ಮಂಗಳವಾರ, ಜನವರಿ 19, 2021
17 °C

ರೋಷನ್‌ ಬೇಗ್‌ 3 ದಿನ ಸಿಬಿಐ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರನ್ನು ಸಿಬಿಐ ತನಿಖಾ ತಂಡ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ಪಡೆದಿದೆ.

ಭಾನುವಾರ ಬೆಳಿಗ್ಗೆ ವಿಚಾರಣೆಗಾಗಿ ಬೇಗ್‌ ಅವರನ್ನು ವಶಕ್ಕೆ ಪಡೆದಿತ್ತು. ಅದೇ ದಿನ ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ರೋಷನ್‌ ಬೇಗ್‌ ಬಂಧನದ ಬಳಿಕ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಅಹಮ್ಮದ್ ಖಾನ್‌, ಪಿ.ಡಿ. ಕುಮಾರ್‌ ಅಲಿಯಾಸ್‌ ಬಿಡಿಎ ಕುಮಾರ್‌ ಅವರನ್ನೂ ಸಿಬಿಐ ವಿಚಾರಣೆ ನಡೆಸಿದೆ. ಐಪಿಎಸ್‌ ಅಧಿಕಾರಿಗಳಾದ ಹೇಮಂತ್‌ ನಿಂಬಾಳ್ಕರ್‌ ಮತ್ತು ಅಜಯ್‌ ಹಿಲೋರಿ ಅವರ ವಿಚಾರಣೆಯೂ ನಡೆದಿದೆ. ಈ ಎಲ್ಲರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಮತ್ತೊಮ್ಮೆ ಬೇಗ್‌ ಅವರನ್ನು ವಿಚಾರಣೆ ನಡೆಸಲು ತನಿಖಾ ತಂಡ ನಿರ್ಧರಿಸಿದೆ.

ಹೆಚ್ಚಿನ ವಿಚಾರಣೆಗಾಗಿ ಬೇಗ್‌ ಅವರನ್ನು ತಮ್ಮ ವಶಕ್ಕೆ ನೀಡುವಂತೆ ತನಿಖಾಧಿಕಾರಿ ಬುಧವಾರ ಸಲ್ಲಿಸಿದ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಮಾನ್ಯ ಮಾಡಿದರು. ಮೂರು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಿದ್ದು, ನವೆಂಬರ್‌ 28ರ ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು