ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬೀದಿಗೆ ತಂದ ಕೋವಿಡ್‌– ಸರಣಿ| ಮಗುಚಿ ಬಿದ್ದ ‘ಬಂಡಿ’: ಜೀವನ ದಿಕ್ಕಾಪಾಲು

ಆಟೊ, ಕ್ಯಾಬ್, ಬಸ್‌ ನಂಬಿದವರ ಜೀವನ ಬಲು ಕಷ್ಟ lಮಕ್ಕಳ ಶಿಕ್ಷಣದ ಮೇಲೂ ಕರಿನೆರಳು
Last Updated 13 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ‘ಬಂಡಿ’ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದವರನ್ನು ಕೋವಿಡ್ ಲಾಕ್‌ಡೌನ್ ದಿಕ್ಕಾಪಾಲು ಮಾಡಿದೆ. ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿರುವ ’ಸಾರಥಿ’ಗಳ ಜೀವನ ಇಂದಿಗೂ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿಲ್ಲ.

ಆಟೊ, ಟ್ಯಾಕ್ಸಿ ಹಾಗೂ ಬಸ್‌ಗಳನ್ನು ಅವಲಂಬಿಸಿ ಕೋಟಿಗೂ ಹೆಚ್ಚು ಮಂದಿ ಜೀವನ ಸಾಗಿಸುತ್ತಿದ್ದಾರೆ. ಲಾಕ್‌ಡೌನ್‌ ಹೊಡೆತಕ್ಕೆ ಅವರೆಲ್ಲರ ಜೀವನ ತತ್ತರಿಸಿ ಹೋಗಿದೆ. ವಾಹನಗಳ ಮಾಲೀಕರು, ಚಾಲಕರು, ಕ್ಲೀನರ್‌ಗಳು, ಗ್ಯಾರೇಜ್‌ ಸಿಬ್ಬಂದಿ, ಪಂಕ್ಚರ್‌ ಹಾಕುವರು ಹಾಗೂ ಚಕ್ರಗಳಿಗೆ ಗಾಳಿ ತುಂಬಿಸುವವರು ಇಂದಿಗೂ ಬದುಕು ಸಾಗಿಸಲು ಪರದಾಡುತ್ತಿದ್ದಾರೆ.

ಪಾನ್‌ ಅಂಗಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿವರೆಗಿನ ವಹಿವಾಟಿಗೆ ಬೀಗ ಬಿದ್ದಿತ್ತು. ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು ಬಂದ್ ಆಗಿದ್ದವು. ಉದ್ಯೋಗ ಹಾಗೂ ಪ್ರವಾಸಕ್ಕೆಂದು ಸಾರಿಗೆ ವಾಹನಗಳಲ್ಲಿ ಸಂಚರಿ ಸುತ್ತಿದ್ದ ಜನರು ಮನೆಯಲ್ಲಿ ಉಳಿದಿ
ದ್ದರು. ಪ್ರಯಾಣಿಕರು ಇಲ್ಲದೇ ಸಾರಿಗೆ ವಾಹನಗಳು ನಿಂತಲೇ ನಿಲ್ಲಬೇಕಾಗಿತ್ತು.

ಬಹುತೇಕ ಚಾಲಕರು, ನಗರ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದರು. ಅಲ್ಲಿಯೂ ಕೆಲಸ ಸಿಗದೇ ಕಂಗಾಲಾಗಿದ್ದರು. ಕೆಲವರು ಆಟೊ ಹಾಗೂ ಟ್ಯಾಕ್ಸಿಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಂಡರು. ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾಗಿದ್ದ ಮೊಬೈಲ್‌ ಕೊಡಿಸಲು ಸಾಧ್ಯವಾಗದೇ ಸಂಕಟ ಅನುಭವಿಸಿದರು.

ಹಂಪಿ, ಮೈಸೂರು, ಬೆಂಗಳೂರು, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ವಿಜಯಪುರ, ಉತ್ತರ ಕನ್ನಡ ಹಾಗೂ ಇತರೆಡೆಯ ಪ್ರವಾಸೋದ್ಯಮ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಟ್ಯಾಕ್ಸಿಗಳ ಬೇಡಿಕೆ ಕಡಿಮೆಯಾಗಿ ಸಮಸ್ಯೆ ಸೃಷ್ಟಿಯಾಗಿತ್ತು.

ಇದೀಗ, ಲಾಕ್‌ಡೌನ್‌ ಭಾಗಶಃ ತೆರವು ಮಾಡಲಾಗಿದೆ. ಐ.ಟಿ, ಬಿ.ಟಿ ಕಂಪನಿಗಳ ಬಾಗಿಲು ಇನ್ನು ತೆರೆದಿಲ್ಲ. ಆಟೊ ಹಾಗೂ ಟ್ಯಾಕ್ಸಿಗಳಿಗೆ ಪ್ರಯಾಣಿಕರ ಕೊರತೆ ಹೆಚ್ಚಿದೆ. ಮೂರನೇ ಅಲೆ ಬಂದು, ಮತ್ತೆ ಲಾಕ್‌ಡೌನ್ ಮಾಡಿದರೆ ನಮ್ಮ ಗತಿಯೇನು? ಎಂದು ಚಾಲಕ ವರ್ಗ ಚಿಂತೆಗೀಡಾಗಿದೆ.

‘ಸಾರಿಗೆ ವಾಹನ ನಂಬಿದವರ ಕಷ್ಟ ನಿವಾರಿಸುತ್ತೇವೆ’ ಎಂದ ಸರ್ಕಾರ, ಒಂದೂವರೆ ತಿಂಗಳ ತೆರಿಗೆಯನ್ನಷ್ಟೇ ಮನ್ನಾ ಮಾಡಿತು. ವಿಮೆ, ದೃಢತೆ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳ ಅಂತಿಮ ದಿನವನ್ನು ಮುಂದೂಡುವುದಾಗಿ ಹೇಳಿದ್ದ ಸರ್ಕಾರ, ಅದನ್ನು ಜಾರಿಗೆ ತರಲಿಲ್ಲ. ಆರ್‌ಟಿಒ ಮೂಲಕ ವಾಹನಗಳನ್ನು ಹಿಡಿಸಿ, ಚಾಲಕರಿಗೆ ದಂಡ ವಿಧಿಸಿತು ಎಂಬ ಆರೋಪವಿದೆ.

ದಿನದ ದುಡಿಮೆ ನಂಬಿದ್ದ ಆಟೊ ಚಾಲಕರು ಹಾಗೂ ಅವರ ಕುಟುಂಬದವರು ಬೀದಿಗೆ ಬಿದ್ದರು. ಆಹಾರ ಪೊಟ್ಟಣಗಳಿಗೆ ಕೈ ಚಾಚಿದರು. ಸರ್ಕಾರದ ಪರಿಹಾರ ಕೆಲವರಿಗಷ್ಟೇ ಲಭ್ಯವಾಯಿತು. ಬಹುತೇಕರು ಪರಿಹಾರ ಕ್ಕಾಗಿ ಅಲೆದಾಡಿ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಟ್ಯಾಕ್ಸಿ ಚಲಾಯಿಸುತ್ತಿದ್ದ ಕೆಲವರು, ಅದರ ಸಹವಾಸವೇ ಬೇಡವೆಂದು ಮಾರಿದರು. ಸಾಲದ ಕಂತು ತುಂಬದ ಟ್ಯಾಕ್ಸಿಗಳನ್ನು ಬ್ಯಾಂಕ್ ಹಾಗೂ ಫೈನಾನ್ಸ್‌ನವರು ಜಪ್ತಿ ಮಾಡಿದರು.

ಖಾಸಗಿ ಬಸ್‌ ಮಾಲೀಕರು, ಚಾಲಕರು ಹಾಗೂ ಕ್ಲೀನರ್‌ ಬದುಕು ಸಹ ಮೂರಾಬಟ್ಟೆಯಾಯಿತು. ಸಾಲದ ಕಂತು ತುಂಬಿ ಬಸ್‌ ಉಳಿಸಿಕೊಳ್ಳುವುದೇ ಮಾಲೀಕರಿಗೆ ಸವಾಲಾಯಿತು. ಚಾಲಕರು ಹಾಗೂ ಕ್ಲೀನರ್‌ಗಳು ಕೆಲಸವಿಲ್ಲದೆ, ಅನ್ಯ ಕೆಲಸಗಳಿಗೆ ತೊಡಗಿಸಿಕೊಂಡಿದ್ದರು.

ನಿತ್ಯವೂ ಕಣ್ಣೀರು: ‘ಆಟೊ ನನ್ನ ಜೀವನಕ್ಕೆ ಆಧಾರ. ಲಾಕ್‌ಡೌನ್‌ನಿಂದ ಆಟೊ ರಸ್ತೆಗೆ ಇಳಿಯಲಿಲ್ಲ. ಮನೆ ಬಾಡಿಗೆ, ದಿನಸಿ, ತಿಂಗಳ ಖರ್ಚು ಹೊಂದಿಸಲು ಪರದಾಡಿದೆ. ತರಕಾರಿ ಮಾರಿದರೂ ಹೆಚ್ಚು ದುಡಿಮೆಯಾಗಲಿಲ್ಲ. ಲಾಕ್‌ಡೌನ್ ಮುಗಿಯುವವರೆಗೂ ನಿತ್ಯ ಕಣ್ಣೀರು ಸುರಿಸಿದ್ದೇನೆ’ ಎಂದು ಆಟೊ ಚಾಲಕ ಕಾಂತರಾಜು ಹೇಳಿದರು.

ರಾಜಾಜಿನಗರದ ಪಂಕ್ಚರ್ ಅಂಗಡಿಯ ಇಮ್ರಾನ್, ‘ಅನಕ್ಷರಸ್ಥನಾದ ನನಗೆ, ಪಂಕ್ಚರ್ ಹಾಕುವುದೇ ವೃತ್ತಿ. ಲಾಕ್‌ಡೌನ್‌ನಲ್ಲಿ ಅಂಗಡಿ ಬಂದ್ ಮಾಡಿದ್ದರಿಂದ, ಜೀವನ ನಡೆಸುವುದು ಕಷ್ಟವಾಯಿತು. ಇಂದಿಗೂ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸಿ ಬಟ್ಟೆ– ಪುಸ್ತಕ ಕೊಡಿಸಲೂ ಹಣವಿಲ್ಲ. ನಮ್ಮಂಥವರಿಗೆ ಲಾಕ್‌ಡೌನ್‌ ‘ನರಕ’ ತೋರಿಸಿದೆ’ ಎಂದರು.

ಚಾಲಕ ಚನ್ನಪಟ್ಟಣದ ಮುರುಳಿ, ‘ಕೈ ತುಂಬ ದುಡಿಯುತ್ತಿದ್ದ ನಾನು, ಲಾಕ್‌ಡೌನ್‌ನಿಂದ ಒಂದು ರೂಪಾಯಿ ದುಡಿಯಲು ಆಗಲಿಲ್ಲ. ಶೆಡ್‌ನಲ್ಲಿ ನಿಲ್ಲಿಸಿದ್ದ ಕ್ಯಾಬ್ ಹೊರಗೆ ತೆಗೆಯಲಿಲ್ಲ. ತುಕ್ಕು ಹಿಡಿದು, ಎಂಜಿನ್‌ ಕೆಟ್ಟಿತ್ತು. ದುರಸ್ತಿ ಮಾಡಿಸಲು ಹಣವಿರಲಿಲ್ಲ’ ಎಂದು ಕಣ್ಣೀರಿಟ್ಟರು.

‘ಕುಟುಂಬದವರ ಹೊಟ್ಟೆ ತುಂಬಿ ಸುವ ಜವಾಬ್ದಾರಿ, ಸಾಲಗಾರರ ಕಾಟ ಹಾಗೂ ಕಾರು ನಿರ್ವಹಣೆ ಕೆಲಸ ನನ್ನ ಮೇಲಿತ್ತು. ತೆರಿಗೆ, ವಿಮೆ ಹಾಗೂ ಇತರೆ ಶುಲ್ಕ ಭರಿಸಲೇ ಬೇಕಿತ್ತು. ಹೀಗಾಗಿ, ಕಾರು ಮಾರಿ ಸಾಲ ತೀರಿಸಿದೆ’ ಎಂದರು.

***

ಚಾಲಕರಿಗೆ ಪರಿಹಾರದ ಹೆಸರಿನಲ್ಲಿ ‘ಭಿಕ್ಷೆ’ ಕೊಟ್ಟಿರುವ ಸರ್ಕಾರ, ಅದನ್ನೇ ದೊಡ್ಡ ಸಾಧನೆಯಂತೆ ಮೆರೆಯುತ್ತಿದೆ. ಚಾಲಕರಿಗೆ ಪರಿಹಾರ ಸಿಗಲಿಲ್ಲ.
- ಜಿ. ನಾರಾಯಣಸ್ವಾಮಿ, ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ

ಪ್ರಯಾಣಿಕರು ಇಲ್ಲದೇ ಆಟೊ ಚಾಲಕರು ತತ್ತರಿಸಿದ್ದಾರೆ. ಸರ್ಕಾರ ಬಿಡಿಗಾಸು ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ
- ಕಾಂತರಾಜು, ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT