ಗುರುವಾರ , ಡಿಸೆಂಬರ್ 1, 2022
20 °C
ರಾಜ್ಯ ಸರ್ಕಾರದಿಂದ ‘ಪೌರ ಸನ್ಮಾನ’

ನಾನು ಏನೇ ಆಗಿದ್ದರೂ ನಿಮ್ಮ ಸೇವೆಗಾಗಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ‘ಇಂದು ನಾನು ಏನೇ ಆಗಿದ್ದರೂ ನಿಮ್ಮ ಸೇವೆಗಾಗಿ. ತಾಯಿ ಭುವನೇಶ್ವರಿ ಮಕ್ಕಳಿಗೆ ನನ್ನ ನಮಸ್ಕಾರಗಳು. ಮೈಸೂರು ದಸರಾಗೆ ಚಾಲನೆ ಕೊಟ್ಟ ಸೌಭಾಗ್ಯ ನನ್ನದಾಗಿತ್ತು. ಕರ್ನಾಟಕದ ಸಂಸ್ಕೃತಿಯನ್ನು ನೋಡಿದ್ದೇನೆ. ಈ ಅಭಿನಂದನೆಗೆ ಧನ್ಯವಾದಗಳು’ ಎಂದು ರಾಜ್ಯ ಸರ್ಕಾರದ ‘ಪೌರ ಸನ್ಮಾನ’ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಣಿ ಅಬ್ಬಕ್ಕ, ಚೆನ್ನಮ್ಮ, ರಾಯಣ್ಣ ಹುಟ್ಟಿದ ನಾಡಿದು’ ಎಂದರು. ಬಸವಣ್ಣನವರ ವಚನವನ್ನೂ ಮುರ್ಮು ಉಲ್ಲೇಖಿಸಿದರು.‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ದ್ರೌಪದಿ ಮುರ್ಮು ಅವರನ್ನು ಸನ್ಮಾನಿಸಿದರು. ಸಚಿವೆ ಶೋಭಾ ಕರಂದ್ಲಾಜೆ ಮೈಸೂರು ಪೇಟ ತೊಡಿಸಿದರೆ, ಬುದ್ಧನ ಪ್ರತಿಮೆಯನ್ನು ಮುಖ್ಯಮಂತ್ರಿ ನೀಡಿದರು.‌ ನಾಗರಿಕರ ಪರವಾಗಿ ಇಸ್ಕಾನ್‌ನ ಮಧುಪಂಡಿತ್ ದಾಸ್‌, ಸಾಹಿತಿ ಚಂದ್ರಶೇಖರ ಕಂಬಾರ, ಕಿರಣ್ ಮಜುಂದಾರ್ ಶಾ‌, ಜೋಗುತಿ ಮಂಜಮ್ಮ, ಪ್ರಕಾಶ್ ಪಡುಕೋಣೆ ಅವರೂ ರಾಷ್ಟ್ರಪತಿಗೆ ಗೌರವ ಸಮರ್ಪಣೆ ಮಾಡಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಮಾತನಾಡಿ. ‘1997 ಪಂಚಾಯತಿ ಪ್ರವೇಶಿಸಿ ರಾಜಕಾರಣ ಆರಂಭಿಸಿದ್ದೀರಿ. ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ, ಮೊದಲ ಆದಿವಾಸಿ ಮಹಿಳೆಯಾಗಿ‌ ಕಾಲೇಜಿನ ಮೆಟ್ಟಿಲು ಹತ್ತಿದ್ದೀರಿ. ಒಡಿಶಾದಲ್ಲಿ 2007ರಲ್ಲಿ ವಿಧಾನಸಭೆ ಪ್ರವೇಶ ಮಾಡಿದಿರಿ. ಅತ್ಯುತ್ತಮ ಶಾಸಕಿ ಪ್ರಶಸ್ತಿ ಪಡೆದುಕೊಂಡಿದ್ದೀರಿ. ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿದ್ದೀರಿ. ಪತಿಯನ್ನು ಕಳೆದುಕೊಂಡರೂ, ಇಬ್ಬರು ಹೆಣ್ಣ ಮಕ್ಕಳನ್ನು ಸಾಕಿ, ಛಲ ಬಿಡದೆ ಈ ಸ್ಥಾನಕ್ಕೆ ಏರಿದ್ದೀರಿ‌’ ಎಂದು ದ್ರೌಪದಿ ಮುರ್ಮು ಅವರ ಬದುಕಿನ ಹಾದಿಯನ್ನು ನೆನಪಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ನನಗೆ ಗೊತ್ತಿರುವ ಪ್ರಕಾರ ಇದೊಂದು ಅಪರೂಪದ ಕಾರ್ಯಕ್ರಮ. ನಾಗರಿಕರಿಂದ ಭಾರತದ ಮೊದಲ ಪ್ರಜೆಯನ್ನು ಸತ್ಕರಿಸುವಂಥ ಕಾರ್ಯಕ್ರಮ ಹಿಂದೆಂದೂ ಇಲ್ಲಿ ನಡೆದಿಲ್ಲ. ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಬೆಂಗಳೂರಿಗೆ ಮುರ್ಮು ಬಂದಿದ್ದರು. ರಾಷ್ಟ್ರಪತಿಯಾದ ಮೇಲೆ ಮೊದಲು ಬೆಂಗಳೂರಿಗೆ ಬರಬೇಕು ಎಂದೂ ಹೇಳಿದ್ದರು. ಖಂಡಿತಾ ಬನ್ನಿ, ನಿಮಗೆ ಸಾಕಷ್ಟು ಅವಕಾಶವಿದೆ ಎಂದು ನಾನೂ ಹೇಳಿದ್ದೆ. ಆದರೆ, ರಾಷ್ಟ್ರಪತಿಯಾದ ಬಳಿಕ ಕೆಲಸದ ಒತ್ತಡದಲ್ಲಿರುತ್ತಾರೆ. ಹೀಗಾಗಿ, ಅವರು ಬರುತ್ತಾರೊ ಎಂಬ ಅಳುಕು ಇತ್ತು’ ಎಂದರು.

‘ನಾನು ದಸರಾಗೆ ಆಹ್ವಾನ ಕೊಟ್ಟ ದಿನದಂದು ಸಂಜೆಯೇ ಬರುವುದಾಗಿ ತಿಳಿಸಿದರು. ಎಲ್ಲ ವಿಚಾರಗಳ ಬಗ್ಗೆ ಅವರು ಸಂಪೂರ್ಣವಾಗಿ ತಿಳಿದುಕೊಂಡರು. ಶಾಲಾ ಶಿಕ್ಷಕಿಯಾಗಿ, ಪಂಚಾಯತಿ ಪ್ರವೇಶ ಪಡೆದು, ಶಾಸಕರಾಗಿ, ಅತ್ಯುತ್ತಮ ಶಾಸಕಿ ಪ್ರಶಸ್ತಿ ಪಡೆದು, ಒಡಿಶಾದಲ್ಲಿ ಸೇವೆ ಸಲ್ಲಿಸಿದ ಅವರು ಬಳಿಕ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿದ್ದರು. ರಾಜ್ಯಪಾಲ ಅವಧಿ ಮುಗಿದ ಬಳಿಕ ಮತ್ತೆ ಶಿಕ್ಷಕಿಯಾದರು. ‌ಇದು ಅವರ ಸರ್ವ ಶ್ರೇಷ್ಠ ಗುಣ’ ಎಂದು ಬಣ್ಣಿಸಿದರು.

‘ರಾಷ್ಟ್ರಪತಿ ಅಭ್ಯರ್ಥಿ ಆಗುವಂತೆ ಅವರಿಗೆ ಕರೆ ಹೋದಾಗ ದ್ರೌಪದಿ ಮುರ್ಮು ಹಳ್ಳಿಯ ದೇವಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿದ್ದರು. ಪ್ರಧಾನಿ ಕರೆ ಮಾಡಿದಾಗ ನನಗೇಕೆ ಆ ಹುದ್ದೆ ಎಂದು ಕೇಳಿದರು. ಅದರೆ, ಪ್ರಧಾನಿ ಅವರನ್ನು ಒಪ್ಪಿಸಿದರು. ರಾಷ್ಟ್ರಪತಿ ಆಗುವ ಮೊದಲು ನಾನು ಮುರ್ಮು ಅವರನ್ನು ನೋಡಿದ್ದೇನೆ. ಚುನಾವಣಾ ಸಂದರ್ಭದಲ್ಲಿಯೂ ನೋಡಿದ್ದೇನೆ. ರಾಷ್ಟ್ರಪತಿಯಾದ ಮೇಲೂ ನೋಡಿದ್ದೇನೆ. ಅವರು ಬದಲಾಗಿಲ್ಲ. ಬದಲಾಗುವುದಿಲ್ಲ. ಅವರ ಮುಗ್ಧತೆ ನಮಗೆಲ್ಲರಿಗೂ ಮಾರ್ಗದರ್ಶನ. ಮುಗ್ಧತೆ ಉಳಿಸಿಕೊಳ್ಳುವುದು ಬಹಳ ಕಷ್ಟ. ಅದನ್ನು ದ್ರೌಪದಿ ಮುರ್ಮು ಉಳಿಸಿಕೊಂಡಿದ್ದಾರೆ’ ಎಂದರು.

ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್‌ ಮಲ್ಕಾಪುರೆ, ಚಿತ್ರನಟಿ ಬಿ. ಸರೋಜಾದೇವಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಾಲುಮರದ ತಿಮ್ಮಕ್ಕ‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು