ಶುಕ್ರವಾರ, ಮೇ 20, 2022
24 °C

ಪೆಟ್ರೋಲ್‌–ಡೀಸೆಲ್‌ ದರ ಏರಿಕೆ ಬಗ್ಗೆ ಜನ ಏನಂತಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯದ ಮೇಲೆ ಬರೆ

ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೆ ಸಾಕಷ್ಟು ಸಂಕಷ್ಟದಲ್ಲಿದ್ದೆವು. ಇಂತಹ ಸಮಯದಲ್ಲೇ ಸರ್ಕಾರವು ಪೆಟ್ರೋಲ್‌, ಡೀಸೆಲ್‌ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಪ್ರಜೆಗಳ ಹಿತ ಕಾಯಬೇಕಿರುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ. ಬಿಜೆಪಿ ಸರ್ಕಾರವು ಅದನ್ನು ಮರೆತಂತಿದೆ.

ನಾಗಭೂಷಣ್‌, ಸ್ವ ಉದ್ಯೋಗಿ, ಚಾಮರಾಜಪೇಟೆ

***

ಬದುಕು ದುಸ್ತರ

ದರ ಹೆಚ್ಚಳದಿಂದಾಗಿ ಮಧ್ಯಮ ವರ್ಗದ ಜನರ ಬದುಕು ದುಸ್ತರಗೊಂಡಿದೆ. ಮೊದಲೆಲ್ಲಾ ತಿಂಗಳಿಗೆ ₹1,500ರಿಂದ ₹2,000ದಷ್ಟು ಪೆಟ್ರೋಲ್‌ ಹಾಕಿಸುತ್ತಿದ್ದೆ. ಈಗ ಇದಕ್ಕಾಗಿಯೇ ತಿಂಗಳಿಗೆ ಸುಮಾರು ₹4,000 ತೆಗೆದಿಡಬೇಕಾಗಿದೆ. ಕೋವಿಡ್‌ನಿಂದಾಗಿ ವೇತನಕ್ಕೆ ಕತ್ತರಿ ಬಿದ್ದಿದೆ.

ಎನ್‌.ಡಿ.ರವಿಕುಮಾರ್, ಖಾಸಗಿ ಕಂಪನಿ ಉದ್ಯೋಗಿ, ಮುನೇಶ್ವರ ಬ್ಲಾಕ್‌

***

ತೈಲ ಬೆಲೆ ಇಳಿಸಿ

ನಾವು ಪ್ರತಿಯೊಂದಕ್ಕೂ ಪೋಷಕರನ್ನೇ ಅವಲಂಬಿಸಿದ್ದೇವೆ. ಅವರು ದಿನದ ಖರ್ಚಿಗೆ ನೀಡುವ ₹100 ರೂಪಾಯಿ ಪೆಟ್ರೋಲ್‌ ಹಾಕಿಸಲೂ ಸಾಕಾಗುತ್ತಿಲ್ಲ. ಹೆಚ್ಚಿನ ಹಣ ಕೇಳಿದರೆ ನಡೆದುಕೊಂಡು ಹೋಗು⇒ವಂತೆ ಗದರುತ್ತಾರೆ. ಕೋವಿಡ್‌ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಬಸ್‌ ಪ್ರಯಾಣವೂ ಸುರಕ್ಷಿತವಲ್ಲ. ದಿನವೂ ಆಟೊ ಹಿಡಿದು ಕಾಲೇಜಿಗೆ ಹೋಗಿ ಬರುವುದು ದೂರದ ಮಾತು.

ನಿಹಾಲ್‌, ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಥಿ, ಎಚ್‌ಎಸ್‌ಆರ್‌ ಬಡಾವಣೆ

***

ಖಂಡನೀಯ

ಕೋವಿಡ್‌ನಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನ ತತ್ತರಿಸಿ ಹೋಗಿದ್ದಾರೆ. ಅವರ ಜೀವನ ಇನ್ನೂ ಸರಿದಾರಿಗೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲೇ ಸರ್ಕಾರವು ತೈಲ ಬೆಲೆ ಏರಿಸಿರುವುದು ಖಂಡನೀಯ. ಜನರು ದ್ವಿಚಕ್ರ ಬಳಸುವುದು ಇರಲಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವುದೂ ಕಷ್ಟ ಎಂಬ ಪರಿಸ್ಥಿತಿ ಈಗ ಉದ್ಭವಿಸಿದೆ.

ನಮ್ರತಾ ಜೈನ್‌, ಗೃಹಿಣಿ, ಶ್ರೀನಿವಾಸನಗರ

***

‘ತೆರಿಗೆಗೆ ಕಡಿವಾಣ’

ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ಏರಿಕೆ ಕಂಡಲ್ಲಿ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಇದರಿಂದ ಬಸ್‌ ಟಿಕೆಟ್ ಹಾಗೂ ಸರಕುಗಳ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಕ್ಕೆ ನೇರವಾಗಿ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಕಂಡ ಪರಿಣಾಮ ಸಹಜವಾಗಿಯೇ ಇಲ್ಲಿಯೂ ಬೆಲೆ ಹೆಚ್ಚಳವಾಗಿದೆ.

ಹನುಮಂತಗೌಡ ಮಳವಳ್ಳಿ, ವಿಜಯನಗರ

***

‘ಅಗತ್ಯ ವಸ್ತುಗಳ ಮೇಲೂ ಪರಿಣಾಮ’

ಪೆಟ್ರೋಲ್ ಮತ್ತು ಡೀಸೆಲ್‌ಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಏರಿಕೆಯನ್ನು ಹಿಂದಿನ 10–15 ವರ್ಷಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೆ, ಈ ಬೆಲೆ ಇನ್ನಷ್ಟು ಹೆಚ್ಚಳವಾದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ, ಸರ್ಕಾರವು ಬೆಲೆ ಇಳಿಕೆಗೆ ಇರುವ ಅವಕಾಶಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಇದರ ಪರಿಣಾಮವು ಇದೀಗ ಎಲ್ಲ ಉತ್ಪನ್ನಗಳ ಮೇಲೆ ಬೀಳಲಿದೆ. ಇದರಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ವಾಹನ ಸವಾರರ ಜತೆಗೆ ಉಳಿದವರಿಗೂ ಹೆಚ್ಚುವರಿ ಹೊರೆಯಾಗಲಿದೆ.

ಗೌರೀಶ್ ಜಿ.ಎಚ್., ಶ್ರೀರಾಮನಗರ

***

‘ಗುಜರಿಗೆ ಹಾಕಬೇಕಾ?’

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಘೋಷಿಸಿದೆ. ಪೆಟ್ರೋಲ್, ಡೀಸೆಲ್ ದರ ದುಬಾರಿಯಾಗುತ್ತಿರುವುದರಿಂದ ಬಳಸುತ್ತಿರುವ ಹೊಸ ವಾಹನಗಳನ್ನೂ ಗುಜರಿಗೆ ಹಾಕಬೇಕಾದ ದಿನಗಳು ಸಮೀಪಿಸುತ್ತಿವೆ. ಹಳೆಯ ವಾಹನಕ್ಕೆ ಗುಜರಿ ನೀತಿ, ಹೊಸ ವಾಹನಗಳಿಗೆ ಪೆಟ್ರೋಲ್‌ ದರ ಏರಿಕೆಯೇ ನೀತಿ ಎಂಬಂತಾಗಿದೆ.

ಕಾರ್ತಿಕ್, ಹೆಬ್ಬಾಳ

***

‘ಪೆಟ್ರೋಲ್‌ಗಾಗಿ ದುಡಿಮೆ’

ಪೆಟ್ರೋಲ್‌ ದರ ಶತಕದ ಅಂಚಿನಲ್ಲಿದೆ. ಡೀಸೆಲ್ ದರ ಕೂಡ ಗಣನೀಯ ಏರಿಕೆ ಕಂಡಿದೆ. ಕ್ಷೇತ್ರಕಾರ್ಯ (ಫೀಲ್ಡ್‌ವರ್ಕ್) ಕೆಲಸದಲ್ಲಿರುವವರಿಗೆ ಬೈಕ್, ಕಾರು ಅನಿವಾರ್ಯ. ಆದರೆ, ಏರಿರುವ ಪೆಟ್ರೋಲ್‌, ಡೀಸೆಲ್ ದರದಿಂದ ಕ್ಷೇತ್ರಕಾರ್ಯ ಮಾಡುವವರಿಗೆ ಹೆಚ್ಚು ಸಮಸ್ಯೆಯಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ.

ವಿಜಯ್, ಖಾಸಗಿ ಕಂಪನಿ ಉದ್ಯೋಗಿ

***

‘ವಿದ್ಯುತ್‌ ವಾಹನವೂ ದುಬಾರಿ’

‘ಪೆಟ್ರೋಲ್‌ ಹಾಗೂ ಡೀಸೆಲ್ ದರವು ಏರುತ್ತಲೇ ಇದೆ. ಇದಕ್ಕೆ ಪರ್ಯಾಯವಾಗಿ ಹೊಸದಾಗಿ ವಾಹನ ಖರೀದಿಸುವವರು ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸುವ ಅವಕಾಶವಿದೆ. ಆದರೆ, ವಿದ್ಯುತ್‌ ದರವೂ ಈಗ ದುಬಾರಿ. ಈ ಪರಿಸ್ಥಿತಿಯಲ್ಲಿ ವಾಹನಗಳನ್ನು ಬಳಸುವುದಾದರೂ ಹೇಗೆ?

ರಾಕೇಶ್, ಬಸವೇಶ್ವರ ಬಡಾವಣೆ

***

‘ಸೈಕಲ್‌ ಸವಾರಿ ಅನಿವಾರ್ಯ’

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ವಾಹನಗಳನ್ನು ನಿಭಾಯಿಸುವುದು ಕಷ್ಟ. ಇದಕ್ಕೆ ಪರ್ಯಾಯವಾಗಿ ಎಲ್ಲರೂ ಸೈಕಲ್ ಹಾಗೂ ಪರಿಸರಸ್ನೇಹಿ ವಾಹನಗಳನ್ನು ಬಳಸುವ ಕಾಲ ಸಮೀಪಿಸಿದೆ. ತೈಲ ದರ ಇದೇ ರೀತಿ ಏರುತ್ತಿದ್ದರೆ ಮುಂದಿನ ದಿನಗಳಲ್ಲಿ ಸೈಕಲ್ ಬಳಕೆ ಹೆಚ್ಚಾಗಬಹುದು. ದೂರದ ಸವಾರಿಗೆ ವಾಹನಗಳು ಅನಿವಾರ್ಯ. ಸರ್ಕಾರ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ದರ ಇಳಿಕೆಗೆ ಕ್ರಮಕೈಗೊಳ್ಳಬೇಕು.

ಅಭಿಷೇಕ್‌, ಚೋಳನಾಯಕನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು