ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಲೈವ್ | ‘ರಾಜಕಾರಣದ ಶುದ್ಧೀಕರಣಕ್ಕೆ ಇಚ್ಛಾಶಕ್ತಿಯೂ ಬೇಕು’

Last Updated 16 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣದ ಅಪರಾಧೀಕರಣ ತಡೆಗೆ ಕಠಿಣ ಕಾನೂನು ಅಗತ್ಯ ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್‌, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಮೊಕದ್ದಮೆಗಳ ವಿವರಗಳನ್ನು ಬಹಿರಂಗಪಡಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

‘ರಾಜಕೀಯದಲ್ಲಿ ಅಪರಾಧೀಕರಣ: ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ’ ಎಂಬವಿಷಯ ಕುರಿತು ‘ಪ್ರಜಾವಾಣಿ’ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಪಾಲ್ಗೊಂಡಿದ್ದ ಮೂರು ರಾಜಕೀಯ ಪಕ್ಷಗಳ ಮುಖಂಡರು ಹಂಚಿಕೊಂಡಿರುವ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ಅಪರಾಧೀಕರಣದಲ್ಲಿ ಎಲ್ಲ ಪಕ್ಷಗಳು ಶಾಮೀಲು

ಸಂಸತ್ತು ಮತ್ತು ವಿಧಾನಮಂಡಲಗಳು ಕಾನೂನು ರಚಿಸುವ ಸ್ಥಳಗಳು. ಅಲ್ಲಿ ಅಪರಾಧ ಹಿನ್ನೆಲೆಯವರು ಇರಬಾರದು ಎಂಬುದನ್ನು ಒಪ್ಪಲೇಬೇಕು. ಸಂವಿಧಾನ ರಚನೆ ಸಂದರ್ಭದಲ್ಲಿ ಅಪರಾಧಿ ಹಿನ್ನೆಲೆಯವರು ರಾಜಕೀಯದಲ್ಲಿ ಇರಲಿಲ್ಲ. ಹಾಗಾಗಿ ಈ ಬಗ್ಗೆ ಅಲ್ಲಿ ಉಲ್ಲೇಖ ಮಾಡಿರಲಿಲ್ಲ.

ನಾನು ಪ್ರತಿನಿಧಿಸುವ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳೂ ಅಂತಹವರಿಗೆ ಟಿಕೆಟ್‌ ನೀಡುತ್ತಿವೆ. ಹಣ ಮತ್ತು ಜಾತಿಬಲದ ಆಧಾರದಲ್ಲಿ ಗೆಲ್ಲುತ್ತಾರೆ ಎಂದು ಅಪರಾಧ ಹಿನ್ನೆಲೆಯವರಿಗೆ ಮಣೆ ಹಾಕುತ್ತಿವೆ. ಬಿಜೆಪಿ ಅತಿ ಹೆಚ್ಚು ರಾಜಿಯಾಗಿರುವ ಪಕ್ಷ ಅದು. ಕಾನೂನುಗಳ ವ್ಯಾಪ್ತಿಯಲ್ಲೇ ಚುನಾವಣಾ ಆಯೋಗ ಕೆಲಸ ಮಾಡಬೇಕು. ಕಾನೂನು ಮತ್ತು ಸಂವಿಧಾನದ ತಿದ್ದುಪಡಿ ಆಗಲೇಬೇಕಿದೆ. ಆನುವಂಶಿಕವಾಗಿ ಅಧಿಕಾರದಲ್ಲಿ ಮುಂದುವರಿಯುವುದನ್ನು ನಿರ್ಬಂಧಿಸಬೇಕು. ಸರ್ಕಾರವೇ ಚುನಾವಣೆಯ ವೆಚ್ಚ ಭರಿಸುವ ವ್ಯವಸ್ಥೆ ತರುವುದು ಅತಿ ಅಗತ್ಯ.

- ಬಸವರಾಜ ರಾಯರಡ್ಡಿ,ಕಾಂಗ್ರೆಸ್‌ ಮುಖಂಡ

ಹಣ ಬಳಕೆಯಲ್ಲಿ ಕರ್ನಾಟಕವೇ ಮುಂದು

130 ಕೋಟಿ ಜನರಿರುವ ದೇಶದಲ್ಲಿ 540 ಒಳ್ಳೆಯ ವ್ಯಕ್ತಿಗಳು ಸಿಗುವುದಿಲ್ಲ ಎನ್ನುವ ಸ್ಥಿತಿ ಇದೆಯೇ ಎಂಬುದನ್ನು ಯೋಚಿಸಬೇಕಿದೆ. ಕ್ರಿಮಿನಲ್‌ ಅಪರಾಧ ಮಾಡಿದವರೇ ಕಾನೂನು ರಚಿಸುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ.

ಅಪರಾಧ ಹಿನ್ನೆಲೆಯವರೇ ದೊಡ್ಡ ಪ್ರಮಾಣದಲ್ಲಿ ರಾಜಕಾರಣ ಪ್ರವೇಶಿಸುತ್ತಿದ್ದಾರೆ. 159 ಸಂಸದರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ದೇಶದಲ್ಲಿ ಚುನಾವಣೆಗೆ ಅತ್ಯಧಿಕ ಹಣ ಬಳಕೆ ಆಗುತ್ತಿರುವುದು ಕರ್ನಾಟಕದಲ್ಲಿ. ಭ್ರಷ್ಟಾಚಾರ ಪ್ರಕರಣಗಳಿರುವುದು ನಮ್ಮಲ್ಲೇ ಹೆಚ್ಚು. ಬಿಹಾರ ಮತ್ತಿತರ ರಾಜ್ಯಗಳಲ್ಲಿ ಕೊಲೆ, ಅತ್ಯಾಚಾರದಂತಹ ಆರೋಪದ ಕ್ರಿಮಿನಲ್‌ ಪ್ರಕರಣಗಳು ಹೆಚ್ಚಿವೆ.

ಕಾನೂನಿಗಾಗಿ ಕಾಯಬೇಕಿಲ್ಲ. ರಾಜಕೀಯ ಪಕ್ಷಗಳೇ ಮುಂದಾದರೆ ಎಲ್ಲವನ್ನೂ ಪರಿಹರಿಸಬಹುದು. ಕ್ರಿಮಿನಲ್‌ ಹಿನ್ನೆಲೆಯವರು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಕಾನೂನು ಮತ್ತು ಜನಜಾಗೃತಿ ಎರಡೂ ಅಗತ್ಯ.

- ಪೃಥ್ವಿ ರೆಡ್ಡಿ,ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಸಂಚಾಲಕ

ಅಪರಾಧೀಕರಣ ನೋಡುವ ದೃಷ್ಟಿ ಬದಲಾಗಲಿ

ರಾಜಕೀಯದ ಅಪರಾಧೀಕರಣವನ್ನು ನೋಡುವ ದೃಷ್ಟಿಕೋನವನ್ನು ನ್ಯಾಯಾಲಯ ಮತ್ತು ಸಮಾಜ ಬದಲಿಸಿಕೊಳ್ಳಬೇಕಿದೆ. ಕ್ರಿಮಿನಲ್‌ ಚಟುವಟಿಕೆ ನಡೆಸಿದವರನ್ನು ಚುನಾವಣಾ ರಾಜಕಾರಣ
ದಿಂದ ಹೊರಗಿಡುವುದು ಸ್ವಾಗತಾರ್ಹ. ಆದರೆ, ಜನಪರ ಹೋರಾಟ ನಡೆಸಿದ್ದಕ್ಕಾಗಿ ದಾಖಲಾದ ಮೊಕದ್ದಮೆಗಳ ಕಾರಣಕ್ಕಾಗಿ ಅವರನ್ನೂ ಕ್ರಿಮಿನಲ್‌ಗಳು ಎಂದು ಗುರುತಿಸುವುದು ತಪ್ಪು. ಇದರಿಂದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯವೇ ಹೆಚ್ಚು.

ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೀಡಿರುವ ಸೂಚನೆಯಿಂದ ಹೆಚ್ಚೇನೂ ಬದಲಾವಣೆ ಆಗುವಂತೆ ಕಾಣುತ್ತಿಲ್ಲ. ಜನರ ಮಧ್ಯೆ ಚರ್ಚೆ ನಡೆದರೆ, ರಾಜಕೀಯ ಪಕ್ಷಗಳಲ್ಲಿ ಸಾರ್ವಜನಿಕ ಲಜ್ಜೆ ಮೂಡೀತು. ಚುನಾವಣೆಗೆ ಸ್ಪರ್ಧಿಸಬೇಕಾದರೆ ಇರಬೇಕಾದ ಅರ್ಹತೆಗಳ ಕುರಿತು ಸಂವಿಧಾನ ತಿದ್ದುಪಡಿ ಆಗಬೇಕು. ಹಣಬಲದ ರಾಜಕೀಯ ಕೊನೆಯಾದರೆ ಸಮಸ್ಯೆಗೆ ಪರಿಹಾರ ಸಾಧ್ಯವಾಗುತ್ತದೆ. ಕಾನೂನು ಮತ್ತು ಸಂಘಟಿತ ಪ್ರಯತ್ನವೇ ಇದಕ್ಕೆ ಮದ್ದು.

ಮುನೀರ್‌ ಕಾಟಿಪಳ್ಳ,ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT