ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಡ್ಡಾಯ ಪ್ರಶ್ನಿಸಿದ 4ನೇ ತರಗತಿ ವಿದ್ಯಾರ್ಥಿ; ಹೈಕೋರ್ಟ್‌ಗೆ ಪಿಐಎಲ್‌

ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ 10 ವರ್ಷದ ಬಾಲಕ
Last Updated 24 ಸೆಪ್ಟೆಂಬರ್ 2021, 1:47 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಭಾಷಾ ಕಲಿಕಾ ಕಾಯ್ದೆ–2015 ಪ್ರಶ್ನಿಸಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ 10 ವರ್ಷ ವಯಸ್ಸಿನ ವಿದ್ಯಾರ್ಥಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾನೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡದಿರುವ ಈ ಕಾಯ್ದೆಯನ್ನೇ ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿದ್ದಾನೆ.

4ನೇ ತರಗತಿ ವಿದ್ಯಾರ್ಥಿ ಕೀರ್ತನ್ ಸುರೇಶ್ ಈ ಅರ್ಜಿ ಸಲ್ಲಿಸಿದ್ದು, ಅವರ ಪರವಾಗಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಎನ್. ಸುಜಾತಾ ಪ್ರತಿನಿಧಿಸುತ್ತಿದ್ದಾರೆ.‌ ಅರ್ಜಿ ವಿಚಾರಣೆ ನಡೆಸಿದ ಪೀಠ, ರಾಜ್ಯ ಸರ್ಕಾರ ಮತ್ತು ಐಸಿಎಸ್‌ಇ ಕೌನ್ಸಿಲ್‌ಗೆ ನೋಟಿಸ್ ನೀಡಲು ಆದೇಶಿಸಿದೆ.

‘ರಾಜ್ಯದ ಎಲ್ಲಾ ಶಾಲೆಗಳಲ್ಲಿ 1ರಿಂದ 10ನೇ ತರಗತಿ ತನಕ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ. 1ರಿಂದ 4ನೇ ತರಗತಿ ತನಕ ಕನ್ನಡವನ್ನು ಎರಡನೇ ಭಾಷೆಯಾಗಿ ಕಲಿಯಬೇಕು. ಇತರ ಆದ್ಯತಾ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಬೇಕಾಗುತ್ತದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಈ ರೀತಿ ಕಡ್ಡಾಯ ಮಾಡುವುದು ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ವಿರುದ್ಧ’ ಎಂಬುದು ಅರ್ಜಿದಾರನ ವಾದ.

‘ಸಂವಿಧಾನದ ಪರಿಚ್ಛೇದ 350ಎ ಪ್ರಕಾರ ಮಾತೃಭಾಷೆಯಲ್ಲಿ ಅಭಿವ್ಯಕ್ತಿಗೆ ಅವಕಾಶ ನೀಡಬೇಕು ಎಂಬ ಏಕೈಕ ಅಂಶ ಇದೆ. ಭಾಷಾ ಅಲ್ಪಸಂಖ್ಯಾತ ಮಕ್ಕಳು ತಮ್ಮದೇ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಈ ಅವಕಾಶವನ್ನು ಸಂವಿಧಾನ ನೀಡಿದೆ. ಹಾಗೆಂದ ಮಾತ್ರಕ್ಕೆ ರಾಜ್ಯ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತು ಶಾಲೆಗಳ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ’ ಎಂದು ಹೇಳಿದ್ದಾನೆ.

‘ಸದಾ ವರ್ಗಾವಣೆಯಾಗುವ ನೌಕರರು ತಮ್ಮ ಮಕ್ಕಳಿಗೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಇರುವ ಶಾಲೆಗಳಿಗೆ ಸೇರಿಸುತ್ತಾರೆ. ಅವರ ವಾಸ್ತವ್ಯ ರಾಜ್ಯದಲ್ಲಿ ತಾತ್ಕಾಲಿಕ ಆಗಿರುತ್ತದೆ. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಯುವುದು ಆ ಮಕ್ಕಳಿಗೆ ಕಠಿಣವಾಗಲಿದೆ. ಒಂದು ವರ್ಷದ ಬಳಿಕ ಬೇರೆ ರಾಜ್ಯಕ್ಕೆ ವರ್ಗಾವಣೆಯಾದರೆ ಮತ್ತಷ್ಟು ಅನನುಕೂಲ ಆಗಲಿದೆ’ ಎಂದು ಅರ್ಜಿದಾರ ವಾದಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT