ಬುಧವಾರ, ಮೇ 12, 2021
18 °C

ಸ್ಥಗಿತಗೊಂಡ ಗಣಿಗಳ ಪುನರಾರಂಭಕ್ಕೆ ಅನುಮತಿ: ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ರಾಜ್ಯದಲ್ಲಿ ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು  ಷರತ್ತು  ಬದ್ಧವಾಗಿ ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಗಣಿಗಳನ್ನು ಪುನರಾರಂಭಿಸುವವರು ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ(ಡಿಜಿಎಂಎಸ್‌) 90 ದಿನಗಳ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಡಿಜಿಎಂಎಸ್‌ ಪರವಾನಗಿ ಪಡೆದು ಗಣಿಗಾರಿಕೆ ನಡೆಸುತ್ತಿರುವ ಗಣಿಗಳ ಸಂಖ್ಯೆ ಶೇ 10 ಇದ್ದು, ಉಳಿದ ಶೇ 90 ರಷ್ಟು ಮಂದಿ ಡಿಜಿಎಂಎಸ್‌ ಪರವಾನಗಿ ಪಡೆದಿಲ್ಲ. ಇಂತಹ ಗಣಿಗಳ ಸಂಖ್ಯೆ 2500 ಕ್ಕೂ ಹೆಚ್ಚು ಇದೆ. ಪರವಾನಗಿ ‍ಪಡೆಯದೇ ಗಣಿ ಪುನರಾರಂಭಿಸಲು ಸಾಧ್ಯವಿಲ್ಲ. ಇವರಿಂದ ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಸ್ಫೋಟ ಕಾರಣ ಡಿಜಿಎಂಎಸ್‌ ಪರವಾನಗಿ ಹೊಂದಿಲ್ಲದ ಎಲ್ಲ ಗಣಿಗಳು ಮುಚ್ಚಿವೆ. ಗಣಿಗಳ ಚಟುವಟಿಕೆ ನಿಂತು ಹೋದ ಕಾರಣ ₹300 ಕೋಟಿಗಳಷ್ಟು ಆದಾಯ ನಷ್ಟವಾಗಿದೆ. ಹಲವು ಗಣಿಗಳಲ್ಲಿ ಕಾರ್ಮಿಕರನ್ನು ತೆಗೆದುಹಾಕಲಾಗಿದೆ. ಕೆಲವರು ಸಾಲ ಮಾಡಿ ಕ್ರಷರ್‌ಗಳನ್ನು ನಡೆಸುತ್ತಿದ್ದಾರೆ. ಸಾಲ ಮರುಪಾವತಿ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ರಷರ್‌ಗಳು ನಿಂತಿರುವುದರಿಂದ ಕಚ್ಚಾ ಸಾಮಗ್ರಿಗಳ ಬೆಲೆ ಮಾರುಕಟ್ಟೆಯಲ್ಲು ಏರಿಕೆಯಾಗಿದೆ ಎಂದು ನಿರಾಣಿ ಹೇಳಿದರು.

ಗಣಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಭೇಟಿ ಮಾಡಿ ಗಣಿಗಳ ಪುನರಾರಂಭಕ್ಕೆ ಮನವಿ ಮಾಡಿದರು. ಆ ಬಳಿಕ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಲಾಯಿತು. ಗಣಿಗಳ ಪುನರಾರಂಭಕ್ಕೆ ಅನುಮತಿ ನೀಡಿದರು. ಡಿಜಿಎಂಎಸ್ ಪರವಾನಗಿ ಇಲ್ಲದೆ ಸ್ಫೋಟಕಗಳನ್ನು ಖರೀದಿಸಲು ಸಾಧ್ಯವಿಲ್ಲ. ಅದಕ್ಕಾಗಿ ಮಾರ್ಗಸೂಚಿ ಬದಲಿಸಲು ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.

ಎರಡು ಕೆ.ಜಿಯಷ್ಟು ಸ್ಫೋಟಕಗಳನ್ನು ಗಣಿಯಲ್ಲಿ ಬಳಸಲು ಅವಕಾಶ ಇದೆ. ಇದಕ್ಕೆ ಡಿಜಿಎಂಎಸ್‌ನ ಅನುಮತಿ ಬೇಕಿಲ್ಲ. 5 ಎಕರೆ ಮತ್ತು ಅದಕ್ಕಿಂತ ಕಡಿಮೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಡಿಜಿಎಂಎಸ್‌ ಅನುಮತಿ ಪಡೆಯುವುದರಿಂದ ವಿನಾಯ್ತಿ ನೀಡಬೇಕು ಎಂಬ ಮನವಿ ಬಂದಿದೆ ಎಂದು ಹೇಳಿದರು.

ಗಣಿ ಸ್ಫೋಟ ನಡೆದ ಕಾರಣ ಸ್ಫೋಟಕಗಳ ಸಂಗ್ರಹ, ಸಾಗಣೆ ಮತ್ತು ನಿರ್ವಹಣೆ ಹಾಗೂ ಸ್ಫೋಟ ಮಾಡುವ ಬಗ್ಗೆ ಗಣಿಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗಿದೆ ಎಂದೂ ನಿರಾಣಿ ತಿಳಿಸಿದರು.

ಈ ಹಿಂದೆ ತೀರ್ಮಾನ ಮಾಡಿದಂತೆ ಗಣಿ ಅದಾಲತ್‌ ನಡೆಸುವ ದಿನಾಂಕ ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಏ17, ಬೆಳಗಾವಿಯಲ್ಲಿ ಏ.30, ಮೈಸೂರಿನಲ್ಲಿ ಮೇ 15, ಕಲಬುರ್ಗಿಯಲ್ಲಿ ಮೇ 29 ಕ್ಕೆ ಅದಾಲತ್ ನಡೆಯಲಿದೆ ಎಂದು ಸಚಿವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು