ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಅಶ್ವತ್ಥನಾರಾಯಣ– ಡಿಕೆಶಿ ವಾಕ್ಸಮರ

Last Updated 2 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವರೊಬ್ಬರ ಸೋದರ ಭಾಗಿಯಾಗಿದ್ದಾರೆ ಎಂಬ ವಿಷಯ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

‘ಅಕ್ರಮದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರ ಸೋದರನ ಪಾತ್ರ ಇದೆ’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆರೋಪಿಸಿದ್ದರು. ಆ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ನನ್ನ ಏಳಿಗೆ ಸಹಿಸಲಾಗದ ಶಿವಕುಮಾರ್ ಅವರು ಮ್ಯಾಚ್‌ ಫಿಕ್ಸಿಂಗ್ ಮಾಡಿಕೊಂಡು ಕಟ್ಟುಕತೆಗಳನ್ನು ಸೃಷ್ಟಿಸಿದ್ದಾರೆ’ ಎಂದಿದ್ದಲ್ಲದೇ, ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೆಳವಣಿಗೆ ಸಹಿಸದೇ ಷಡ್ಯಂತ್ರ:ಡಾ.ಸಿ.ಎನ್‌.ಅಶ್ವತ್ಥನಾರಾಯಣ

l ಶಿವಕುಮಾರ್‌ ನನ್ನ ಸಹೋದರ ಸತೀಶ್‌ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷ್ಯ ನೀಡಲಿ. ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ ಇಲ್ಲ, ಆ ರೀತಿ ಇರಲಿಕ್ಕೆ ನಮ್ಮದು ಡಿಕೆಶಿ ಕುಟುಂಬವೂ ಅಲ್ಲ.

l ಪಿಎಸ್‌ಐ ನೇಮಕಾತಿ ವಿಚಾರದಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು ಮಾಡುವ ಪ್ರಶ್ನೆಯೇ ಇಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ.

lತನಿಖೆ ವರದಿ ಬಂದ ನಂತರ ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಶಿವಕುಮಾರ್‌ ಬಾಯಲ್ಲಿ ಹೇಳಿಕೆ ಬರುತ್ತದೆ ಎಂದರೆ ಅದರಲ್ಲಿ ದುರುದ್ದೇಶ ಇದ್ದೇ ಇರುತ್ತದೆ. ದರ್ಶನ್‌ಗೌಡ ಹೆಸರು ನಾನು ಈಗಲೇ ಕೇಳುತ್ತಿರುವುದು. ನನ್ನ ಅಣ್ಣ ಸತೀಶ್‌ಗೂ ಇದಕ್ಕೂ ಸಂಬಂಧ ಇಲ್ಲ.

lಶಿವಕುಮಾರ್ ಅವರಿಗೆ ನನ್ನ ಏಳಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಅವರು ಹಲವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಕಟ್ಟಕತೆಗಳನ್ನು ಸೃಷ್ಟಿಸುತ್ತಿದ್ದಾರೆ.

lಇಲ್ಲ ಸಲ್ಲದ ಆರೋಪ ಮಾಡಲು ಉಗ್ರಪ್ಪನಿಗೆ ನಾಚಿಕೆ ಆಗೋದಿಲ್ವ. ಭ್ರಷ್ಟಾಚಾರ ಮಾಡಿದ್ದರೆ ಹೇಳಲಿ. ಶಿವಕುಮಾರ್ ಭ್ರಷ್ಟ ಎಂದು ಇದೇ ಉಗ್ರಪ್ಪ ಹೇಳಿದ್ದರು. ಇಂಥ ಸಾವಿರ ಆರೋಪ ಮಾಡಿ ನನ್ನ ಮುಖಕ್ಕೆ ಮಸಿ ಬಳಿಯಲು ಆಗುವುದಿಲ್ಲ

lನನ್ನ ಜೀವನ ಅತ್ಯಂತ ಪಾರದರ್ಶಕ. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.

lನಾನು ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂಬ ಭಯ ಡಿಕೆಶಿ ಅವರಿಗಿದೆ. ಡಿಕೆಶಿ ಭ್ರಷ್ಟಾಚಾರದ ಬಂಡವಾಳವನ್ನು ಬಿಚ್ಚಿಡುತ್ತೇನೆ. ನಾನು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಭ್ರಷ್ಟಾಚಾರಿಗಳಾದ ಅವರಿಗೆ ಒಳಗೆ ಚುಚ್ಚುತ್ತಿರುತ್ತದೆ. ಅದನ್ನು ತಡೆಯಲಾಗದೇ ಇಂತಹ ಹೇಳಿಕೆ ಕೊಡುತ್ತಿದ್ದಾರೆ.

ಕುಂಬಳಕಾಯಿ ಕಳ್ಳ ಅಂದರೆ...:ಡಿ.ಕೆ.ಶಿವಕುಮಾರ್‌

l ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರ ಪಾತ್ರ ಇದೆ ಎಂದು ಮಾಧ್ಯಮಗಳು ಬಿಚ್ಚಿಟ್ಟಿವೆ. ನಾನು ಅದರ ಬಗ್ಗೆ ಮಾತನಾಡಿದ್ದೆ. ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?

lಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು.
ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ?

lಹೆಣದಲ್ಲಿ ಹಣ, ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಇವುಗಳನ್ನೆಲ್ಲಾ ನಾನು ಮಾಡಿದ್ದೀನಾ? ಈಗ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವಲ್ಲಾ? ಅದನ್ನು ನಾವು ಮಾಡಿದ್ದೇವಾ? ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿದೆಯಾ? ದರ್ಶನ್ ಗೌಡಗೆ ನೊಟೀಸ್ ಜಾರಿ ಮಾಡಿದ್ದೀರಿ. ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯ್ತಾ? ಅವನ ವಿರುದ್ಧ ಯಾವ ರೀತಿ ತನಿಖೆ ನಡೆದಿದೆ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಇದರ ಹಿನ್ನೆಲೆ ಏನು? ಯಾರು? ಸಮಯ ಬಂದಾಗ ಅದನ್ನೂ ಮಾಡುತ್ತೇವೆ.

lಸಚಿವರು ಹೇಳಿದಂತೆ ನಾನು ಗಡಗಡನೆ ನಡುಗುತ್ತಿದ್ದೇನೆ. ಈಗಲೂ ಭಯವಾಗುತ್ತಿದೆ. ಮೊದಲು ಅವರು ವಿವಿಧ ನೇಮಕಾತಿ ಅಕ್ರಮದಲ್ಲಿ ಯುವಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲಿ, ನಂತರ ಉಳಿದ ವಿಚಾರ ಮಾತನಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT