳಿ 10 ಮತ್ತು 10–ಎ ಪ್ರಕಾರ ಅನಾರೋಗ್ಯ, ವಿದೇಶಕ್ಕೆ ತೆರಳಿರುವುದು ಅಥವಾ ಇತರ ‘ಯುಕ್ತ’ ಕಾರಣಗಳಿಂದಾಗಿ ಸಭಾಪತಿಯವರು ಲಿಖಿತವಾಗಿ ಅಧಿಕಾರ ಪ್ರತ್ಯಾಯೋಜನೆ ಮಾಡಿದ್ದಾಗ ಮಾತ್ರ ಉಪ ಸಭಾಪತಿ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಬಹುದು. ಸಭಾಪತಿ ಸದನ ಪ್ರವೇಶಿಸದಂತೆ ತಡೆದಿರುವುದು ದೊಡ್ಡ ತಪ್ಪು. ಅವರು ಸದನಕ್ಕೆ ಬಂದು ಪೀಠದಲ್ಲಿ ಕುಳಿತಾಗ ಮತ್ತೊಮ್ಮೆ ಅವಿಶ್ವಾಸ ಮಂಡಿಸುವ ಅವಕಾಶ ಬಿಜೆಪಿ, ಜೆಡಿಎಸ್‌ ಸದಸ್ಯರಿಗೆ ಇತ್ತು. ಪೀಠದಲ್ಲಿ ಕುಳಿತುಕೊಳ್ಳುವಂತೆ ಉಪ ಸಭಾಪತಿಯವರಿಗೆ ನಿರ್ದೇಶನ ನೀಡಿದವರು ಯಾರು ಎಂಬುದು ಪ್ರಶ್ನೆ. ಅವರನ್ನು ಪೀಠದಿಂದ ಕೆಳಕ್ಕೆ ಎಳೆದು ತಂದದ್ದು ಕೂಡ ತಪ್ಪು. ಕಾನೂನು ಮತ್ತು ನಿಯಮಗಳ ಹೊರತಾದ ಬೆಳವಣಿಗೆಗಳನ್ನು ಆಧರಿಸಿ ಸರಣಿ ತಪ್ಪುಗಳನ್ನು ಮಾಡಿದಂತೆ ಕಾಣಿಸುತ್ತಿದೆ. ಮೂರೂ ಪಕ್ಷಗಳ ಪ್ರಮುಖ ನೇತಾರರು ಮುತ್ಸದ್ದಿತನ ಪ್ರದರ್ಶಿಸುವುದರ ಮೂಲಕ ಮಾತ್ರವೇ ಸಮಸ್ಯೆ ಪರಿಹರಿಸಲು ಸಾಧ್ಯವಿದೆ.

– ಪ್ರೊ.ಬಿ.ಕೆ. ಚಂದ್ರಶೇಖರ್‌, ಮಾಜಿ ಸಭಾಪತಿ

––––

ಸಭಾಪತಿ ಲಕ್ಷ್ಮಣರೇಖೆ ಮೀರಿದ್ದೇ ಕಾರಣ

ವಿಧಾನ ಪರಿಷತ್‌ನಲ್ಲಿ ನಡೆದ ಘಟನಾವಳಿಗಳನ್ನು ನೋಡಿ ಮನಸ್ಸಿಗೆ ನೋವಾಯಿತು. ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಲಕ್ಷ್ಮಣರೇಖೆ ಮೀರಿ ನಡೆದುಕೊಂಡಿರುವುದೇ ಮೂಲ ಕಾರಣ. ತಮಗೆ ಬಹುಮತ ಇಲ್ಲ ಎಂದು ಗೊತ್ತಿದ್ದಾಗಲೂ ಅವಿಶ್ವಾಸ ಮಂಡನೆಯ ನೋಟಿಸ್‌ ತಿರಸ್ಕರಿಸಿದ್ದು ಸರಿಯಲ್ಲ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರೇರಣೆಯಿಂದ ಕಾಂಗ್ರೆಸ್‌ ಸದಸ್ಯರು ದುರ್ವರ್ತನೆ ತೋರಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಕಾಂಗ್ರೆಸ್‌ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಬಹಿರಂಗ ಪ್ರದರ್ಶನ ಆಗಿದೆ.

– ಡಿ.ಎಚ್. ಶಂಕರಮೂರ್ತಿ, ಮಾಜಿ ಸಭಾಪತಿ

–––––––

ರಾಜ್ಯಕ್ಕೆ ಕಳಂಕ ಅಂಟಿದೆ

ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಘಟನಾವಳಿಗಳಿಂದ ರಾಜ್ಯಕ್ಕೆ ಕಳಂಕ ಅಂಟಿದೆ. ಜೆಡಿಎಸ್‌ ಪಕ್ಷದ ಲಾಭಕೋರತನದ ರಾಜಕಾರಣವೇ ಇದಕ್ಕೆ ಮೂಲ ಕಾರಣ. ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಬಹುಮತ ಕಳೆದುಕೊಂಡ ನಂತರವೂ ಸಭಾಪತಿಯವರು ಪೀಠದಲ್ಲಿ ಉಳಿಯಲು ಪ್ರಯತ್ನಿಸಬಾರದಿತ್ತು. ಎರಡೂ ಕಡೆಯಿಂದಲೂ ತಪ್ಪುಗಳು ಆಗಿವೆ. ಈ ರೀತಿಯ ಪ್ರಯತ್ನಗಳಿಂದ ಶಾಸನ ಸಭೆಗಳಲ್ಲಿ ಯಾವುದೇ ಉದ್ದೇಶವೂ ಈಡೇರುವುದಿಲ್ಲ. ಈ ಘಟನೆಯನ್ನು ಕಂಡು ಅತ್ಯಂತ ನೋವಾಗಿದೆ.

– ವೀರಣ್ಣ ಮತ್ತಿಕಟ್ಟಿ, ಮಾಜಿ ಸಭಾಪತಿ

––––

ಕುರ್ಚಿಗಾಗಿ ಹೋರಾಡಿದ್ದೇ ಗೂಂಡಾಗಿರಿಗೆ ಕಾರಣ

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ವಿಧಾನ ಪರಿಷತ್‌ನ ಸಭಾಪತಿಯವರ ಕುರ್ಚಿಗಾಗಿ ಹೋರಾಡುತ್ತಿರುವುದೇ ಮಂಗಳವಾರ ನಡೆದ ಗೂಂಡಾಗಿರಿ ಪ್ರದರ್ಶನಕ್ಕೆ ಕಾರಣ. ಸಭಾಪತಿ ಸದನ ಪ್ರವೇಶಿಸದಂತೆ ಬಾಗಿಲು ಮುಚ್ಚಿಸಿದ್ದು ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಗೆ ಮಾಡಿದ ಅವಮಾನ. ಕೋರಂ ಬೆಲ್‌ ಮುಗಿಯುವ ಮುನ್ನವೇ ಉಪ ಸಭಾಪತಿ ತಾವಾಗಿಯೇ ಪೀಠ ಏರಿ ಕುಳಿತಿದ್ದು ಸರ್ವಥಾ ಸರಿಯಲ್ಲ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಏಕೆ ಮಾತನಾಡುತ್ತಿಲ್ಲ. ಸಭಾಪತಿಯವರಿಗೆ ಬಹುಮತ ಇಲ್ಲ ಎಂದಾದರೆ ಸಮಯ ತೆಗೆದುಕೊಂಡು ಅವರನ್ನು ಕೆಳಕ್ಕಿಳಿಸುವ ಕೆಲಸ ಮಾಡಬಹುದು. ಆದರೆ, ಸದನದ ಗೌರವ ಹಾಳುಮಾಡುವ ರೀತಿ ವರ್ತಿಸುವುದು ಸರಿಯಲ್ಲ. ಎರಡೂ ಸದನಗಳ ಸಭಾ ನಾಯಕರು, ವಿವಿಧ ಪಕ್ಷಗಳ ನಾಯಕರು ಸೇರಿ ಚರ್ಚಿಸಿ ಸಮಸ್ಯೆಗೆ ತೆರೆ ಎಳೆಯಬೇಕು.

– ಎಂ.ಸಿ. ನಾಣಯ್ಯ, ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT