ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಟೀಕಾಪ್ರಹಾರ: ಮೇಜು ಕುಟ್ಟಿದ ಬಿಜೆಪಿ!

ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ನಾಯಕನಿಂದ ಟೀಕಾಪ್ರಹಾರ
Last Updated 9 ಮಾರ್ಚ್ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮಾತಿನುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯರು ಮೇಜುಕಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್‌ ಕುರಿತು ಚರ್ಚೆ ಆರಂಭಿಸಿದ ಕುಮಾರಸ್ವಾಮಿ, ಸಾಲದ ವಿಷಯಕ್ಕೆ ಬರುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಆರಂಭಿಸಿದರು. ಸುಮಾರು ಮೂರು ಗಂಟೆಗಳಷ್ಟು ಮಾತನಾಡಿದ ಅವರು, ಬಹುಪಾಲು ಸಮಯವನ್ನು ಕಾಂಗ್ರೆಸ್‌ ವಿರುದ್ಧದ ಟೀಕಾಪ್ರಹಾರಕ್ಕೆ ಮೀಸಲಿಟ್ಟರು.

ನೀರಾವರಿ ಯೋಜನೆಗಳು, ವಿತ್ತೀಯ ಶಿಸ್ತು ಸೇರಿದಂತೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಪ್ರಗತಿ ಕುಂಠಿತವಾಗಿತ್ತು ಎಂದರು.

‘ಸಾಲದ ಮಾಡುವುದು ಹೊಸತೇನಲ್ಲ. ಎಲ್ಲ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಾಲ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಏರುತ್ತಲೇ ಹೋಗಿದೆ. 2018–19 ರಲ್ಲಿ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಸುಮಾರು ₹40 ಸಾವಿರ ಕೊಟಿ ಸಾಲ ಮಾಡಿದ್ದರು’ ಎಂದು ಟೀಕಿಸಿದರು.

‘ನಾನು ಯಾರನ್ನೂ ಟೀಕೆ ಮಾಡಬೇಕು ಎಂದು ಮಾತನಾಡುತ್ತಿಲ್ಲ. ನಾನು ಅವರಿಗೆ ಸರ್ಟಿಫಿಕೇಟ್‌ ಕೊಡಲು ಮಾತನಾಡುತ್ತಿದ್ದೇನೆ. ವಿತ್ತೀಯ ಕೊರತೆ ನೀಗಿಸಲು ವಿತ್ತೀಯ ಹೊಣೆಗಾರಿಕೆ ಕಾಯ್ದೆ ತಾವೇ ತಂದಿದ್ದಾಗಿ ವಿರೋಧಪಕ್ಷದ ನಾಯಕರು ಹೇಳಿದ್ದರು. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕೋ ಬೇಡವೊ’ ಎಂದು ಕುಟುಕಿದರು.

ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಟೀಕಿಸುವುದನ್ನು ಆಕ್ಷೇಪಿಸಿದ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ‘ಜೆಡಿಎಸ್‌ ಬಿಜೆಪಿಯ ಬಿ ಟೀಮ್‌’ ಎಂದರು. ಆಗ ಕಾಂಗ್ರೆಸ್‌ ಶಾಸಕರು ‘ಬಿ’ ಟೀಮ್ ಎಂದು ಕೂಗಿದರು. ಅದಕ್ಕೆ ಪ್ರತಿಯಾಗಿ ಜೆಡಿಎಸ್‌ ಸದಸ್ಯರೂ ಏರಿದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಸಿದ್ದರಾಮಯ್ಯ ಅವರು ಬಸವರಾಜ ಬೊಮ್ಮಾಯಿ ಬಜೆಟ್‌ ಬಗ್ಗೆ ಮಾತನಾಡುವುದು ಬಿಟ್ಟು, ತಮ್ಮ ಬಜೆಟ್‌ ಬಗ್ಗೆ ಮಾತನಾಡಿದ್ದೇ ಹೆಚ್ಚು. ಎಸ್.ಆರ್‌.ಬೊಮ್ಮಾಯಿ, ಮೋದಿ ಹೀಗೆ ಎಲ್ಲರ ಬಗ್ಗೆಯೂ ಮಾತನಾಡಿದರು’ ಎಂದರು.

ಮಧ್ಯಾಹ್ನದ ಬಳಿಕ ಕಲಾಪ ಆರಂಭವಾದಾಗಲೂ ಕುಮಾರಸ್ವಾಮಿ ಮಾತಿಗೆ ಖಾದರ್‌ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಕೆ.ಆರ್‌. ರಮೇಶ್‌ ಕುಮಾರ್‌, ‘ಅವರು ಮಾತನಾಡಲಿ ಬಿಡಿ. ನಮಗೆ ಯೋಗ್ಯತೆ ಇದ್ದರೆ ನಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳೋಣ’ ಎಂದು ಸಮಾಧಾನಪಡಿಸಿದರು.

ರೇವಣ್ಣ ಆ ಕಡೆ–ಅಶೋಕ ಈ ಕಡೆ

ಎಚ್‌.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಸಚಿವ ಆರ್‌. ಅಶೋಕ ಅವರು ಜೆಡಿಎಸ್‌ ಸದಸ್ಯರ ಸಾಲಿನಲ್ಲಿ ಬಂದು ಕುಳಿತಿದ್ದರು. ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಆಡಳಿತ ಪಕ್ಷದ ಸಾಲಿನತ್ತ ಹೋಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರ ಜತೆ ಮಾತನಾಡಿಕೊಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT