ಸೋಮವಾರ, ಆಗಸ್ಟ್ 8, 2022
24 °C
20 ಜಿಲ್ಲೆಗಳಲ್ಲಿ ಹಲವು ವಿನಾಯ್ತಿ l ನಗರಗಳತ್ತ ಮರು ವಲಸೆ ಸಾಧ್ಯತೆ

ಇಂದಿನಿಂದ ಲಾಕ್‌ಡೌನ್‌ ಭಾಗಶಃ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಸೋಂಕಿನ ಕಡಿಮೆ ಪ್ರಕರಣಗಳಿರುವ ರಾಜ್ಯದ 20 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್‌ಡೌನ್‌ ಭಾಗಶಃ ಸಡಿಲಿಕೆಯಾಗಲಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಬೆಂಗಳೂರು ನಗರ ಸೇರಿದಂತೆ 20 ಜಿಲ್ಲೆಗಳಲ್ಲಿ ಸೋಮವಾರದಿಂದ ಹಲವು ಚಟುವಟಿಕೆಗಳಿಗೆ ಅವಕಾಶ ದೊರಕಲಿದೆ. ಈ ಕಾರಣದಿಂದ ಜಿಲ್ಲೆಗಳ ಮಧ್ಯೆ ಜನರ ಓಡಾಟ ಹೆಚ್ಚಲಿದ್ದು, ರಾಜ್ಯ ಸರ್ಕಾರದ ನಿರ್ಧಾರದಂತೆ ಲಾಕ್‌ಡೌನ್ ಸಡಿಲಿಕೆ ಮಾಡಲು ಈ ಎಲ್ಲ ಜಿಲ್ಲೆಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಗಳಲ್ಲಿ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಜೂನ್‌ 18ರ ರಾತ್ರಿ 7ರಿಂದ ಜೂನ್‌ 21ರ ಬೆಳಿಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದೆ.

ಬದಲಾವಣೆ ಏನು?: 20 ಜಿಲ್ಲೆಗಳಲ್ಲಿ ದಿನಸಿ, ತರಕಾರಿ, ಮೀನು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಅವಧಿ ಬೆಳಿಗ್ಗೆ 6ರಿಂದ 10 ಗಂಟೆಯ ಬದಲಿಗೆ ಮಧ್ಯಾಹ್ನ 2ರವರೆಗೂ ವಿಸ್ತರಣೆ ಆಗಲಿದೆ. ಬೀದಿ ಬದಿ ವ್ಯಾಪಾರಿಗಳಿಗೂ ಈ ಅವಧಿ ಅನ್ವಯವಾಗಲಿದೆ. ಮದ್ಯ ಮಾರಾಟದ ಅವಧಿಯನ್ನೂ ಮಧ್ಯಾಹ್ನ 2ರವರೆಗೆ ವಿಸ್ತರಿಸಲಾಗಿದೆ.

ಮೇ 7ರ ಲಾಕ್‌ಡೌನ್‌ ಆದೇಶದಲ್ಲಿ ಅನುಮತಿಸಿದ್ದವರ ಜತೆಗೆ ಕೈಗಾರಿಕೆಗಳ ಶೇ 50ರಷ್ಟು ಮತ್ತು ಸಿದ್ಧ ಉಡುಪು ಕಾರ್ಖಾನೆಗಳ ಶೇ 30ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ ದೊರಕಲಿದೆ. ಆಟೊ ಮತ್ತು ಟ್ಯಾಕ್ಸಿ ಸೇವೆ ಲಭ್ಯವಿರಲಿದ್ದು, ಅನುಮತಿಸಿರುವ ಗುಂಪಿಗೆ ಸೇರಿದವರು ಬಳಸಿಕೊಳ್ಳಬಹುದು.

ಉದ್ಯಾನಗಳಲ್ಲಿ ಬೆಳಿಗ್ಗೆ 5ರಿಂದ 10 ಗಂಟೆಯವರೆಗೆ ವಾಯುವಿಹಾರಕ್ಕೆ ಅವಕಾಶ ದೊರೆಯಲಿದೆ. ಕೈಗಾರಿಕೆಗಳು ಶೇ 50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದಕ್ಕೂ ಈ ಜಿಲ್ಲೆಗಳಲ್ಲಿ ಅನುಮತಿ ನೀಡಲಾಗಿದೆ. ಅದಕ್ಕೆ ಪೂರಕವಾಗಿ ನಿರ್ಮಾಣ ಸಾಮಗ್ರಿಗಳ ಮಾರಾಟಕ್ಕೂ ಅವಕಾಶ ದೊರಕಲಿದೆ.

‘ಲಾಕ್‌ಡೌನ್‌ ಸಡಿಲಿಕೆಯಾಗಲಿರುವ ಜಿಲ್ಲೆಗಳಲ್ಲಿ ಕೈಗಾರಿಕಾ ಸಂಸ್ಥೆಗಳು ಮಾತ್ರ ಶೇ 50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯಾಚರಣೆ ನಡೆಸಬಹುದು. ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಶೇ 30ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅವಕಾಶ ಕಲ್ಪಿಸಬಹುದು. ಇತರ ಯಾವುದೇ ರೀತಿಯ ಸಂಸ್ಥೆಗಳು ಮತ್ತು ಕಚೇರಿಗಳನ್ನು ತೆರೆಯಲು ಅವಕಾಶ ನೀಡಿಲ್ಲ’ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ನಗರಗಳತ್ತ ಮರು ವಲಸೆ: ಲಾಕ್‌ಡೌನ್‌ ಸಡಿಲಿಕೆ ಆಗಲಿರುವ ಜಿಲ್ಲೆಗಳಿಂದ ಅಂತರ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಲಕ್ಷಾಂತರ ಮಂದಿ ನಗರಗಳನ್ನು ತೊರೆದು ಹಳ್ಳಿಗಳಿಗೆ ಹೋಗಿದ್ದರು. ಅವರಲ್ಲಿ ಬಹುತೇಕರು ಸೋಮವಾರದಿಂದ ನಗರಗಳಿಗೆ ಹಿಂದಿರುಗಲಿದ್ದಾರೆ. ಬೆಂಗಳೂರು ನಗರಕ್ಕೆ ಭಾರಿ ಪ್ರಮಾಣದ ಜನರು ಹಿಂದಿರುಗುವ ಸಾಧ್ಯತೆ ಇದೆ.

ಲಾಕ್‌ಡೌನ್‌ ಸಡಿಲಿಕೆ ಆಗಿರುವ ಪ್ರದೇಶಗಳಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚರಿಸುವ ಜನರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಮಂಜುನಾಥ್ ಪ್ರಸಾದ್‌ ತಿಳಿಸಿದ್ದಾರೆ.

11 ಜಿಲ್ಲೆಗಳಲ್ಲಿ ಬದಲಾವಣೆ ಇಲ್ಲ:

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಕಾಲ ಲಾಕ್‌ಡೌನ್‌ನ ಕಠಿಣ ನಿಯಮಗಳು ಜಾರಿಯಲ್ಲಿ ಇರಲಿವೆ. ಕೋವಿಡ್‌ ಪಾಸಿಟಿವಿಟಿ ದರ ಶೇ  5ಕ್ಕಿಂತ ಕಡಿಮೆ ಆದರೆ ಆ ಜಿಲ್ಲೆಗಳಲ್ಲಿ ಜೂನ್‌ 21ರಿಂದ ಲಾಕ್‌ಡೌನ್‌ ಭಾಗಶಃ ಸಡಿಲಿಕೆ ಆಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು