ಗುರುವಾರ , ಆಗಸ್ಟ್ 11, 2022
23 °C

ಅಂಚೆ ಕಚೇರಿಗಳಲ್ಲಿ ‘ಜನಸೇವಾ ಕೇಂದ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಪಡೆಯಲು ಅನುಕೂಲವಾಗುವಂತೆ ಪ್ರತಿ ಅಂಚೆ ಕಚೇರಿಯಲ್ಲಿ ‘ಜನಸೇವಾ ಕೇಂದ್ರ’ಗಳನ್ನು ಆರಂಭಿಸಲಾಗಿದ್ದು, ಕರ್ನಾಟಕ ವಲಯದ ಚೀಫ್ ಪೋಸ್ಟ್‌ ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಮಂಗಳವಾರ ಚಾಲನೆ ನೀಡಿದರು.

ಜನಸೇವಾ ಕೇಂದ್ರಗಳಲ್ಲಿ ಇನ್ನು ಮುಂದೆ ಸರ್ಕಾರದ 73 ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬಹುದು.

ಪಾನ್ ಕಾರ್ಡ್, ಪಾಸ್‍ಪೋರ್ಟ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ಜನನ ಮತ್ತು ಮರಣ ಪ್ರಮಾಣಪತ್ರ, ಆಯುಷ್ಮಾನ್ ಭಾರತ ಯೋಜನೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ, ರಾಷ್ಟ್ರೀಯ ಪಿಂಚಣಿ ಯೋಜನೆ, ವಿಮಾನ ಟಿಕೆಟ್, ಬಸ್ ಟಿಕೆಟ್, ಮೊಬೈಲ್ ಮತ್ತು ಡಿಟಿಎಚ್ ಬಿಲ್ ಪಾವತಿ, ಜೀವ ವಿಮೆ ಕಂತು ಪಾವತಿ, ಜಿಎಸ್‍ಟಿ ರಿಟರ್ನ್ಸ್‌ ಸಲ್ಲಿಕೆ ಸೇರಿದಂತೆ ಹಲವಾರು ಸೇವೆಗಳು ಅಂಚೆ ಕಚೇರಿಯಲ್ಲೇ ಸಿಗಲಿವೆ.

‘ದೇಶದಾದ್ಯಂತ 10 ಸಾವಿರ ಅಂಚೆ ಕಚೇರಿಯಲ್ಲಿ ಸರ್ಕಾರದ ಸವಲತ್ತು ದೊರೆಯಲಿದೆ. ಉತ್ತರ ಕರ್ನಾಟಕದಲ್ಲಿ 345, ದಕ್ಷಿಣ ಕರ್ನಾಟಕದಲ್ಲಿ 386, ಬೆಂಗಳೂರು ವಲಯದಲ್ಲಿ 120 ಸೇರಿ ರಾಜ್ಯದಲ್ಲಿ ಒಟ್ಟು 851 ಅಂಚೆ ಕಚೇರಿಯಲ್ಲಿ ಜನಸೇವಾ ಕೇಂದ್ರ ಆರಂಭಿಸಲಾಗಿದೆ’ ಶಾರದಾ ಸಂಪತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂಚೆ ಕಚೇರಿಯಲ್ಲಿ ಪಾರ್ಸೆಲ್‍ಗಳನ್ನು ಕಳುಹಿಸಲು ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಸ್ಮಾರ್ಟ್ ಪೋಸ್ಟ್‌ ಕಿಯೋಸ್ಕ್‌ಗಳನ್ನು ರಾಜ್ಯದ ವಿವಿಧೆಡೆ ಅಳವಡಿಸುವ ಚಿಂತನೆ ಇದೆ. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಗರದ ಮ್ಯೂಸಿಯಂ ರಸ್ತೆಯಲ್ಲಿ ಅಳವಡಿಸಲಾಗಿದೆ. ಪ್ರತಿದಿನ ಕನಿಷ್ಠ 10 ಪಾರ್ಸಲ್‍ಗಳನ್ನು ಹಾಕುತ್ತಿದ್ದಾರೆ. ಇದು ಯಶಸ್ವಿಯಾಗಿರುವುದರಿಂದ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದರು.

ಡಾಕ್ ಪೇ ಆ್ಯಪ್ ಬಿಡುಗಡೆ: ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ, ಮೊಬೈಲ್, ಟಿ.ವಿ ರಿಚಾರ್ಜ್ ಮಾಡಲು ಅನುಕೂಲವಾಗುವಂತೆ ಅಂಚೆ ಇಲಾಖೆಯು ‘ಡಾಕ್ ಪೇ’ ಆ್ಯಪ್ ಬಿಡುಗಡೆಗೊಳಿಸಿದೆ. ಇದು ಅಂಚೆ ಇಲಾಖೆಯ ಅಧಿಕೃತ ಆ್ಯಪ್ ಆಗಿದ್ದು, ಡಿಜಿಟಲ್ ಹಣ ಪಾವತಿ ಮಾಡಬಹುದಾಗಿದೆ.

ವಿದೇಶಕ್ಕೆ ಕರಕುಶಲ ವಸ್ತು
‘ಅಂಚೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು’ ಎಂದು ಶಾರದಾ ಸಂಪತ್ ತಿಳಿಸಿದರು.

‘ಚನ್ನಪಟ್ಟಣದ ಗೊಂಬೆ, ಬೀದರ್‌ನ ಬಿದರಿನ ಕುಸುರಿ ವಸ್ತುಗಳು, ಇಳಕಲ್‍ನ ಸೀರೆಗಳು ಸೇರಿ ಪ್ರತಿ ಜಿಲ್ಲೆಯಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತಿದೆ. ರಾಜ್ಯದ ಕರಕುಶಲ ವಸ್ತುಗಳಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ’ ಎಂದರು.

‘ಮೇಘದೂತ ಪ್ರಶಸ್ತಿ’ ಪ್ರದಾನ
ಅಂಚೆ ಇಲಾಖೆಯಿಂದ ನೀಡುವ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಮೇಘದೂತ ಪ್ರಶಸ್ತಿ’ಗೆ ಕರ್ನಾಟಕ ಅಂಚೆ ವೃತ್ತದ ಬೆಂಗಳೂರು ಪೂರ್ವ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕ ಚಂದ್ರಶೇಖರ್ ಹಾಗೂ ಬೆಂಗಳೂರಿನ ಮೋಟರ್ ಸರ್ವಿಸ್ ವಿಭಾಗದ ಚಾಲಕ ಬಾಲಕೃಷ್ಣ ಅವರು ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಟ್ಟು ಎಂಟು ಪ್ರಶಸ್ತಿಗಳ ಪೈಕಿ ಎರಡು ಪ್ರಶಸ್ತಿಗಳು ರಾಜ್ಯಕ್ಕೆ ಸಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು