ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ನಡೆಯುತ್ತಿರುವುದು ಯೋಜಿತ ಹಿಂಸಾಚಾರ: ಸಿಎಂ ಬೊಮ್ಮಾಯಿ

Last Updated 29 ಜುಲೈ 2022, 7:08 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿಯಲ್ಲಿ ನಡೆಯುತ್ತಿರುವುದು ಕೇವಲ ಕೊಲೆಯಲ್ಲ. ಅಲ್ಲಿ ಯೋಜಿತ ಹಿಂಸಾಚಾರ ನಡೆಯುತ್ತಿದ್ದು, ದೊಡ್ಡ ಸಂಘಟನೆಗಳ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳ ಹಿಂದೆ ಗಡಿಯಾಚೆಗಿನ ಶಕ್ತಿಗಳ ಕೈವಾಡವೂ ಇದೆ. ಕೆಲವು ದೊಡ್ಡ ಸಂಘಟನೆಗಳು, ರಾಜಕೀಯ ಪ್ರಚೋದನೆಯೂ ಇದೆ. ಎಲ್ಲವನ್ನೂ ಹತ್ತಿಕ್ಕಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕೊಲೆಗೀಡಾದ ಪ್ರವೀಣ್‌ ಮನೆಗೆ ನಾನು ಗುರುವಾರ ಭೇಟಿನೀಡಿದ್ದೆ. ಅಲ್ಲಿಂದ ಹಿಂದಿರುಗಲು ವಿಮಾನ ಹತ್ತುವ ಸಂದರ್ಭದಲ್ಲೇ ಸುರತ್ಕಲ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ ನಡೆದಿರುವ ಮಾಹಿತಿ ಬಂತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಉಳಿದುಕೊಂಡು ತನಿಖೆಯ ಮೇಲುಸ್ತುವಾರಿ ವಹಿಸುವಂತೆ ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರವೀಣ್‌ ಕೊಲೆ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಉಳಿದ ಪ್ರಕರಣಗಳಲ್ಲೂ ತನಿಖೆ ಮುದುವರಿದಿದೆ. ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ ಎಂದರು.

ಕರಾವಳಿಯಲ್ಲಿ ನಡೆಯುತ್ತಿರುವ ದುಷ್ಕೃತ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುವುದು. ಶುಕ್ರವಾರ ಸಂಜೆಯೊಳಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ಸಿದ್ದರಾಮಯ್ಯ ಮಾತು ವೇದವಾಕ್ಯವಲ್ಲ: ಸರ್ಕಾರ ವಿಫಲವಾಗಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ʼಸಿದ್ದರಾಮಯ್ಯ ಅವರ ಮಾತು ವೇದವಾಕ್ಯವಲ್ಲ. ಸರ್ಕಾರವಾಗಿ ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇವೆ. ಯಾರೂ ರಾಜೀನಾಮೆ ನೀಡಬೇಕಾದ ಸ್ಥಿತಿ ಉದ್ಭವಿಸಿಲ್ಲʼ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ರ್ಕಾರದ ಅವಧಿಯಲ್ಲಿ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಸದಸ್ಯರ ವಿರುದ್ಧದ 200 ಕ್ರಿಮಿನಲ್‌ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆಯಲಾಗಿತ್ತು. ಇದರಿಂದ ಅವರು ಮತ್ತಷ್ಟು ಬಲಿತರು. ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಕೊಲೆಗೂ ಯತ್ನಿಸಿದರು. ಈಗಲೂ ಮತ್ತೆ ಹಿಂಸಾಕೃತ್ಯ ನಡೆಸುತ್ತಿದ್ದಾರೆ. ಈ ಸ್ಥಿತಿಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಇವುಗಳನ್ನೂ ಒದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT