ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಮಸ್ಕಿ ಜಲಾಶಯದಲ್ಲಿ 22 ಅಡಿ ನೀರು: ಉತ್ತರ ಕರ್ನಾಟಕ, ಕರಾವಳಿಯಲ್ಲೂ ಮಳೆ

ಕಲ್ಯಾಣ ಕರ್ನಾಟಕ: ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ರಾಯಚೂರು: ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಉತ್ತಮ ಮಳೆಯಾಗಿದೆ. ತಗ್ಗುಪ್ರದೇಶದಲ್ಲಿ ಮನೆಗಳಿಗೆ ನೀರು ಹರಿದಿದ್ದು, ಜನರು ತೊಂದರೆ ಅನುಭವಿಸಿದರು.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಗಾಂಧಿನಗರದ ನಾಲ್ಕು ವಾರ್ಡ್‌ಗಳು ಜಲಾವೃತವಾಗಿದ್ದದ್ದು, ಪ್ರಕಾಶನಗರದಲ್ಲಿ 10 ಕುರಿಗಳು ಸತ್ತಿವೆ.

ಐವರು ಯುವಕರ ರಕ್ಷಣೆ: ಮಸ್ಕಿ ತಾಲ್ಲೂಕು ಹಾಲಾಪುರ ಹಳ್ಳವು ತುಂಬಿ ಹರಿಯುತ್ತಿದ್ದು, ದೇವದುರ್ಗದಿಂದ ಬೆಂಗಳೂರಿಗೆ ಬೈಕ್‌ಗಳಲ್ಲಿ ಹೊರಟಿದ್ದ ಐವರು ಯುವಕರು ಸಿಲುಕಿಕೊಂಡರು. ಅವರನ್ನು ಸ್ಥಳೀಯರು ರಕ್ಷಿಸಿದರು. ಅವರ ಬೈಕ್‌ಗಳು ಕೊಚ್ಚಿಹೋದವು.

ಮಾನ್ವಿ, ಸಿಂಧನೂರು, ದೇವದುರ್ಗ, ರಾಯಚೂರು, ಸಿರವಾರ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಕೆಲ ಗ್ರಾಮಗಳಿಗೆ ಸಂಚಾರ ಸ್ಥಗಿತ ಗೊಂಡಿದೆ. 29 ಅಡಿ ಸಾಮರ್ಥ್ಯದ ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಭಾನುವಾರ 22 ಅಡಿ ನೀರು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಗಿ ಹೋಬಳಿ: 112.2 ಮಿ.ಮೀ ಮಳೆ: ಯಾದಗಿರಿ ಜಿಲ್ಲೆಯ ಶಹಾಪುರತಾಲ್ಲೂಕಿನ ಗೋಗಿ ಹೋಬಳಿ ವ್ಯಾಪ್ತಿಯಲ್ಲಿ ದಾಖಲೆಯ 112.2 ಮಿ.ಮೀ ಮಳೆ ದಾಖಲಾಯಿತು. ಸುರಪುರ ತಾಲ್ಲೂಕಿನಲ್ಲಿ ಸತ್ಯಂಪೇಟ, ಕರ್ನಾಳ, ರಂಗಂಪೇಟೆ, ದೇವರಗೋನಾಲ, ಚಿಗರಿಹಾಳಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಕಲಬುರ್ಗಿ, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಯ ವಿವಿಧೆಡೆಯೂ ಉತ್ತಮ ಮಳೆಯಾಗಿದೆ. ‘ಮಹಾರಾಷ್ಟ್ರದಲ್ಲಿ ‌ಮಳೆ ಹೆಚ್ಚಿದ್ದು, ಅಫಜಲಪುರ ಹಾಗೂ ಜೇವರ್ಗಿ ತಾಲ್ಲೂಕಿನ ಭೀಮಾ ನದಿ ತೀರದ ಜನರು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಿವಿಧೆಡೆ ಮಳೆ: (ಹುಬ್ಬಳ್ಳಿ/ಮಂಗಳೂರುವರದಿ): ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಕರಾವಳಿಯ ಜಿಲ್ಲೆಗಳಲ್ಲೂ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದು ಆಲಮಟ್ಟಿ ಜಲಾಶಯಕ್ಕೆ ಜೂನ್ ತಿಂಗಳಿನಲ್ಲಿ ನಿರೀಕ್ಷೆ ಮೀರಿ ನೀರು ಹರಿದುಬಂದಿದೆ.

ವಿಜಯಪುರ, ಬೆಳಗಾವಿ, ಗದಗ, ವಿಜಯನಗರ, ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಹುಬ್ಬಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಬಹುತೇಕ ಕಡೆ ಶನಿವಾರ ರಾತ್ರಿಯಿಡೀ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಮೂಡುಬಿದಿರೆ, ಉಡುಪಿ ಜಿಲ್ಲೆಯ ಹೆಬ್ರಿ, ಕುಂದಾಪುರ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಜಿಟಿಜಿಟಿ ಮಳೆಯಾಗಿದೆ. ಕೊಡಗು ಜಿಲ್ಲೆಯ ಅಲ್ಲಲ್ಲಿ ಸಾಧಾರಣ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿಯಲ್ಲಿ ತುಂತುರು ಮಳೆಯಾಗಿದೆ.

ಮಂತ್ರಾಲಯ: ರಸ್ತೆಗಳು ಜಲಾವೃತ
ರಾಯಚೂರು
: ಧಾರಾಕಾರ ಮಳೆಯಿಂದಾಗಿ ಆಂಧ್ರಪ್ರದೇಶ ಆಧೋನಿ ಭಾಗದ ರಾಂಪುರ ಹಳ್ಳ ಒಡೆದು, ನೀರು ನುಗ್ಗಿದ್ದರಿಂದ  ಮಂತ್ರಾಲಯದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಮಠದಲ್ಲಿ ಶ್ರೀರಾಘವೇಂದ್ರಸ್ವಾಮಿ ಮೂಲ ವೃಂದಾವನ ದರ್ಶನಕ್ಕೆ ಸಮಸ್ಯೆ ಆಗಲಿಲ್ಲ. ರಸ್ತೆಗಳು ಜಲಾವೃತವಾದ್ದರಿಂದ ಭಕ್ತರಿಗೆ ಸಮಸ್ಯೆಯಾಯಿತು.

ರಾಯಚೂರು–ಮಂತ್ರಾಲಯ ಮಾರ್ಗ ಪಕ್ಕದ ಇಳಿಜಾರಿನಲ್ಲಿರುವ ಕರ್ನಾಟಕ ಭವನಕ್ಕೂ ಐದು ಅಡಿ ಎತ್ತರದವರೆಗೆ ನೀರು ಆವರಿಸಿತ್ತು. ಅಲ್ಲಿ ಮದುವೆಗೆ ಸಿದ್ಧಪಡಿಸಿದ್ದ ಅಲಂಕಾರ, ಚಪ್ಪರ ಕೊಚ್ಚಿಹೋದವು. ಅಲ್ಲಿಂದ ಜನರು ಹೊರಬರಲು ಹರಸಾಹಸಪಟ್ಟರು.

ಮಠದ ಮಹಾದ್ವಾರ, ಶ್ರೀರಾಘವೇಂದ್ರಸ್ವಾಮಿ ವೃತ್ತದಿಂದ ಬಸ್‌ ನಿಲ್ದಾಣದವರೆಗೆ ನೀರು ಆವರಿಸಿತ್ತು. ‘ಮಳೆಯಿಂದಾಗಿ ಮಠದ ಪ್ರಾಂಗಣದಲ್ಲಿ ಸಮಸ್ಯೆ ಆಗಿಲ್ಲ. ಭಕ್ತರು ಯಥಾಪ್ರಕಾರ ರಾಯರ ದರ್ಶನ ಪಡೆಯಬಹುದು’ ಎಂದು ಮಠದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.