ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ದಾಖಲಾತಿ: ಪಾಲನೆಯಾಗದ ನಿಯಮ

ಮಾರ್ಗಸೂಚಿ ಬಿಡುಗಡೆ ಮುನ್ನವೇ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿರುವ ಖಾಸಗಿ ಕಾಲೇಜುಗಳು
Last Updated 6 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಥಮ ಪಿಯುಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ಖಾಸಗಿ ಕಾಲೇಜುಗಳು ನಿಯಮ ಉಲ್ಲಂಘಿಸುತ್ತಿವೆ ಎಂದು ಪೋಷಕರು ಆಪಾದಿಸಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯು ಈವರೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿಲ್ಲ. ಆದರೂ, ನಗರದ ಖಾಸಗಿ ಅನುದಾನರಹಿತ ಕಾಲೇಜುಗಳು ಸಿಬಿಎಸ್‌ಇ/ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಗೆ ಪ್ರವೇಶ ನೀಡುತ್ತಿವೆ. ರೋಸ್ಟರ್‌ ನಿಯಮವನ್ನು ಪಾಲಿಸುತ್ತಿಲ್ಲ ಎಂದುಪೋಷಕರು ಆರೋಪಿಸಿದ್ದಾರೆ.

‘ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಸಂಯೋಜನೆವಾರು (ಕಲಾ, ವಾಣಿಜ್ಯ, ವಿಜ್ಞಾನ) ಲಭ್ಯವಿರುವ ಸೀಟುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್‌ ಪದ್ಧತಿಯಂತೆ ಹಂಚಿಕೆ ಮಾಡಬೇಕು ಎಂದು ಕಳೆದ ವರ್ಷದ ಮಾರ್ಗಸೂಚಿಯಲ್ಲಿದೆ. ಆದರೆ, ನಗರದಲ್ಲಿ ಯಾವ ಖಾಸಗಿ ಕಾಲೇಜುಗಳೂ ಈ ನಿಯಮ ಪಾಲಿಸುತ್ತಿಲ್ಲ’ ಎಂದು ಪೋಷಕರೊಬ್ಬರು ದೂರಿದರು.

‘ಮೆರಿಟ್‌ ಮತ್ತು ರೋಸ್ಟರ್‌ ನಿಯಮದಂತೆ ದಾಖಲು ಮಾಡಿಕೊಂಡರೆ, ಯಾವುದೇ ಸಂಯೋಜನೆಯ ವಿದ್ಯಾರ್ಥಿಗೆ ಗರಿಷ್ಠ ₹4 (ಪ್ರಯೋಗಾಲಯ ಶುಲ್ಕ ಸೇರಿ) ಪಡೆಯಬಹುದು. ಆದರೆ, ಖಾಸಗಿ ಅನುದಾನರಹಿತ ಕಾಲೇಜುಗಳು ₹90 ಸಾವಿರದಿಂದ ಲಕ್ಷದವರೆಗೆ ಶುಲ್ಕ ವಸೂಲಿ ಮಾಡುತ್ತಿವೆ’ ಎಂದು ಅವರು ಆರೋಪಿಸಿದರು.

‘ನಾಗರಭಾವಿಯ ಸುತ್ತ–ಮುತ್ತ ಇರುವ ಐದಾರು ಕಾಲೇಜುಗಳಿಗೆ ತೆರಳಿ ವಿಚಾರಿಸಿದೆ. ಇಂಥದ್ದೊಂದು ನಿಯಮ ಇದೆ ಎಂಬುದೇ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಈ ನಿಯಮವನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದೂ ಹೇಳುತ್ತಾರೆ’ ಎಂಬುದಾಗಿ ಅವರು ದೂರಿದರು.

‘ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರಿಗೆ ಪ್ರವೇಶ ನೀಡುತ್ತಾರೆ. ಹೀಗೆ ದಾಖಲು ಮಾಡಿಕೊಂಡವರಲ್ಲಿಯೇ ವರ್ಗೀಕರಿಸಿ, ರೋಸ್ಟರ್‌ ಸಿದ್ಧಮಾಡುತ್ತಾರೆ. ನಿಯಮದ ಅನುಸಾರವೇ ದಾಖಲಾತಿ ಮಾಡಿಕೊಳ್ಳಲಾಗಿದೆ ಎಂದು ಕೊನೆಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬೇಕಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT