ಸೋಮವಾರ, ಜುಲೈ 4, 2022
25 °C
ಪೋಕ್ಸೊ ಕಾಯ್ದೆ ಪರಿಣಾಮಕಾರಿ ಜಾರಿ ಕೋರಿದ ಪಿಐಎಲ್‌

ಪೋಕ್ಸೊ ಪ್ರಕರಣ; ಸಂತ್ರಸ್ತರ ಕುಟುಂಬಕ್ಕೆ ಮಾಹಿತಿ ನೀಡಿಕೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ-2012ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಿಶೇಷ ನ್ಯಾಯಾಲಯಗಳು ಸಂತ್ರಸ್ತರ ಕುಟುಂಬಕ್ಕೆ, ಪೋಷಕರಿಗೆ ಅಥವಾ ಅವರ ವಕೀಲರಿಗೆ ಮಾಹಿತಿ ನೀಡುವುದು ಕಡ್ಡಾಯ‘ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಪೊಕ್ಸೊ ಕಾಯ್ದೆ–2012 ಹಾಗೂ ಪೊಕ್ಸೊ ನಿಯಮ–2020 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸಬೇಕು‘ ಎಂದು ಕೋರಿ ಮೂವರು ಸಂತ್ರಸ್ತರ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ನ್ಯಾಯಪೀಠ, ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.

ನಿರ್ದೇಶನಗಳು
* ಪೋಕ್ಸೊ ಪ್ರಕರಣದಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ತನಿಖಾಧಿಕಾರಿ ಅಥವಾ ವಿಶೇಷ ಬಾಲನ್ಯಾಯ ಪೊಲೀಸ್‌ ಘಟಕವು ಸಂತ್ರಸ್ತರ ಪೋಷಕರು ಅಥವಾ ಪಾಲಕರು ಹಾಗೂ ಅವರನ್ನು ಪ್ರತಿನಿಧಿಸುವ ವಕೀಲರಿದ್ದರೆ ಅವರಿಗೆ ಮಾಹಿತಿ ನೀಡಬೇಕು.

* ಜಾಮೀನು ಅರ್ಜಿಗೆ ಪ್ರಾಸಿಕ್ಯೂಟರ್‌ ತಡಮಾಡದೆ ಆಕ್ಷೇಪಣೆ ಸಲ್ಲಿಸಬೇಕು. ಈ ವೇಳೆ ಪ್ರಾಸಿಕ್ಯೂಟರ್‌ಗೆ ತನಿಖಾಧಿಕಾರಿ ಹಾಗೂ ಸಂತ್ರಸ್ತರ ಕುಟುಂಬದವರು ಅಗತ್ಯ ಸಹಕಾರ ಹಾಗೂ ಮಾಹಿತಿ ಒದಗಿಸಬೇಕು.     

* ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಟರ್‌, ತನಿಖಾಧಿಕಾರಿಯ ಸಹಾಯ ಪಡೆಯಬೇಕು.

* ಒಂದು ವೇಳೆ ಆರೋಪಿ ಸಂತ್ರಸ್ತ ಕುಟುಂಬಕ್ಕೆ ಪರಿಚಯಸ್ಥನೇ ಆಗಿದ್ದರೆ ಜಾಮೀನಿಗೆ ಸಲ್ಲಿಸಿರುವ ಆಕ್ಷೇಪಣೆಯ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿಗೂ (ಸಿಡಬ್ಲ್ಯೂಸಿ) ಸಲ್ಲಿಸಬೇಕು.

* ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಸಂಬಂಧಿಸಿದ ನ್ಯಾಯಾಲಯವು; ಸಂತ್ರಸ್ತರ ಕುಟುಂಬಕ್ಕೆ ನೋಟಿಸ್‌ ಜಾರಿಯಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಸಂತ್ರಸ್ತರ ವಾದ ಆಲಿಸಬೇಕು.

* ಒಂದು ವೇಳೆ ನೋಟಿಸ್ ಜಾರಿಯಾದ ನಂತರವೂ ಸಂತ್ರಸ್ತರ ‍ಪರವಾಗಿ ಯಾರೂ ಹಾಜರಾಗದಿದ್ದರೆ ವಿಶೇಷ ನ್ಯಾಯಾಲಯ ತನ್ನ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು.

*ಹೈಕೋರ್ಟ್‌ನ ಈ ಆದೇಶದ ಪ್ರತಿಯನ್ನು ಎಲ್ಲ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರು ಮತ್ತು ವಿಶೇಷ ಕೋರ್ಟ್‌ಗಳ ನ್ಯಾಯಾಧೀಶರಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ನೀಡಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು