ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಬಿಸಿ: ನೀರಾವರಿ ಕಾಮಗಾರಿಗಳು ಕುಂಠಿತ

ತುರ್ತುಸಭೆ ಕರೆಯಲು ಮುಂದಾದ ಮುಖ್ಯಮಂತ್ರಿ
Last Updated 21 ನವೆಂಬರ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಕ್ಷೇತ್ರದ ಅಗತ್ಯ ವಸ್ತುಗಳ ಬೆಲೆ ‘ಗಗನಮುಖಿ’ಯಾಗಿರುವುದರಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ಮೊತ್ತದ ನೀರಾವರಿ ಕಾಮಗಾರಿಗಳು ಸ್ಥಗಿತಗೊಳ್ಳುವ ಹಂತ ತಲುಪಿವೆ. ವಿಷಯದ ಗಂಭೀರತೆ ಅರಿತ ಮುಖ್ಯಮಂತ್ರಿಯವರು ಜಲಸಂಪನ್ಮೂಲ, ಆರ್ಥಿಕ ಇಲಾಖೆ ಮತ್ತು ಇತರ ಇಲಾಖೆಗಳ ಉನ್ನತ ಅಧಿಕಾರಿಗಳ ತುರ್ತುಸಭೆ ಕರೆಯಲು ನಿರ್ಧರಿಸಿದ್ದಾರೆ.

ಮುಂದಿನ ದಿನಗಳಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ ಮೊತ್ತವೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ತಾವು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅಂದಾಜು ವೆಚ್ಚವನ್ನು ಹೆಚ್ಚಿಸುವಂತೆ ಒತ್ತಾಯಿಸಲೂ ಗುತ್ತಿಗೆದಾರರು ಸಿದ್ಧತೆ ನಡೆಸಿದ್ದಾರೆ.

ಉಕ್ಕು, ಸಿಮೆಂಟ್‌, ಎಂಎಸ್‌ ಪ್ಲೇಟ್‌ಗಳು ಮತ್ತು ಎಂಎಸ್‌ ಪೈಪ್‌ಗಳು, ಪಿವಿಸಿ, ಎಚ್‌ಡಿಪಿಇ, ಡಿಐ ಪೈಪ್‌ಗಳು, ಎಲೆಕ್ಟ್ರೋ ಮೆಕ್ಯಾನಿಕಲ್‌ ಮತ್ತು ಹೈಡ್ರೊ ಮೆಕ್ಯಾನಿಕಲ್‌ ಉಪಕರಣಗಳು ಮತ್ತು ಇಂಧನದ ಬೆಲೆ ವಿಪರೀತ ಏರಿಕೆ ಆಗಿದೆ. ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ,ಬಹುತೇಕ ಕಾಮಗಾರಿಗಳು ತೆವಳುತ್ತಿವೆ. ಸರ್ಕಾರ ಈಗ ಮಧ್ಯಪ್ರವೇಶಿಸದಿದ್ದರೆ ಅವು ಸ್ಥಗಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನೀರಾವರಿ ಮೂಲಸೌಕರ್ಯ ನಿರ್ಮಾಣ ಉಪಕರಣಗಳ ಬೆಲೆ ಏರಿಕೆಯಿಂದಾಗಿ ಕಾಮಗಾರಿ ಮುಂದುವರಿಸುವುದು ಕಷ್ಟವಾಗಿದೆ. ನೀವು ತಕ್ಷಣ ಮಧ್ಯಪ್ರವೇಶಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ‘ಕ್ಯಾಟಗರಿ ಕಾಂಟ್ರಾಕ್ಟರ್ಸ್‌ ಫೋರಂ’ ಪತ್ರ ಬರೆದಿದೆ. ಕರ್ನಾಟಕ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಕಾವೇರಿ ಜಲ ನಿಗಮಗಳ ಅಡಿ ಏತ ನೀರಾವರಿ, ಹನಿ ನೀರಾವರಿ ಯೋಜನೆಗಳು, ಬ್ರಿಜ್‌ ಕಂ ಬ್ಯಾರೇಜ್‌ಗಳು, ನಾಲೆಗಳ ಸಂಪರ್ಕ ಜಾಲಗಳ ಕಾಮಗಾರಿಗಳು ಚಾಲ್ತಿಯಲ್ಲಿವೆ.

ಗುತ್ತಿಗೆದಾರರಿಗೆ ಪಾವತಿ ಆಗಬೇಕಾದ ಮೊತ್ತ (ನಿಗಮ;ಪಾವತಿಸಬೇಕಾದ ಮೊತ್ತ (₹ ಕೋಟಿಗಳಲ್ಲಿ)

ಕೆಬಿಜೆಎನ್‌ಎಲ್‌;1,550

ಕೆಎನ್‌ಎನ್‌ಎಲ್‌; 4,900

ವಿಜೆಎನ್‌ಎಲ್‌;2,900

ಸಿಎನ್‌ಎನ್‌ಎಲ್‌;1300

ಒಟ್ಟು;10,650

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT