ಮಂಗಳವಾರ, ಮಾರ್ಚ್ 21, 2023
20 °C

ರಕ್ಷಾ ರಾಮಯ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ: ನಲಪಾಡ್‌ಗೆ ಜನವರಿ 31ರಿಂದ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಸಚಿವ ಎಂ.ಆರ್‌. ಸೀತಾರಾಮ್‌ ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ 2022ರ ಜನವರಿ 31ರವರೆಗೆ ಯುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿ ಸೋಮವಾರ ಆದೇಶ ಹೊರಡಿಸಿರುವ ಪಕ್ಷದ ರಾಷ್ಟ್ರೀಯ ಯುವ ಘಟಕ, ಈ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ.

ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಸೋಮವಾರ ಈ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ನಡೆಸಲಾದ ಸಂಧಾನ ಸಭೆಗಳಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ರಕ್ಷಾ ಅವರು ಜನವರಿ 31ಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿದೆ.

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿರುವ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಜನವರಿ 31ರಂದು ಅಧ್ಯಕ್ಷ ಸ್ಥಾನ ಪಡೆಯಲಿದ್ದಾರೆ ಎಂದು ಆದೇಶ ಹೇಳಿದೆ.

ಹಲ್ಲೆಯಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಮೊಹಮ್ಮದ್‌ ನಲಪಾಡ್‌ಗೆ ಚುನಾವಣೆಯಲ್ಲಿ ಅಧಿಕ ಮತ ಲಭಿಸಿದ್ದರೂ ಅಧ್ಯಕ್ಷ ಸ್ಥಾನ ದೊರೆತಿರಲಿಲ್ಲ. ಮತ ಗಳಿಕೆಯಲ್ಲಿ 2ನೇ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರಿಗೇ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.

‘ಸ್ಪರ್ಧೆಗೆ ಅವಕಾಶ ನೀಡಿದ್ದರಿಂದ ಹೆಚ್ಚು ಮತ ಪಡೆದಿದ್ದು, ನನ್ನ ಆಯ್ಕೆಯನ್ನು ಮಾನ್ಯ ಮಾಡಬೇಕು’ ಎಂದು ರಾಷ್ಟ್ರೀಯ ಘಟಕಕ್ಕೆ ನಲಪಾಡ್‌ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣ ಅಲ್ಲವಾರು ನೇತೃತ್ವದಲ್ಲಿ ಜೂನ್‌ 21ರಿಂದ ಮೂರು ದಿನಗಳ ಕಾಲ ದೆಹಲಿ ಹಾಗೂ ಬೆಂಗಳೂರಿನಲ್ಲಿ ಸಂಧಾನ ಸಭೆ ಏರ್ಪಡಿಸಲಾಗಿತ್ತು.

ರಕ್ಷಾ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಮ್ಮತಿ ಸೂಚಿಸದ್ದರಿಂದ ಗೊಂದಲ ಮುಂದುವರಿದಿತ್ತು. ಆದರೆ, ರಾಷ್ಟ್ರೀಯ ಘಟಕವು ಮಧ್ಯಸ್ಥಿಕೆವಹಿಸುವ ಮೂಲಕ ಸಂಧಾನ ಏರ್ಪಡಿಸಿ ಅಂತಿಮ ನಿರ್ಧಾರ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು