ಸೋಮವಾರ, ಮೇ 23, 2022
22 °C

ತಸ್ತಿಕ್ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಅರ್ಚಕರಿಗೆ ಮಾಸಿಕ ₹5 ಗೌರವಧನ ನೀಡಬೇಕು ಹಾಗೂ ತಸ್ತಿಕ್ (ಪೂಜಾ ಕೈಂಕರ್ಯ ವೆಚ್ಚ) ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಗೌರವಾಧ್ಯಕ್ಷ ಶಾಂತವೀರ ಸ್ವಾಮೀಜಿ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ‌ರುವ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಎ ವರ್ಗ, ಬಿ ವರ್ಗಗಳನ್ನು ಹೊರತುಪಡಿಸಿ ಸಿ ವರ್ಗದ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಗ್ರಾಮೀಣ ಭಾಗದ ಬಹುತೇಕ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯು ಕಡೆಗಣಿಸಿದೆ’ ಎಂದು ದೂರಿದರು.

‘ದೇವಾಲಯಗಳ ನಿರ್ವಹಣೆಗೆ ಇಲಾಖೆಯಿಂದ ನೀಡುವ ತಸ್ತಿಕ್ ಮಾದರಿಯ ಹಣ ಹೊರತುಪಡಿಸಿ, ಬೇರೆ ಆದಾಯ ಇಲ್ಲ. ತಸ್ತಿಕ್ ಅನುದಾನವು ಪೂಜಾ ಸಾಮಗ್ರಿಗೆ ಮಾತ್ರ ಸಾಕಾಗುತ್ತಿದ್ದು, ಅರ್ಚಕರಿಗೆ ಯಾವುದೇ ರೀತಿಯ ವೇತನ ಸಿಗುತ್ತಿಲ್ಲ. ಇವರಿಗೆ ಮಾಸಿಕ ಗೌರವಧನ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಅರ್ಚಕರ ಭವನ ಸ್ಥಾಪಿಸಬೇಕು. ಮುಜರಾಯಿ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮುಜರಾಯಿ ಸಚಿವರು ಉಡುಪಿ ಜಿಲ್ಲೆಯ ದೇವಾಲಯಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿದ್ದು, ಬಡ ಅರ್ಚಕರಿಗೆ ಯಾವುದೇ ಸಹಾಯ ಮಾಡಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ದೇವಾಲಯಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದೂ ಎಚ್ಚರಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ, ಕಾರ್ಯದರ್ಶಿ ವಿ.ರಾಮತೀರ್ಥನ್, ಜಂಟಿ ಕಾರ್ಯದರ್ಶಿ ಪ್ರಶಾಂತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು