ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಚಿಕಿತ್ಸೆ: ಪೋರ್ಟಲ್‌ನಲ್ಲಿ ಲಭಿಸಲಿದೆ ಹಾಸಿಗೆ ಲಭ್ಯತೆ ಮಾಹಿತಿ

ಹಾಸಿಗೆ ಲಭ್ಯತೆ ಮಾಹಿತಿ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ
Last Updated 3 ಮೇ 2021, 19:50 IST
ಅಕ್ಷರ ಗಾತ್ರ

ಬೆಂಗಳೂರು: ಇದುವರೆಗೆ ಬಿ.ಯು.ನಂಬರ್‌ ಪಡೆದು ಬಿಬಿಎಂಪಿ ಮೂಲಕ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್‌ ರೋಗಿಗಳ ಉಚಿತವಾಗಿ ಚಿಕಿತ್ಸೆ ಪಡೆಯಲು ಲಭ್ಯ ಇರುವ ಹಾಸಿಗೆಗಳ ಮಾಹಿತಿ ಮಾತ್ರ ಹಾಸಿಗೆಗಳ ನಿರ್ವಹಣೆಯಕೇಂದ್ರೀಕೃತ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಲಭ್ಯ ಇರುತ್ತಿತ್ತು. ಕೋವಿಡ್‌ ಚಿಕಿತ್ಸೆಯ ವೆಚ್ಚವನ್ನು ಸ್ವತಃ ಭರಿಸುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಹಾಸಿಗೆಗಳ ಮಾಹಿತಿಯೂ ಇನ್ನು ಪೋರ್ಟಲ್‌ನಲ್ಲಿ ಸಿಗಲಿದೆ.

ಬಿ.ಯು.ನಂಬರ್‌ ಪಡೆದು ಬಿಬಿಎಂ‍ಪಿ ಮೂಲಕ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದ ಅನೇಕ ಕೋವಿಡ್‌ ಸೋಂಕಿತರು ಸ್ವತಃ ವೆಚ್ಚ ಭರಿಸಿ ಚಿಕಿತ್ಸೆ ಪಡೆಯಲು ಮುಂದಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಮಾದರಿಯ ಚಿಕಿತ್ಸೆಗೆ ಲಭ್ಯ ಇರುವ ಹಾಸಿಗೆಗಳ ಮಾಹಿತಿ ಸಿಗುತ್ತಿರಲಿಲ್ಲ.ರೋಗಿಗಳನ್ನು ಆಂಬುಲೆನ್ಸ್‌ನಲ್ಲಿಟ್ಟುಕೊಂಡು ಬಂಧುಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾಗುತ್ತಿತ್ತು. ಈ ಕೊರತೆ ಇನ್ನು ನೀಗಲಿದೆ. ಚಿಕಿತ್ಸಾ ವೆಚ್ಚವನ್ನು ಭರಿಸುವ ರೋಗಿಗಳಿಗೆ ನೀಡಲಿರುವ ಹಾಸಿಗೆಗಳ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ ಅಧಿಸೂಚನೆ ಹೊರಡಿಸಿದ್ದಾರೆ.

ಖಾಸಗಿ ಕೋಟಾದಡಿ ಕೋವಿಡ್ ಸೊಂಕಿತರು ಚಿಕಿತ್ಸೆ ಪಡೆಯಲು ಲಭ್ಯವಿರುವ ಹಾಸಿಗೆಗಳ ಮಾಹಿತಿಯೂ ಸಿಗಬೇಕೆಂಬ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ಗಳ ಸಂಘದವರು (ಫಾನಾ) ಹಾಸಿಗೆ ಮಾಹಿತಿ ಒದಗಿಸುವ ಪೋರ್ಟಲ್ ಸಿದ್ದಪಡಿಸಿದ್ದಾರೆ.ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾಗಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಖಾಸಗಿಯಾಗಿ ದಾಖಲಾಗಿರುವ ಕೋವಿಡ್ ಸೊಂಕಿತರ ಸಂಖ್ಯೆ ಮತ್ತು ಹಾಸಿಗೆ ಲಭ್ಯತೆಯ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ಆಯಾ ಕ್ಷಣದ (ರಿಯಲ್‌ಟೈಮ್) ಲಭ್ಯತೆ ಆಧಾರದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಸಾಮಾನ್ಯ, ಎಚ್.ಡಿ.ಯು, ಐಸಿಯು, ವೆಂಟಿಲೇಟರ್ ವ್ಯವಸ್ಥೆ ಇರುವಐಸಿಯುಗಳಲ್ಲಿ ಲಭ್ಯ ಇರುವ ಹಾಸಿಗೆಗಳ ಆಯಾ ಕ್ಷಣದ ವಿವರಗಳನ್ನೂ ಪೋರ್ಟಲ್‌ನಲ್ಲಿ ಹಂಚಿಕೊಳ್ಳಬೇಕು. ಜೊತೆಗೆ ಈ ಹಾಸಿಗೆ ಲಭ್ಯತೆಯ ಮಾಹಿತಿಯನ್ನು ಆಸ್ಪತ್ರೆಯ ಸಹಾಯ ಕೇಂದ್ರಗಳ ಬಳಿ ಫಲಕದಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು.

ಕೆಲವು ಆಸ್ಪತ್ರೆಗಳು ವೆಂಟಿಲೇಟರ್‌ ಅಳವಡಿಸಿರುವ ಹಾಸಿಗೆಗಳ ಮಾಹಿತಿ ಬಿಟ್ಟುಕೊಡುತ್ತಿರಲಿಲ್ಲ. ಇಂತಹ ಹಾಸಿಗೆಗಳನ್ನು ಕಾಯ್ದಿರಿಸಿಕೊಂಡು ಚಿಕಿತ್ಸೆಗೆ ಹೆಚ್ಚು ಹಣ ಭರಿಸುವವರಿಗೆ ಅದನ್ನು ಒದಗಿಸುತ್ತಿದ್ದವು.

‘ಹಾಸಿಗೆ ಹಂಚಿಕೆ ವ್ಯವಸ್ಥೆಯಲ್ಲಿ ಇನ್ನುಷ್ಟು ಪಾರದರ್ಶಕತೆ ತರಲು ಈವ್ಯವಸ್ಥೆ ಅನುಕೂಲ ಕಲ್ಪಿಸಲಿದೆ’ ಎಂದು ಬಿಬಿಎಂಪಿ ಹೇಳಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 11 ಸಾವಿರ ಹಾಸಿಗೆಗಳು ಹಾಸಿಗೆಗಳ ನಿರ್ವಹಣೆಯ ಕೇಂದ್ರೀಕೃತ ವ್ಯವಸ್ಥೆಯ ಅಡಿ ನೊಂದಾಯಿಸಿವೆ. ಅದರಂತೆ ಕಳೆದ ಐದು ದಿನಗಗಳಲ್ಲಿ 5,013 ಹಾಸಿಗೆಗಳನ್ನು ಈ ವ್ಯವಸ್ಥೆಯ ಮೂಲಕ ಹಂಚಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT