ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ₹50 ಲಕ್ಷಕ್ಕೆ ಹುದ್ದೆ ಮಾರಿದ್ದ ಸೂಪರಿಂಟೆಂಡೆಂಟ್‌

ಅಭ್ಯರ್ಥಿಯೊಂದಿಗೆ ಒಪ್ಪಂದ: ಡಿಜಿ–ಐಜಿಪಿ ಕಚೇರಿಗೂ ನಂಟು
Last Updated 9 ಆಗಸ್ಟ್ 2022, 5:29 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ ಆರೋಪಿ ಆರ್. ಮಂಜುನಾಥ್ (33), ಕಮಿಷನ್ ಆಸೆಗಾಗಿ ತಮ್ಮ ಪ್ರಭಾವ ಬಳಸಿ ಅಭ್ಯರ್ಥಿ ಎಚ್. ಯಶವಂತಗೌಡ (28) ಅವರನ್ನು ಅಕ್ರಮವಾಗಿ ಪಿಎಸ್‌ಐ ಹುದ್ದೆಗೆ ಆಯ್ಕೆ ಮಾಡಿಸಿದ್ದ ಮಾಹಿತಿಯನ್ನು ಸಿಐಡಿ ಪತ್ತೆ ಮಾಡಿದೆ.

ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 30ನೇ ಆರೋಪಿ ಆಗಿರುವ ಆರ್‌. ಮಂಜುನಾಥ್, ನೇಮಕಾತಿ ವಿಭಾಗದ ಎಫ್‌ಡಿಎ ಡಿ. ಹರ್ಷ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಜೊತೆ ಒಪ್ಪಂದ ಮಾಡಿಸಿದ್ದ ಸಂಗತಿ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

‘ಬೆಂಗಳೂರು ಶ್ರೀಗಂಧಕಾವಲು ಬಳಿಯ ‘ಡಿ’ ಗ್ರೂಪ್ ಲೇಔಟ್‌ ನಿವಾಸಿ ಮಂಜುನಾಥ್, ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ–ಐಜಿಪಿ) ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ (ಎಫ್‌ಡಿಎ) ಹಲವು ವರ್ಷ ಕೆಲಸ ಮಾಡಿದ್ದ. ಇದೇ ವೇಳೆಯೇ ಈತ, ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದ’ ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ.

‘ಪೊಲೀಸ್ ಇಲಾಖೆ ಪ್ರತಿನಿಧಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೂ ಆಯ್ಕೆಯಾಗಿದ್ದ ಮಂಜುನಾಥ್, ಅಭ್ಯರ್ಥಿಗಳನ್ನು ಅಕ್ರಮವಾಗಿ ಪಿಎಸ್‌ಐ ಮಾಡಿಸಿ, ಹಣ ಸಂಪಾದಿಸುವ ಸಂಚು ರೂಪಿಸಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

ಮೊದಲ ಕಂತಿನಲ್ಲಿ ₹ 45 ಲಕ್ಷ ಪಾವತಿ: ‘ಯಲಹಂಕ ತಾಲ್ಲೂಕಿನ ಸಿಂಗಜಾಲ ಹೋಬಳಿ ನಿವಾಸಿಯಾಗಿದ್ದ ಅಭ್ಯರ್ಥಿ ಎಚ್. ಯಶವಂತಗೌಡನನ್ನು (28) ಸಂಪರ್ಕಿಸಿದ್ದ ಆರ್‌. ಮಂಜುನಾಥ್, ₹ 50 ಲಕ್ಷ ನೀಡಿದರೆ ಪಿಎಸ್ಐ ಮಾಡಿಸುವುದಾಗಿ ಹೇಳಿದ್ದ. ಆತನ ಮಾತಿನಂತೆ ಹಣ ನೀಡಲು ಯಶವಂತಗೌಡ ಒಪ್ಪಿದ್ದ’ ಎಂಬ ಅಂಶವನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಎಫ್‌ಡಿಎ ಹರ್ಷ ಮೂಲಕ ಡಿವೈ ಎಸ್ಪಿ ಶಾಂತಕುಮಾರ್ ಅವರನ್ನು ಸಂಪ ರ್ಕಿಸಿದ್ದ ಮಂಜುನಾಥ್, ಯಶವಂತ ಗೌಡನನ್ನು ಪಿಎಸ್‌ಐ ಮಾಡಲು ₹ 50 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಮೊದಲ ಕಂತಿನಲ್ಲೇ ₹ 45 ಲಕ್ಷ ಸಹ ಪಾವತಿ ಮಾಡಲಾಗಿತ್ತು.’

‘ಹಣ ಪಡೆದಿದ್ದ ಡಿವೈಎಸ್ಪಿ, ಪೂರ್ವ ನಿಯೋಜಿತ ಸಂಚಿನಂತೆ ಯಶವಂತಗೌಡನ ಒಎಂಆರ್ ಪ್ರತಿ ತಿದ್ದುಪಡಿ ಮಾಡಿಸಿದ್ದ. ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 34.5 ಅಂಕ ಹಾಗೂ ಪತ್ರಿಕೆ–2ರಲ್ಲಿ (ಸಾಮಾನ್ಯ ಅಧ್ಯಯನ) 123.75 ಅಂಕ ಬಂದಿತ್ತು. ಒಟ್ಟು 158.25 ಅಂಕದೊಂದಿಗೆ ಯಶವಂತಗೌಡ, ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ವರ್ಗಾವಣೆಯಾದರೂ ಕಚೇರಿಬಿಡದ ಮಂಜುನಾಥ್’
‘ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ಆರ್‌. ಮಂಜುನಾಥ್‌ಗೆ ಕಳೆದ ವರ್ಷವಷ್ಟೇ ಸೂಪರಿಂಟೆಂಡೆಂಟ್‌ ಹುದ್ದೆಗೆ ಬಡ್ತಿ ಸಿಕ್ಕಿತ್ತು. ಡಿಜಿ–ಐಜಿಪಿ ಕಚೇರಿಯಿಂದ ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾವಣೆ ಮಾಡಲಾಗಿತ್ತು. ಆದರೆ, ಮಂಜುನಾಥ್ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಡಿಜಿ–ಐಜಿಪಿ ಕಚೇರಿಯಲ್ಲೇ ಮುಂದುವರಿಯಲು ಪ್ರಭಾವಿ ರಾಜಕಾರಣಿ ಮೂಲಕ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಐಎಸ್‌ಡಿ ವರ್ಗಾವಣೆ ರದ್ದುಪಡಿಸಿದ್ದ ಪೊಲೀಸ್ ಇಲಾಖೆ, ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿತ್ತು. ಅಲ್ಲಿಗೂ ಮಂಜುನಾಥ್ ಹೋಗಿರಲಿಲ್ಲ. ಡಿಜಿ–ಐಜಿಪಿ ಕಚೇರಿಗೇ ಆಗಾಗ ಹೋಗಿ ಬರುತ್ತಿದ್ದರು. ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ಎಂಬ ಕಾರಣಕ್ಕೆ, ಹಿರಿಯ ಅಧಿಕಾರಿಗಳು ಸಹ ಏನೂ ಕೇಳುತ್ತಿರಲಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT