ಶುಕ್ರವಾರ, ಏಪ್ರಿಲ್ 23, 2021
31 °C
ಹೊಸ ‘ಗಣಿ ನೀತಿ’ಯ ಕರಡು ಸಿದ್ಧ | ಸ್ಕೂಲ್‌ ಆಫ್‌ ಮೈನಿಂಗ್‌ಗೆ ಚಿಂತನೆ

ಭ್ರಷ್ಟಾಚಾರ ತಡೆಯಲು ಬದ್ಧ: ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ

ಬೆಂಗಳೂರು: ‘ಗಣಿಗಾರಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನಿಜ. ಅದನ್ನು ತಡೆಯಲು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ವ್ಯಾಪ್ತಿಯ ಹಿರೇನಾಗವಲ್ಲಿ ಗ್ರಾಮದ ಬಳಿ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವಿಧಾನರಿಷತ್‌ನಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ‘ಹೊಸ ಗಣಿ ನೀತಿಯ ಕರಡು ಸಿದ್ಧವಾಗಿದೆ. ವಿರೋಧ ಪಕ್ಷದ ನಾಯಕರೂ ಸೇರಿದಂತೆ ಎಲ್ಲರಿಗೂ ಅದನ್ನು ಕಳುಹಿಸಿಕೊಟ್ಟು ಅಭಿಪ್ರಾಯ ಪಡೆದ ಬಳಿಕ ಅಂತಿಮಗೊಳಿಸಲಾಗುವುದು’ ಎಂದರು.

‘ಇಲಾಖೆಯಲ್ಲಿ ಶೇ 40ರಷ್ಟು ಸಿಬ್ಬಂದಿ ಕೊರತೆಯಿದೆ. ಅಕ್ರಮ ಗಣಿಗಾರಿಕೆಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸವಾಲಿನ ಕೆಲಸವಾದರೂ ಸುಧಾರಣೆಗೆ ಬದ್ಧನಾಗಿದ್ದೇನೆ. ಹೊಸ ಗಣಿ ನೀತಿ ಜಾರಿಯಿಂದ ಪರವಾನಗಿ, ನಿರಾಪೇಕ್ಷಣಾ ಪತ್ರ ಪಡೆಯುವ ವ್ಯವಸ್ಥೆ ಸರಳೀಕರಣವಾಗಲಿದೆ’ ಎಂದರು.

‘ಗಣಿಗಳಲ್ಲಿ ಕೌಶಲ ಹೊಂದಿದ ಕೆಲಸಗಾರರಿಲ್ಲ. ಈ ಕಾರಣಕ್ಕೆ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಿ ತರಬೇತಿ ನೀಡಲು ಚಿಂತನೆಯಿದೆ. ಮುಂದೆ ಗಣಿ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ಯೋಚನೆಯಿದೆ’ ಎಂದ ಅವರು, ‘ಕಳೆದೊಂದು ತಿಂಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿದೆ. ಪರವಾನಗಿ ಪಡೆಯಲು ಕನಿಷ್ಠ 3 ತಿಂಗಳು ಬೇಕಿದೆ. ಹೀಗಾಗಿ, 60 ದಿನಗಳ ಒಳಗೆ ಪರವಾನಗಿ ಪಡೆದುಕೊಳ್ಳುವಂತೆ ಷರತ್ತಿನಲ್ಲಿ ಅನುಮತಿ ನೀಡಲು ಉದ್ದೇಶಿಸಲಾಗಿದೆ. ನಾಲ್ಕು ವಿಭಾಗಗಳು ಮತ್ತು ಮಂಗಳೂರಿನಲ್ಲಿ ಗಣಿ ಅದಾಲತ್‌ ಆಯೋಜಿಲು ಕೂಡಾ ತೀರ್ಮಾನಿಸಲಾಗಿದೆ’ ಎಂದರು.

‘ಮರಳು ನೀತಿಯನ್ನು ಕೂಡಾ ಶೀಘ್ರದಲ್ಲಿಯೇ ಜಾರಿಗೆ ತರುವ ಚಿಂತನೆಯಿದೆ. ಆ ಮೂಲಕ, ₹ 10 ಲಕ್ಷಕ್ಕೆ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವರಿಗೆ ಉಚಿತವಾಗಿ ಮರಳು ಒದಗಿಸಲು ಮತ್ತು ₹ 10 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ಮನೆ, ಕಟ್ಟಡ ಕಟ್ಟುವರಿಗೆ ಚದರ ಅಡಿ ಲೆಕ್ಕ ಹಾಕಿ ರಾಜಸ್ವ ಸಂಗ್ರಹಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

‘ಚಿಕ್ಕಬಳ್ಳಾಪುರ ಬಳಿ ನಡೆದ ಸ್ಫೋಟ ಪ್ರಕರಣವನ್ನು ಸಿಒಡಿಗೆ ವಹಿಸಲಾಗಿದೆ. ಘಟನೆಗೆ ಕಾರಣರಾದವರನ್ನು ಈಗಾಗಲೇ ಬಂಧಿಸಲಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ವಾಸ್ತವಾಂಶ ಪೊಲೀಸ್‌ ತನಿಖೆಯಿಂದ ಹೊರಬರುವ ವಿಶ್ವಾಸವಿದೆ’ ಎಂದರು.

ಚರ್ಚೆ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ‘ಕಲ್ಲು ಕ್ವಾರಿಗಳಲ್ಲಿ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ನಿಲ್ಲಿಸಲು ಸ್ವತಃ ಮುಖ್ಯಮಂತ್ರಿಯೇ ಅಸಹಾಯಕರಾಗಿರುವ ಸ್ಥಿತಿ ಬಂದಿದೆ’ ಎಂದರು.

‘ಪದೇ ಪದೇ ಸ್ಫೋಟ ಸಂಭವಿಸಲು ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ, ಭ್ರಷ್ಟಾಚಾರವೇ ಕಾರಣ’ ಎಂದು ಆರೋಪಿಸಿದ ಅವರು, ‘ಪರವಾನಗಿ ಹೊಂದಿರುವವರು ಮಾತ್ರ ಸ್ಫೋಟಕ ಬಳಸಲು ವ್ಯವಸ್ಥೆ ಮಾಡಬೇಕು. ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಘಟನೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಕಾಂಗ್ರೆಸ್‌ನ ನಾರಾಯಣಸ್ವಾಮಿ, ಪ್ರತಾಪ್‌ಚಂದ್ರ ಶೆಟ್ಟಿ, ಹರೀಶ್ ಕುಮಾರ್, ಪ್ರಸನ್ನ ಕುಮಾರ್, ಪ್ರಕಾಶ್ ರಾಥೋಡ್ ಕೂಡಾ ಪಾಟೀಲರ ಆಗ್ರಹಕ್ಕೆ ಧ್ವನಿಗೂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು