ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತರೂ ನಿಲ್ಲದ ಕುಸಿತ, ಹಾನಿ

ಇಬ್ಬರು ಮಹಿಳೆಯರು ಸೇರಿ 4 ಮಂದಿ ಸಾವು l ಬ್ಯಾರೇಜುಗಳು ಮುಳುಗಡೆ
Last Updated 10 ಆಗಸ್ಟ್ 2022, 20:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದರೂ ಹಾನಿ ನಿಂತಿಲ್ಲ. ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನೂರಾರು ಎಕರೆ ಜಲಾವೃತಗೊಂಡಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆ.ತಲಗೂರಿನಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದರ ಮೇಲೆ ಬೃಹತ್‌ ಮರ ಉರುಳಿದೆ. ಮನೆಯೊಳಗೆ ಮಲಗಿದ್ದ ಸರಿತಾ (37) ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಒಯ್ಯುವಾಗ ಚಂದ್ರಮ್ಮ (55) ಸಾವಿಗೀಡಾಗಿದ್ದಾರೆ.

ಸರಿತಾ ಮತ್ತು ಚಂದ್ರಮ್ಮ ನೆರೆಹೊರೆ ಮನೆಯವರು ಹಾಗೂ ಸಂಬಂಧಿಕರು. ಮನೆ ಶಿಥಿಲವಾಗಿದ್ದರಿಂದ ಸರಿತಾ ಅವರು ರಾತ್ರಿ ಮೂವರು ಮಕ್ಕಳೊಂದಿಗೆ ಚಂದ್ರಮ್ಮ ಅವರ ಮನೆಗೆ ಬಂದು ಮಲಗಿದ್ದರು. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಯಚೂರು ಜಿಲ್ಲೆಸಿಂಧನೂರು ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮನೆ ಗೋಡೆ ಕುಸಿದು ಲಾಲಪ್ಪ ದರಗಪ್ಪ (6) ಹಾಗೂ ಹಾವೇರಿ ಜಿಲ್ಲೆಯ ತಡಸದ ಕುನ್ನುರು ಗ್ರಾಮದಲ್ಲಿ ತಡರಾತ್ರಿ ಮನೆಯ ಗೋಡೆ ಕುಸಿದು ಮುಸ್ತಾಖ ಶರೀಫಸಾಬ್ ಯರಗುಪ್ಪಿ (28) ಮೃತಪಟ್ಟಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಕಾರಣ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪಂಪಾಸರೋವರ ಸಮೀಪದ ಬಾಳೆ ತೋಟಕ್ಕೆ ಮತ್ತು ಹನುಮನಹಳ್ಳಿ ಬಳಿ ಭತ್ತದ ಬೆಳೆಗೆ ನೀರು ನುಗ್ಗಿದೆ. ಹುಲಿಗಿ ಸಮೀಪದ ಶಿವಪುರ ಗಡ್ಡೆಯಲ್ಲಿರುವ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದ ಹುಲಿಗಿ ಗ್ರಾಮದ ಒಂಬತ್ತು ರೈತರನ್ನು ತಾಲ್ಲೂಕು ಆಡಳಿತ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಗಡಲಿ, ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಅಪಾರ ಪ್ರಮಾಣದ ನೀರು ಗದ್ದೆ, ಜನವಸತಿ ಪ್ರದೇಶಗಳಿಗೆ ನುಗ್ಗಿದೆ.ಕಂಪ್ಲಿಯ ವೆಂಕಟರಮಣ ದೇವಸ್ಥಾನ, ಗಂಗಮ್ಮನ ಕಟ್ಟೆ ಸುತ್ತ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ.

ಐತಿಹಾಸಿಕ ಕುಮಾರರಾಮನ ಕೋಟೆ ಹೆಬ್ಬಾಗಿಲು ಹಾಗೂ ಹರಪನಹಳ್ಳಿಯ ನಂದ್ಯಾಲ- ನಿಟ್ಟೂರು ಸಂಪರ್ಕ ರಸ್ತೆ ಜಲಾವೃತವಾಗಿದೆ. ಬನವಾಸಿ ರಸ್ತೆಯ ಕಿರು ಸೇತುವೆ ಮುಳುಗಡೆಯಾಗಿದೆ. ಭತ್ತ, ಮೆಕ್ಕೆಜೋಳದ ಗದ್ದೆಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿದೆ.

ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ-ಮಕರಬ್ಬಿ ಸಂಪರ್ಕ ಕಡಿತಗೊಂಡಿದೆ. ನದಿ ತೀರದ ನೂರಾರು ಎಕರೆ ಬೆಳೆಗಳು ಜಲಾವೃತವಾಗಿವೆ. ಮದಲಗಟ್ಟಿ ಆಂಜನೇಯ ದೇವಸ್ಥಾನಕ್ಕೆ ನೀರು ಸುತ್ತುವರಿದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಒಂಬತ್ತು ಬ್ಯಾರೇಜುಗಳು ಮುಳುಗಡೆಯಾಗಿವೆ. ಹೊಲಗಳಿಗೆ ನೀರು ನುಗ್ಗಿದೆ. ಮುಧೋಳ, ಮಿರ್ಜಿ, ಚನ್ನಾಳ, ಜಾಲಿಬೇರಿ, ಜಿರಗಾಳ, ಅಂತಾಪುರ, ಕಸಬಾ ಜಂಬಗಿ, ಆಲಗುಂಡಿ ಬಿಕೆ ಹಾಗೂ ತಿಮ್ಮಾಪುರ ಬ್ಯಾರೇಜುಗಳು ಮುಳುಡೆಯಾಗಿವೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ ಮೇಲೆ ಕೃಷ್ಣಾ ನದಿ ನೀರು ಹರಿದು ಸಂಚಾರ ಬಂದ್‌ ಆಗಿದೆ. ಇದರಿಂದ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್‌ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಅದೇ ರೀತಿ ಚಿಕ್ಕೋಡಿ, ನಿಪ್ಪಾಣಿ, ಗೋಕಾಕ ತಾಲ್ಲೂಕಿನ 20 ಕಿರು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.

ಮೈಸೂರು ಭಾಗದ ಕೊಡಗು, ಹಾಸನದಲ್ಲಿ ಮಳೆ ನಿಂತರೂ ಹಾನಿ, ಮಣ್ಣು ಕುಸಿತ, ಮನೆ ಕುಸಿತ ನಿಂತಿಲ್ಲ. ಕಾಫಿ ಕಾಯಿ, ಕಾಳು ಮೆಣಸು ಗಿಡದಿಂದ ಉದುರುತ್ತಿವೆ.

‌ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಟಿ.ವಡ್ಡರ ಕಾಲೊನಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಗಂಗಾಭೋವಿ ಅವರ ಪತ್ನಿ ಸಲ್ಲಾಪುರಿ ಗಂಭೀರವಾಗಿ ಗಾಯಗೊಂಡರು. ಮಲಗಿದ್ದಾಗಲೇ ಮಣ್ಣಿನಲ್ಲಿ ಸಿಲುಕಿದ್ದ ದಂಪತಿಯನ್ನು ಸ್ಥಳೀಯರು ರಕ್ಷಿಸಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೇಲೂರು– ಮೂಡಿಗೆರೆ ರಸ್ತೆಯ ಚೀಕನಹಳ್ಳಿ ಸಮೀಪ ಮೂರು ವಿದ್ಯುತ್‌ ಕಂಬಗಳು ಉರುಳಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಸಕಲೇಶಪುರ ತಾಲ್ಲೂಕಿನ ನಿಡಿಗೆರೆಯ ಗೌರಮ್ಮ ಅವರ ಮನೆ, ಹೆತ್ತೂರು ಹೋಬಳಿಯ ಬಾಚ್ಚಿಹಳ್ಳಿಯ ನವೀನ್ ಅವರ ಮನೆ ಕುಸಿದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಆಸುಪಾಸಿನಲ್ಲಿ ಕಾವೇರಿ ನದಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ತಾಲ್ಲೂಕಿನ ವಿವಿಧೆಡೆ ಹತ್ತಕ್ಕೂ ಹೆಚ್ಚು ದೇವಾಲಯಗಳು ಜಲಾವೃತವಾಗಿವೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ಸುಕ್ಷೇತ್ರ ಉಕ್ಕಡಗಾತ್ರಿ ಸಂಪರ್ಕಿಸುವ ಫತ್ಯಾಪುರ, ತುಮ್ಮಿನಕಟ್ಟಿ ಮಾರ್ಗದ ರಸ್ತೆ ಜಲಾವೃತವಾಗಿದೆ. ಕರಿಬಸವೇಶ್ವರ ಗದ್ದುಗೆಯ ಸ್ನಾನಘಟ್ಟ, ಜವಳದ ಕಟ್ಟೆ ಮುಳುಗಿವೆ. ನದಿ ಹಿನ್ನೀರಿನಿಂದಾಗಿ ಸಾರಥಿ ಗ್ರಾಮದ ಸ್ಮಶಾನ ಸಂಪೂರ್ಣ ಜಲಾವೃತವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಗ್ರೆ – ಹೊರನಾಡು ಸಂಪರ್ಕ ರಸ್ತೆ ನಿಡಂಡ ಪ್ರದೇಶದಲ್ಲಿ ಬಿರುಕಾಗಿದೆ. ಶಿವಮೊಗ್ಗ ಜಿಲ್ಲೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ.

ಬಾಲಕಿಯ ಮೃತದೇಹ ಪತ್ತೆ

ಬೈಂದೂರು (ಉಡುಪಿ): ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸೋಮವಾರ ಕಾಲುಸಂಕದ ಮೂಲಕ ಹಳ್ಳ ದಾಟುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ ಬುಧವಾರ ಸಂಜೆ ಪತ್ತೆಯಾಗಿದೆ.

ಗುಡ್ಡ ಬಿರುಕು: ರಾತ್ರಿ ಸಂಚಾರ ನಿಷೇಧ

ಕೊಡಗು: ಜಿಲ್ಲೆಯ ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮದೆನಾಡು ಸಮೀಪ ಬಿರುಕು ಬಿಟ್ಟ ಗುಡ್ಡ ಜಾರುತ್ತಿದ್ದು, ಬುಧವಾರದಿಂದ ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದೆ. ಗುರುವಾರ ರಾತ್ರಿ 8.30ರಿಂದ ಶುಕ್ರವಾರ ಬೆಳಿಗ್ಗೆ 6.30ರ ವರೆಗೆ ನಿಷೇಧ ಮುಂದುವರಿಯಲಿದೆ.

ಸೋಮವಾರಪೇಟೆ ತಾಲ್ಲೂಕಿನ ಹರಪಳ್ಳಿಯಲ್ಲಿ ಒಮ್ಮೆಲೇ ನೀರು ಉಕ್ಕಿ, ಭಾರಿ ಭೂ ಕುಸಿತವಾಗಿದೆ. ಸಮೀಪದಲ್ಲೇ ವಾಸವಿದ್ದ ಕೃಷಿಕ ಎಚ್.ಎ.ಸೋಮಯ್ಯ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಕೆಳಭಾಗದ ಗದ್ದೆಗಳು ಮಣ್ಣಿನಿಂದ ಆವೃತವಾಗಿವೆ. ಮೇಲ್ಬಾಗದಲ್ಲಿ ಬೃಹತ್ ಬಿರುಕು ಬಿಟ್ಟಿದೆ. ಮಡಿಕೇರಿಯ ಸ್ಟೋನ್ ಹಿಲ್ ಕೆಳಭಾಗದಲ್ಲೂ ಕಾಡಿನ ಮಧ್ಯೆ ಭೂಕುಸಿತವಾಗಿದೆ. ಮಡಿಕೇರಿ- ಮಾದಾಪುರ ರಸ್ತೆಗೆ ಮಣ್ಣು ಕುಸಿದಿದೆ.

ಎಂಟು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಬೆಂಗಳೂರು: ಕರಾವಳಿಯ ಜಿಲ್ಲೆಗಳು ಸೇರಿ ರಾಜ್ಯದ ಎಂಟು ಜಿಲ್ಲೆಗಳಿಗೆ ಗುರುವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ರಾಜ್ಯದ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಗುರುವಾರ ಹಾಗೂ ಶುಕ್ರವಾರ ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT