ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕರ್ನಾಟಕಕ್ಕೂ ಒಂದು ಏಮ್ಸ್‌!

Last Updated 4 ಸೆಪ್ಟೆಂಬರ್ 2020, 1:55 IST
ಅಕ್ಷರ ಗಾತ್ರ

‘ದೆಹಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಮಾದರಿ ಆಸ್ಪತ್ರೆಯನ್ನು ಕರ್ನಾಟಕದಲ್ಲಿಯೂ ಆರಂಭಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಹಣಕಾಸು ಇಲಾಖೆಯ ಅನುಮೋದನೆಯೂ ಶೀಘ್ರ ದೊರಕಲಿದೆ..’

-ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ ಅಡಿ ₹ 150 ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ನಿರ್ಮಿಸಿರುವ ಟ್ರಾಮಾ ಕೇರ್‌ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪೈಕಿ ಟ್ರಾಮಾ ಕೇರ್‌ ಅನ್ನು ಆಗಸ್ಟ್‌ 31ರಂದು ದೆಹಲಿಯಿಂದಲೇ ಉದ್ಘಾಟಿಸಿದ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ಅವರ ಈ ಹೇಳಿಕೆಯು ರಾಜ್ಯದ ಜನರಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ.

ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ‘ಕಲಬುರ್ಗಿಯಲ್ಲಿರುವ ಆಸ್ಪತ್ರೆಯನ್ನೇ ಏಮ್ಸ್‌ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು’ ಎಂಬ ಕೋರಿಕೆಯನ್ನೂ ಮಂಡಿಸಿ ಗಮನ ಸೆಳೆದಿದ್ದನ್ನು ಕಡೆಗಣಿಸುವಂತಿಲ್ಲ.

ವೈದ್ಯಕೀಯ ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡೇ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಸ್ಥಾಪಿಸುತ್ತಿದೆ.

ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿಯವರ ಕೋರಿಕೆಯನ್ನೂ ಗಮನಿಸಬೇಕು. ಪ್ರಾದೇಶಿಕ ಅಸಮಾನತೆಯನ್ನು ನೀಗಿಸಬೇಕೆಂಬ ಉತ್ತರ ಕರ್ನಾಟಕದ ದಶಕಗಳ ಕೂಗಿಗೆ ಇನ್ನೂ ರಾಜ್ಯ ಸರ್ಕಾರವೇ ಸಮರ್ಪಕವಾಗಿ ಸ್ಪಂದಿಸಲು ಆಗಿಲ್ಲ.

ಇಂಥ ಸನ್ನಿವೇಶದ ನಡುವೆಯೇ, ಕಲಬುರ್ಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೋರಿಕೆ ಬಂದಿದೆ. ಹೊಸದಾಗಿ ಏಮ್ಸ್‌ ಆಸ್ಪತ್ರೆಯನ್ನು ಆರಂಭಿಸುವುದಕ್ಕಿಂತಲೂ ಇರುವುದನ್ನೇ ಮೇಲ್ದರ್ಜೆಗೇರಿಸಿದರೆ ಸಾಕು ಎಂಬ ಅಲ್ಪತೃಪ್ತಿಯೇ? ಅಥವಾ ಪ್ರಾದೇಶಿಕ ಅಸಮಾನತೆ ನೀಗಲಿ ಎಂಬ ಉದ್ದೇಶವೇ? ಉತ್ತರಿಸುವುದು ಕಷ್ಟ.

ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರು ಮೊದಲ ಆರೋಗ್ಯ ಸಚಿವೆ ರಾಜಕುಮಾರಿ ಅಮೃತ್‌ಕೌರ್‌ ಅವರ ಸಹಯೋಗದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ದೆಹಲಿಯಲ್ಲಿ ಏಮ್ಸ್‌ ಸ್ಥಾಪಿಸುವ ಕಾಲಘಟ್ಟದಲ್ಲಿ ಇಂಥ ಸಮಾನತೆ–ಅಸಮಾನತೆಯ ಹೋಲಿಕೆಯೇನೂ ಢಾಳಾಗಿ ಇರಲಿಲ್ಲ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆಯನ್ನು ನೀಡುವ ಅನನ್ಯವಾದ ಸಂಸ್ಥೆಯೊಂದು ಅತ್ಯಗತ್ಯ ಮತ್ತು ಅನಿವಾರ್ಯ ಎಂಬ ಪ್ರಮುಖ ಆಲೋಚನೆಯಿಂದ ಏಮ್ಸ್‌ ಕನಸು ಹುಟ್ಟಿತ್ತು.

ವಿಶೇಷ ಎಂದರೆ, 1956ರಲ್ಲಿ ದೆಹಲಿಯಲ್ಲಿ ಏಮ್ಸ್‌ ಅಸ್ತಿತ್ವಕ್ಕೆ ಬರುವ ಹತ್ತು ವರ್ಷ ಮುಂಚೆ ಮತ್ತು ದೇಶಕ್ಕೆ ಸ್ವಾತಂತ್ರ್ಯದೊರಕುವ ಒಂದು ವರ್ಷ ಮುಂಚೆ ಅಸ್ತಿತ್ವದಲ್ಲಿದ್ದ ಆರೋಗ್ಯ ಸಮೀಕ್ಷೆ ಮತ್ತು ಅಭಿವೃದ್ಧಿ ಸಮಿತಿಯ ಜೋಸೆಫ್‌ ಬೋರೆ ಅವರು ಅಖಿಲ ಭಾರತ ಮಟ್ಟದಲ್ಲಿ ಏಮ್ಸ್‌ನಂಥ ಸಂಸ್ಥೆಯೊಂದನ್ನು ಸ್ಥಾಪಿಸುವುದು ಅಗತ್ಯ ಎಂಬ ಶಿಫಾರಸನ್ನು ಕೊಟ್ಟಿದ್ದರು.

ಈ ಶಿಫಾರಸಿನ ಹಿನ್ನೆಲೆಯಲ್ಲಿ ಮೂಡಿದ್ದ ಪ್ರಸ್ತಾವನೆಯು ಸಮ್ಮತವೆನ್ನಿಸಿದ ಪರಿಣಾಮವಾಗಿ ನ್ಯೂಜಿಲೆಂಡ್‌ ಸರ್ಕಾರದ ನೆರವಿನೊಂದಿಗೆ ದೆಹಲಿಯ ಏಮ್ಸ್‌ಗೆ 1952ರಲ್ಲಿ ಅಡಿಗಲ್ಲನ್ನು ಹಾಕಲಾಯಿತು. ಸಂಸತ್ತಿನಲ್ಲಿ All India Institute Of Medical Sciences act 1956ರಲ್ಲಿ ಅನುಮೋದನೆ ಪಡೆಯಿತು. ಅದೇ ವರ್ಷ ಏಮ್ಸ್‌ ಆರಂಭವೂ ಆಯಿತು.

ಇದು ಮಹತ್ವಾಕಾಂಕ್ಷೆಯ ಆರಂಭ. ಆದರೆ ಈ ಆರಂಭದ ಸಂಭ್ರಮವು ಕ್ರಮೇಣ ಇಡೀ ದೇಶಕ್ಕೆ ವ್ಯಾಪಿಸಬೇಕೆಂಬ ಮಹತ್ವಾಕಾಂಕ್ಷೆ ಮಾತ್ರ ಸುಮಾರು ಐದು ದಶಕ ಮಕಾಡೆ ಮಲಗಿತ್ತು ಎಂಬುದೇ ವಿಷಾದದ ಸಂಗತಿ.

ಅಟಲ್‌ ಬಿಹಾರಿ ವಾಜಪೇಯಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವವರೆಗೂ (1999–2004) ದೇಶದ ವಿವಿಧ ರಾಜ್ಯಗಳಲ್ಲಿ ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ಆರಂಭಿಸುವ ಗಟ್ಟಿ ಪ್ರಸ್ತಾಪವೇ ಇರಲಿಲ್ಲ. ಸರ್ಕಾರಗಳು ಕೂಡ ಈ ವಿಷಯದಲ್ಲಿ ನಿರ್ಲಿಪ್ತವಾಗಿಯೇ ಇದ್ದಿರಬಹುದು. ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ಆರಂಭಿಸುವಲ್ಲಿ ವಾಜಪೇಯಿ ಅವರ ಕೊಡುಗೆ ದೊಡ್ಡದು ಎಂದು ಬಿಜೆಪಿ ಮುಖಂಡರು ಬಣ್ಣಿಸುತ್ತಾರೆ.

ವಾಜಪೇಯಿ ಅವರ ಅವಧಿಯಲ್ಲೇ ಒಡಿಶಾದ ಭುವನೇಶ್ವರ್‌, ರಾಜಸ್ತಾನದ ಜೋಧ್‌ಪುರ, ಬಿಹಾರದ ಪಾಟ್ನಾ, ಛತ್ತೀಸ್‌ಘಡದ ರಾಯಪುರ, ಉತ್ತರಾಖಂಡದ ರಿಶಿಕೇಶ್‌ ಮತ್ತು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಏಮ್ಸ್‌ ಮಾದರಿ ಆಸ್ಪತ್ರೆಗಳು ಆರಂಭವಾದವು.

ನಂತರದ ದಶಕಗಳಲ್ಲಿ ದೇಶದ ಇನ್ನಿತರೆ ರಾಜ್ಯಗಳಲ್ಲಿ ಆರಂಭವಾದರೂ ಯಾವುದೂ ಪೂರ್ಣಪ್ರಮಾಣದಲ್ಲಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಯಲ್ಲಿ ತೊಡಗಿಲ್ಲ ಎಂಬುದು ವಿಪರ್ಯಾಸ. ಅಂದರೆ, ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯನ್ನು ಪರಿಗಣಿಸಿದರೆ, ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಮ್ಸ್‌ ಆಸ್ಪತ್ರೆಗಳು ಕೇವಲ ಏಳು!

ಉಳಿದವುಗಳ ಕತೆ ಏನು? ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಕುತೂಹಲಕಾರಿ ಮಾಹಿತಿಗಳಿವೆ.

ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ದೆಹಲಿಯದ್ದೂ ಸೇರಿ ಏಳು ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಎಂಬಿಬಿಎಸ್‌ ಪದವಿ ತರಗತಿಗಳು ಮತ್ತು ಹೊರರೋಗಿ ಘಟಕ ಕೇವಲ 5 ಆಸ್ಪತ್ರೆಗಳಲ್ಲಷ್ಟೇ (ಉತ್ತರಪ್ರದೇಶದ ರಾಯಬರೇಲಿ ಮತ್ತು ಗೋರಖ್‌ಪುರ, ಆಂಧ್ರಪ್ರದೇಶದ ಮಂಗಳಗಿರಿ, ಮಹಾರಾಷ್ಟ್ರದ ನಾಗಪುರ, ಪಂಜಾಬ್‌ನ ಬತಿಂಡ) ಆರಂಭವಾಗಿವೆ.

ತೆಲಂಗಾಣದ ಬೀಬಿನಗರ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಜಾರ್ಖಂಡ್‌ನ ಡಿಯೋಗರ್‌ ಆಸ್ಪತ್ರೆಗಳಲ್ಲಿ ಎಂಬಿಬಿಎಸ್‌ ತರಗತಿಗಳಷ್ಟೇ ನಡೆಯುತ್ತಿವೆ.

ಆರೋಗ್ಯಸೇವೆ ಮತ್ತು ವೈದ್ಯಕೀಯ ಶಿಕ್ಷಣ, ಸಂಶೋಧನೆಯ ಚಟುವಟಿಕೆಗಳು ಇನ್ನೂ ಪ್ರಗತಿಯಲ್ಲಿರುವ ಆಸ್ಪತ್ರೆಗಳು 8. ಛತ್ತೀಸ್‌ಘಡದ ಬಿಲಾಸ್‌ಪುರ, ಅಸ್ಸಾಂನ ಗುವಾಹಟಿ, ಗುಜರಾತ್‌ನ ರಾಜಕೋಟ್‌, ಜಮ್ಮುವಿನ ಸಾಂಬಾ, ಕಾಶ್ಮೀರದ ಆವಂತಿಪುರ, ಹರಿಯಾಣದ ಮನೇಥಿ, ತಮಿಳುನಾಡಿನ ಮಧುರೈ ಮತ್ತು ಬಿಹಾರದಲ್ಲಿ ಈ ಪರಿಸ್ಥಿತಿ ಇದೆ.

ಇವುಗಳ ಪೈಕಿ 9 ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2 ಆಸ್ಪತ್ರೆಗಳಿಗೆ ಪರ್ಯಾಯ ನಿವೇಶನಗಳನ್ನು ಹುಡುಕಲಾಗಿದೆ. ಬಿಹಾರದ ಆಸ್ಪತ್ರೆಗೆ ಸಚಿವ ಸಂಪುಟದ ಅನುಮೋದನೆ ಇನ್ನೂ ದೊರಕಬೇಕಾಗಿದೆ.

ಈ ಅಂಕಿ ಅಂಶದ ಕನ್ನಡಿಯನ್ನು ಕರ್ನಾಟಕದ ಮುಂದೆ ಇಟ್ಟರೆ ರಾಜ್ಯದ ಯಾರಿಗೇ ಆದರೂ ನಿರಾಶೆಯಾಗುತ್ತದೆ. ಏಕೀಕರಣ ಹೋರಾಟಕ್ಕೆ ಮುನ್ನುಡಿ ಬರೆದು, ಭಾಷಾವಾರು ಪ್ರಾಂತ್ಯಗಳ ವಿಭಜನೆಗೆ ಬಾಗಿಲು ತೆರೆದ ಕರ್ನಾಟಕಕ್ಕೆ ಏಮ್ಸ್‌ ಆಸ್ಪತ್ರೆ ಇನ್ನೂ ಬಂದಿಲ್ಲ.

ಆದರೆ ಏಕೀಕರಣ ಹೋರಾಟದ ಬಳಿಕ ರೂಪುಗೊಂಡ ಆಂಧ್ರಪ್ರದೇಶದಲ್ಲಿ ಆಸ್ಪತ್ರೆ ಇದೆ. 2018ರಲ್ಲಿ ಆಂಧ್ರದಿಂದ ವಿಭಜನೆಗೊಂಡು ಪ್ರತ್ಯೇಕ ಅಸ್ತಿತ್ವ ಪಡೆದ ತೆಲಂಗಾಣ ರಾಜ್ಯದಲ್ಲೂ ಏಮ್ಸ್‌ ಆಸ್ಪತ್ರೆ ಸ್ಥಾಪನೆಯಾಗಿದೆ. ದಕ್ಷಿಣ ಭಾರತದ ಮಟ್ಟಿಗೆ ಇದು ಸಮಾಧಾನ ತರುವ ವಿಷಯವೇ. ಆದರೆ ಕರ್ನಾಟಕದ ಮಟ್ಟಿಗೆ ಅನ್ಯಾಯವೇ. ಏಕೆಂದರೆ ಇಲ್ಲಿ ಆಸ್ಪತ್ರೆಯನ್ನು ಸ್ಥಾಪಿಸುವ ಮಾತುಗಳು ಈಗಷ್ಟೇ ಕೇಳಿ ಬರುತ್ತಿವೆ. ‘ಕರ್ನಾಟಕ’ ಹುಟ್ಟಿ ದಶಕಗಳುರುಳಿವೆ.

ಪ್ರಾದೇಶಿಕ ಅಸಮಾನತೆಯನ್ನು ನೀಗಿಸುವುದು ಅಭಿವೃದ್ಧಿಯ ದೃಷ್ಟಿಯಿಂದ ಅಲ್ಲದೆ, ರಾಜಕೀಯ ಮೇಲಾಟದ ಭಾಗವಾಗಿ ನಡೆದರೆ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ‘ಪ್ರತಿಯೊಂದು ರಾಜ್ಯದಲ್ಲೂ ಒಂದು ಏಮ್ಸ್‌ ಆಸ್ಪತ್ರೆ’ ಎಂಬ ಪ್ರಾಮಾಣಿಕ ಆಶಯವೊಂದು ಇದ್ದಿದ್ದರೆ ಕರ್ನಾಟಕದಲ್ಲಿ ಈ ಹೊತ್ತಿಗೆ ಕಲಬುರ್ಗಿಯಲ್ಲೋ, ಬೆಂಗಳೂರಿನಲ್ಲೋ ಆಸ್ಪತ್ರೆ ಕೆಲಸ ಮಾಡುತ್ತಿರುತ್ತಿತ್ತು. ಆದರೆ ಹಾಗೆ ಆಗಿಲ್ಲ.

ಅದರ ಬದಲಿಗೆ, ಬಿಹಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಎರಡು ಏಮ್ಸ್‌ ಆಸ್ಪತ್ರೆಗಳಿವೆ. ಕೇರಳ, ಕರ್ನಾಟಕದಲ್ಲಿ ಒಂದೂ ಇಲ್ಲ. ಹೀಗಾಗಿ ‘ಒಳ್ಳೆಯ ದಿನ’ ಬರಲಿದೆ ಎಂಬ ಮಾತನ್ನು ನಂಬಿ ಕಾಯುವುದಷ್ಟೇ ಕರ್ನಾಟಕದ ಜನರ ಪಾಲಿಗೆ ಉಳಿದಿರುವ ಅವಕಾಶ.

ಹೀಗೆ ಹೇಳಲು ಗಟ್ಟಿ ಕಾರಣವೂ ಇದೆ. ರಾಯಪುರದಲ್ಲಿ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ಇಟ್ಟಿದ್ದು 2003ರ ಆಗಸ್ಟ್‌ 16ರಂದು. ಬೋಧಕ ಸಿಬ್ಬಂದಿಯ ಸಂದರ್ಶನ ನಡೆದಿದ್ದು, ಅದಾಗಿ 9 ವರ್ಷಗಳ ಬಳಿಕ, 2012ರಂದು.

ರಾಯಬರೇಲಿಯ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ ದೊರಕಿದ್ದು 2009ರ ಫೆಬ್ರುವರಿಯಲ್ಲಿ. ಅಧಿಸೂಚನೆ ಹೊರಬಿದ್ದಿದ್ದು 2013ರಲ್ಲಿ. ಆಸ್ಪತ್ರೆಗೆ ಬೇಕಾದ 148 ಎಕರೆ ಪೈಕಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಸದ್ಯ ನೀಡಿರುವುದು 97 ಎಕರೆ. ಉಳಿದ 51 ಎಕರೆಯ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ!

ಇನ್ನು, ಕರ್ನಾಟಕದಲ್ಲಿ ಏ‌ಮ್ಸ್‌ ಆಸ್ಪತ್ರೆ ಯಾವಾಗ ಬರಬಹುದು? ರಾಜ್ಯದ ಜನರಂತೂ ಆಶಾವಾದಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT