ಮಂಗಳವಾರ, ಸೆಪ್ಟೆಂಬರ್ 21, 2021
21 °C

‌ರಾಮಚಂದ್ರಾಪುರ ಮಠ: ಎಸಿಎಫ್‌ ಆದೇಶ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 60 ಎಕರೆ ಭೂಮಿ ಮೀಸಲು ಅರಣ್ಯ ಎಂದು ಘೋಷಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಆದೇಶ ಪ್ರಶ್ನಿಸಿದ್ದ ರಾಮಚಂದ್ರಾಪುರ ಮಠವು ಆ ಭೂಮಿ ಗೋಮಾಳ ಎಂದು ವಾದಿಸಿತ್ತು.

ಹೊಸನಗರ ತಾಲ್ಲೂಕಿನ ಸರ್ವೆ ನಂಬರ್ 7ರಲ್ಲಿ 25 ಎಕರೆ ಗೋಮಾಳ ಭೂಮಿಯನ್ನು ಮಂಜೂರು ಮಾಡಲು ಧರ್ಮ ಚಕ್ರ ಟ್ರಸ್ಟ್ ಹೆಸರಿನಲ್ಲಿ ಮಠ ಅರ್ಜಿ ಸಲ್ಲಿಸಿದೆ. ಈ ಜಾಗದಲ್ಲಿ ಹಲವು ಗೋಶಾಲೆಗಳನ್ನು ನಡೆಸುವ ಉದ್ದೇಶವನ್ನು ಮಠ ಹೊಂದಿದೆ.

ಈ ಮಧ್ಯೆ, ‘ಅರಣ್ಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಅದು ಮೀಸಲು ಅರಣ್ಯ’ ಎಂದು 2015ರ ಜುಲೈ 15ರಂದು ಎಸಿಎಫ್‌ ಆದೇಶ ಹೊರಡಿಸಿದ್ದರು. 

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮಠ, ‘ರಾಜ್ಯ ಸರ್ಕಾರ ಈ ಜಾಗವನ್ನು ಗೋಮಾಳ ಎಂದು ಪರಿಗಣಿಸಿದೆ. 160 ಎಕರೆ ಜಾಗ ಮೀಸಲು ಎಂದು ಘೋಷಿಸಿ 2005ರಲ್ಲಿ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಉಳಿದ 60 ಎಕರೆಯನ್ನು ಗೋಮಾಳ ಎಂದೇ ಉಳಿಸಿದೆ’ ಎಂದು ಮಠದ ಪರ ವಕೀಲರು ವಾದಿಸಿದರು.

‘2012ರ ನವೆಂಬರ್ 21ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲಾಧಿಕಾರಿ, ಅದು ಗೋಮಾಳ ಜಾಗ ಎಂದು ತಿಳಿಸಿದ್ದಾರೆ. ಅದಕ್ಕೂ ಮೊದಲೇ ಜಾಗ ಮಂಜೂರು ಮಾಡಲು ಕೋರಿ ಮಠ ಮನವಿ ಸಲ್ಲಿಸಿದೆ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಗಮನಿಸಿತು.

‘ಎಸಿಎಫ್‌ ಆದೇಶ ಆಧರಿಸಿ ಕಂದಾಯ ಇಲಾಖೆ ದಾಖಲೆಗಳನ್ನು ಬದಲಾಯಿಸಿದ್ದರೆ ಅದನ್ನು ಗೋಮಾಳ ಎಂದು ಮಾರ್ಪಡಿಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಭೂ ಮಂಜೂರಾತಿ ಕೋರಿರುವ ಅರ್ಜಿದಾರರ ಮನವಿಗಳನ್ನು ಪರಿಗಣಿಸಿ ಆರು ತಿಂಗಳಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ಪೀಠ ಸೂಚಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು