ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಅಕ್ರಮ: ಜಮೀನು ಖರೀದಿಸಿದ್ದ ಪೌಲ್

ತಂದೆ ಹೆಸರಿನಲ್ಲಿ ಆಸ್ತಿ ನೋಂದಣಿ
Last Updated 15 ಜುಲೈ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು/ಚಿಕ್ಕಬಳ್ಳಾಪುರ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಆರೋಪದಡಿ ಬಂಧಿಸಲಾಗಿರುವ ಎಡಿಜಿಪಿ ಅಮ್ರಿತ್ ಪೌಲ್ (56) ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣದ ಪಾಲಿನಲ್ಲಿ ತೋಟ ಹಾಗೂ ಜಮೀನು ಖರೀದಿ ಮಾಡಿರುವ ಸಂಗತಿ ಸಿಐಡಿ ಅಧಿಕಾರಿಗಳ ತನಿಖೆಯಿಂದ ಹೊರಬಿದ್ದಿದೆ.

ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮ್ರಿತ್ ಪೌಲ್, ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಕೆಲ ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿದ್ದರು. ಅವರ ಮಧ್ಯಸ್ಥಿಕೆಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿರುವ ದಾಖಲೆಗಳು ಸಿಐಡಿಗೆ ಲಭ್ಯವಾಗಿವೆ.

‘ಪೊಲೀಸ್ ವೃತ್ತಿ ಆರಂಭಿಸಿದ ದಿನದಿಂದಲೂ ಅಮ್ರಿತ್ ಪೌಲ್, ಹಲವೆಡೆ ಆಸ್ತಿ ಮಾಡಿಕೊಂಡು ಬಂದಿದ್ದಾರೆ. ಕೇಂದ್ರ ವಲಯದ ಐಜಿಪಿ ಆಗಿದ್ದ ಸಂದರ್ಭದಲ್ಲೂ ಆಸ್ತಿ ಖರೀದಿಸಿದ್ದಾರೆ. 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ಆರಂಭವಾದ ನಂತರ ಮತ್ತಷ್ಟು ಆಸ್ತಿಗಳನ್ನು ಖರೀದಿ ಮಾಡಿರುವ ಮಾಹಿತಿ ಸಿಕ್ಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಂದೆ ಹೆಸರಿನಲ್ಲಿ ನೋಂದಣಿ: ‘ಫಾರ್ಮ್‌ಹೌಸ್, ಮಾವಿನ ತೋಟ, ರಾಗಿ ಬೆಳೆಯುವ ಕೃಷಿ ಭೂಮಿ... ಹೀಗೆ ಹಲವು ಆಸ್ತಿಗಳನ್ನು ಪೌಲ್ ಖರೀದಿ ಮಾಡಿದ್ದಾರೆ. ತಮ್ಮ ತಂದೆ ನೇತರಾಮ್ ಬನ್ಸಾಲ್ ಹೆಸರಿನಲ್ಲೇ ಆಸ್ತಿಗಳನ್ನು ನೋಂದಣಿ ಮಾಡಿಸಿದ್ದಾರೆ. ಇವುಗಳ ಪಹಣಿ ಪತ್ರಗಳನ್ನೂ ಈಗಾಗಲೇ ಜಪ್ತಿ ಮಾಡಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಕೇಂದ್ರ ವಿಭಾಗದ ಐಜಿಪಿ ಆಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರತಾಲ್ಲೂಕಿನ ನಂದಿ ಹೋಬಳಿಯ ಹೊಸ ಹುಡ್ಯ ಗ್ರಾಮದಲ್ಲಿ ಪೌಲ್ ಫಾರ್ಮ್‌ಹೌಸ್ (ಸರ್ವೇ ನಂಬರ್ 247) ಖರೀದಿಸಿದ್ದರು. ಫಾರ್ಮ್‌ಹೌಸ್ ಅಕ್ಕ–ಪಕ್ಕದಲ್ಲೇ ಮತ್ತಷ್ಟು ಜಮೀನು ಇದೆ. ಆ ಪೈಕಿ ಕೆಲ ಜಮೀನನ್ನು ಕೆಲ ತಿಂಗಳ ಹಿಂದೆಯಷ್ಟೇ ಪೌಲ್ ಖರೀದಿ ಮಾಡಿರುವುದು ಗೊತ್ತಾಗಿದೆ. ಪಿಎಸ್ಐ ಅಕ್ರಮದಿಂದ ಬಂದ ಹಣವನ್ನೇ ಇದಕ್ಕೆ ಬಳಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸುಮಾರು ನಾಲ್ಕು ಎಕರೆ ವಿಸ್ತೀರ್ಣದಲ್ಲಿರುವ ಫಾರ್ಮ್‌ಹೌಸ್ ಜಮೀನಿನಲ್ಲಿ ಮಾವು ಹಾಗೂ ಇತರೆ ಸಸಿಗಳನ್ನು ಬೆಳೆಯಲಾಗಿದೆ’ ಎಂದೂ ತಿಳಿಸಿವೆ.

ನೆಲಪ್ಪನಹಳ್ಳಿಯಲ್ಲಿ ಜಮೀನು: ‘ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ನೆಲಪ್ಪನಹಳ್ಳಿಯಲ್ಲಿ 8 ಎಕರೆ 29 ಗುಂಟೆ ಜಮೀನನ್ನು ಪೌಲ್ ಖರೀದಿ ಮಾಡಿದ್ದಾರೆ. ಈ ಆಸ್ತಿಯನ್ನೂ ತಂದೆ ನೇತರಾಮ್ ಬನ್ಸಾಲ್ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪಹಣಿಗಳನ್ನು ಈಗಾ ಗಲೇ ಪರಿಶೀಲಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನೆಲಪ್ಪನಹಳ್ಳಿಯ ಸರ್ವೇ ನಂಬರ್–49ರಲ್ಲಿ 4 ಎಕರೆ 39 ಗುಂಟೆ ಹಾಗೂ ಸರ್ವೇ ನಂಬರ್ 50ರಲ್ಲಿ 3 ಎಕರೆ 30 ಗುಂಟೆ ಜಮೀನನ್ನು ತಂದೆ ಹೆಸರಿನಲ್ಲಿ ಪೌಲ್ ಖರೀದಿ ಮಾಡಿದ್ದಾರೆ. ಜಾತವಾರ ಗ್ರಾಮದ ಜಗದೀಶ್ ಎಂಬುವರು ಮಧ್ಯಸ್ಥಿಕೆ ವಹಿಸಿ ಈ ಆಸ್ತಿ ಕೊಡಿಸಿದ್ದರು. ಜಗದೀಶ್ ಮನೆ ಮೇಲೂ ಇತ್ತೀಚೆಗೆ ದಾಳಿ ಮಾಡಿ, ಅವರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೇ ಮತ್ತಷ್ಟು ಜಿಲ್ಲೆಗಳಲ್ಲಿ ಪೌಲ್ ಆಸ್ತಿ ಖರೀದಿ ಮಾಡಿರುವ ಮಾಹಿತಿ ಇದೆ. ಎಲ್ಲ ಜಿಲ್ಲೆಗಳಿಗೂ ಹೋಗಿರುವ ವಿಶೇಷ ತಂಡಗಳು, ಆಸ್ತಿ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿವೆ. ಈ ಎಲ್ಲ ದಾಖಲೆಗಳನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗುವುದು’ ಎಂದೂ ಮೂಲಗಳು ಹೇಳಿವೆ.

‘ಹರಿಯಾಣದಲ್ಲೂ ಜಮೀನು ಖರೀದಿ’

‘ಪೌಲ್ ಅವರು ಹರಿಯಾಣದಲ್ಲೂ ಜಮೀನು ಖರೀದಿ ಮಾಡಿರುವ ಮಾಹಿತಿ ಇದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳಿಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕೆಲ ಬಿಲ್ಡರ್‌ಗಳ ಜೊತೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾದ ಪೌಲ್, ಅವರ ಜೊತೆ ಸೇರಿ ಸುಮಾರು 40 ಎಕರೆ ಖರೀದಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಸದ್ಯಕ್ಕೆ ಪುರಾವೆ ಲಭ್ಯವಾಗಿಲ್ಲ. ಬಿಲ್ಡರ್‌ಗಳನ್ನೂ ವಿಚಾರಣೆ ನಡೆಸಬೇಕಿದೆ’ ಎಂದೂ ತಿಳಿಸಿವೆ.

ವರದಿ: ಸಂತೋಷ್‌/ಪ್ರಶಾಂತ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT