ಗುರುವಾರ , ಆಗಸ್ಟ್ 11, 2022
21 °C
ಮೂರು ವರ್ಷದಲ್ಲಿ ಮೂರು ಸಾವಿರ ಅರ್ಜಿ ವಜಾ

ದುರ್ಬಲವಾಯ್ತು ‘ಪಿಟಿಸಿಎಲ್’ ಕಾಯ್ದೆ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಭೂಹೀನರನ್ನಾಗಿ ಮಾಡುವುದನ್ನು ತಡೆಯಲು ಜಾರಿಗೆ ತಂದ ಎಸ್‌ಸಿಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್) ಈಗ ಇದ್ದೂ ಇಲ್ಲದಂತಾಗಿದೆ. ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿ ಎಂಬ ಸುಪ್ರೀಂ ಕೋರ್ಟ್‌ ಆದೇಶದ ನಂತರ ರಾಜ್ಯದ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಜಾಗೊಂಡಿವೆ.

1924ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಭೂ ಒಡೆತನದ ಹಕ್ಕನ್ನು ಮೈಸೂರು ಅರಸರು ಕೊಟ್ಟರು. ಸ್ವಾತಂತ್ರ್ಯ ಬರುವ ಮೊದಲು ರಾಜರು, ಸ್ವಾತಂತ್ರ್ಯ ನಂತರ ಸರ್ಕಾರಗಳು ಮುಫತ್ತಾಗಿ ನೀಡಿದ ಭೂಮಿಯನ್ನು ನಿರ್ದಿಷ್ಟ ಕಾಲದವರೆಗೆ ಪರಭಾರೆ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸುತ್ತಿದ್ದರು.

ಮುಖ್ಯಮಂತ್ರಿ ಆಗಿದ್ದ ದೇವರಾಜ್ ಅರಸು ಅವರು 1979ರ ಜನವರಿ 1ರಿಂದ ಜಾರಿಗೆ ಬರುವಂತೆ ಪಿಟಿಸಿಎಲ್ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದರು. ಇದು ಬರುವ ಮುನ್ನ ಮತ್ತು ನಂತರ ಪರಿಶಿಷ್ಟರಿಗೆ ಮಂಜೂರಾಗುವ ಭೂಮಿಗಳ ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯ ಎಂಬ ಷರತ್ತು ಇತ್ತು.

ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮೂಲ ಮಂಜೂರಾತಿದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಬಹುದಿತ್ತು. ಪರಭಾರೆಯಾದ ಇಂತಿಷ್ಟೇ ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕಾಲಮಿತಿ ಇರಲಿಲ್ಲ. ಕಾಲಮಿತಿ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಂಡಿದ್ದವು.

ಆದರೆ, 2017ರ ಅಕ್ಟೋಬರ್ 26ರಲ್ಲಿ ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಸಮುಚಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿತು.

‘ಇದಾದ ನಂತರ ಪಿಟಿಸಿಎಲ್‌ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳಲ್ಲಿ ಪರಿಶಿಷ್ಟರಿಗೆ ವಿರುದ್ಧವಾದ ಆದೇಶಗಳು ಹೊರ ಬೀಳುತ್ತಿವೆ. ಭೂಮಿ ಪರಭಾರೆಯಾದ ನಿರ್ದಿಷ್ಟ ಸಮಯದೊಳಗೆ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ನಿರ್ದಿಷ್ಟ ಸಮಯ ಎಂದರೆ ಎಷ್ಟು ಎಂಬುದನ್ನೂ ಸುಪ್ರೀಂ ಕೋರ್ಟ್ ಹೇಳಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆ’ ಎಂಬುದು ಅರ್ಜಿದಾರರ ಅಳಲು.

‘ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ವಜಾಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಸುಪ್ರೀಂ ಕೋರ್ಟ್‌ ಮೊರೆ ಹೋದರೂ ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಭೂಮಿ ಕಳೆದುಕೊಂಡ ದಲಿತರು ಮರು ಮಂಜೂರಾತಿ ಪಡೆಯಲು ಸಾಧ್ಯವೇ ಇಲ್ಲವಾಗಿದೆ. ಪಿಟಿಸಿಎಲ್ ಕಾಯ್ದೆ ಇದ್ದೂ ಇಲ್ಲದಂತಾಗಿದೆ’ ಎಂದು ಹುಬ್ಬಳ್ಳಿಯ ಗೋಪಾಲನಾಯ್ಕ ಹೇಳಿದರು.

ಕಾಯ್ದೆಗೆ ತಿದ್ದುಪಡಿ ಅಗತ್ಯ: ನಾಗಮೋಹನದಾಸ್

‘ಭೂಮಿ ಎಂಬುದು ಕೇವಲ ಆರ್ಥಿಕ ಸಬಲೀಕರಣ ಮಾತ್ರವಲ್ಲ, ಅದು ಸಾಮಾಜಿಕ ಸಬಲೀಕರಣ ಕೂಡ. ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಸಂಬಂಧ ಅರ್ಜಿ ಹಾಕಲು ಕಾಲಮಿತಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಸರಿಯಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದರು.

‘ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು. ಕಾಯ್ದೆಗೆ ತಿದ್ದುಪಡಿ ತಂದು ಅರ್ಜಿ ಸಲ್ಲಿಸಲು ಕಾಲಮಿತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಇವರೆಡನ್ನೂ ಮಾಡದಿದ್ದರೆ ಕಾಯ್ದೆ ಇದ್ದರೂ ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಅಂಕಿ–ಅಂಶ(2018–2020)

ಆದೇಶವಾಗಿರುವ ಪ್ರಕರಣ; 3,488

ಬಾಕಿ ಇರುವ ಪ್ರಕರಣಗಳು; 9,518

ಒಟ್ಟು; 13,006

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು