ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸ್ಥಾನಮಾನಕ್ಕಾಗಿ ಹೋರಾಟ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಶಕ್ಕೆ

Last Updated 20 ಜನವರಿ 2023, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಶಿಕ್ಷಕರ ಸ್ಥಾನಮಾನ ನೀಡಿ, ಸೇವಾ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದು, ಈ ಕ್ರಮಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಜ. 18ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೂರನೇ ದಿನವಾದ ಶುಕ್ರವಾರವೂ ಪ್ರತಿಭಟನೆ ಮುಂದುವರಿದಿತ್ತು.

‘ಹಲವು ಬಾರಿ ಪ್ರತಿಭಟನೆ ನಡೆಸಿದರೂ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುತ್ತಿಲ್ಲ. ಈ ಬಾರಿ ಮುಖ್ಯಮಂತ್ರಿಯವರು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಪಟ್ಟು ಹಿಡಿದಿದ್ದ ಪ್ರತಿಭಟನಕಾರರು, ‘ಮುಖ್ಯಮಂತ್ರಿ ಸ್ಥಳಕ್ಕೆ ಬರದಿದ್ದರೆ, ಉದ್ಯಾನ ಎದುರಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ಎಚ್ಚರಿಸಿದರು.

‘ರಸ್ತೆಯಲ್ಲಿ ಪ್ರತಿಭಟನೆ ನಡೆದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಬಹುದು’ ಎಂದು ತಿಳಿದ ಪೊಲೀಸರು, ಪ್ರತಿಭಟನಕಾರರನ್ನು ಉದ್ಯಾನದಿಂದ ತೆರವು ಮಾಡಲು ಮುಂದಾದರು. ಮುಖಂಡರ ಜೊತೆ ಮಾತುಕತೆ ನಡೆಸಿದ ಮಹಿಳಾ ಪೊಲೀಸ್ ಅಧಿಕಾರಿಗಳು, ಪ್ರತಿಭಟನೆ ಕೈ ಬಿಡುವಂತೆ ಕೋರಿದರು. ಅದಕ್ಕೆ ಮುಖಂಡರು ಒಪ್ಪಲಿಲ್ಲ.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಪೊಲೀಸರು, ರಸ್ತೆ ಸಂಚಾರ ತಡೆ ನೆಪ ಹೇಳಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ಗಳಲ್ಲಿ ನಗರದ ಹಲವು ಮೈದಾನಗಳಿಗೆ ಕರೆದೊಯ್ದು ರಾತ್ರಿಯವರೆಗೂ ಇರಿಸಿಕೊಂಡರು.

ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ವಶಕ್ಕೆ ಪಡೆಯುವ ವೇಳೆ, ಅವರ ಮಕ್ಕಳು ಕಣ್ಣೀರಿಟ್ಟು ಗೋಳಾಡಿದರು. ವಶಕ್ಕೆ ಪಡೆದ ಕ್ರಮದ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು.

ಪೊಲೀಸರ ಮೂಲಕ ಪ್ರತಿಭಟನೆಗೆ ಅಡ್ಡಿ: ‘ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುವ ಉದ್ದೇಶ ನಮಗಿರಲಿಲ್ಲ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ಏಕಾಏಕಿ ಬಂದು ಎಲ್ಲರನ್ನೂ ವಶಕ್ಕೆ ಪಡೆದು ಮೈದಾನಕ್ಕೆ ತಂದು ಕೂರಿಸಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಪೀಡಿಸುತ್ತಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರೇಮಾ ದೂರಿದರು.

‘ನಾವು ಯಾರೂ ರಸ್ತೆಗೆ ಹೋಗಿರಲಿಲ್ಲ. ಪೊಲೀಸರೇ ಬಿಎಂಟಿಸಿ ಬಸ್ ಹಾಗೂ ತಮ್ಮ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರು. ನಾವೇ ಅಡ್ಡಿಪಡಿಸಿದ್ದೇವೆಂದು ಹೇಳಿ ನಮ್ಮನ್ನೆಲ್ಲ ವಶಕ್ಕೆ ಪಡೆದಿದ್ದಾರೆ. ಇದು ಖಂಡನೀಯ. ರಾಜ್ಯ ಸರ್ಕಾರವೇ ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದೆ’ ಎಂದು ಅವರು ಆರೋಪಿಸಿದರು.

‘ಸರ್ಕಾರದ್ದು ಅಮಾನವೀಯ ವರ್ತನೆ’
‘ಪ್ರತಿಭಟನೆಯಲ್ಲಿದ್ದ ಎಲ್ಲರನ್ನೂ ವಶಕ್ಕೆ ಪಡೆದು ಮೈದಾನಕ್ಕೆ ಕರೆತರಲಾಗಿದೆ. ಮಹಿಳೆಯರಾದ ನಮ್ಮನ್ನು ರಾಜ್ಯ ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ’ ಎಂದು ಪ್ರೇಮಾ ಕಿಡಿಕಾಡಿದರು.

‘ಊರಿಗೆ ಹೋಗುವಂತೆ ಒತ್ತಡ ಹೇರುತ್ತಿರುವ ಪೊಲೀಸರು, ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಿಟ್ಟು ಬರುವುದಾಗಿ ಹೇಳುತ್ತಿದ್ದಾರೆ. ಆದರೆ, ನಾವು ಶಾಂತಿಯುತ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT