ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ. 2ರಿಂದ ಆರಂಭಿಸಲು ಕಾರ್ಯಪಡೆಯಿಂದ ಶಿಫಾರಸು- ಪ್ರಾಥಮಿಕ ಹಂತದಿಂದಲೇ ಶಾಲೆ?

Last Updated 25 ಜುಲೈ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿರುವ ಬೆನ್ನಲ್ಲೆ, ಆಗಸ್ಟ್‌ 2 ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನೂ ಆರಂಭಿಸುವಂತೆ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್‌ ನೇತೃತ್ವದ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ, ಸಿಬಿಎಸ್‌ಇ, ಐಸಿಎಸ್‌ಇ, ಅಂತರ ರಾಷ್ಟ್ರೀಯ ಪಠ್ಯಕ್ರಮ ಬೋಧಿಸುವ ಶಾಲೆಗಳು ತರಗತಿಗಳನ್ನು ಆರಂಭಿಸಿ, ಕಾರ್ಯಾ ಚರಿಸಲು ಒಂದೇ ಮಾದರಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಅನುಸರಿಸಬೇಕು ಎಂದು ಕಾರ್ಯಪಡೆ ಸಲಹೆ ನೀಡಿದೆ.

ಅಂಗನವಾಡಿಗಳು, ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು, ಪದವಿ ಪೂರ್ವ ತರಗತಿಗಳನ್ನು ಆ. 2 ರಿಂದ ಆರಂಭಿಸಬಹುದು. ಒಂದೇ ಬಾರಿಗೆ ಆರಂಭಿಸಲು ಸಾಧ್ಯವಾಗದೇ ಇದ್ದರೆ, ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳನ್ನು ಮೊದಲು ಆರಂಭಿಸಿ, ಆರನೇ ಮತ್ತು ನಂತರದ ತರಗತಿಗಳನ್ನು ವಾರದ ಒಳಗೆ (ಆಗಸ್ಟ್‌ 9ರ ಒಳಗೆ) ಆರಂಭಿಸಬೇಕು.

ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳು (ಕೊಠಡಿಯಲ್ಲಿ 15ರಿಂದ 20 ಮಕ್ಕಳಿಗೆ ಒಬ್ಬರು ಶಿಕ್ಷಕರು) ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬಹುದು. ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಪಾಳಿಯಲ್ಲಿ ತರಗತಿ ನಡೆಸಬೇಕು. 1 ರಿಂದ 3ನೇ ತರಗತಿವರೆಗಿನ ಮಕ್ಕಳಿಗೆ ಬೆಳಿಗ್ಗೆ, 4 ಮತ್ತು 5ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ನಂತರ ತಲಾ 3 ಗಂಟೆಯಂತೆ ವಾರದ ಆರು ದಿನ ಶಾಲೆ ನಡೆಸಬಹುದು ಎಂದು ಕಾರ್ಯಪಡೆ ಶಿಫಾರಸು ಮಾಡಿದೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) 2020ರ ಡಿಸೆಂಬರ್‌ನಲ್ಲಿ ಹೊರಡಿಸಿದ್ದ ಎಸ್‌ಒಪಿ ಅನ್ವಯ ಶಾಲೆಗಳು ಸಿದ್ಧತೆಗಳನ್ನು ಮಾಡಿಕೊಂಡಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಶಿಕ್ಷಕ– ಪೋಷಕರ ಸಂಘಟನೆಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರೆ, ಅಂಥವರಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮನೆಯಲ್ಲೇ ಇದ್ದುಕೊಂಡು ಕಲಿಕೆ ಮುಂದುವರಿಸಲು ಬಯಸುವವರನ್ನು ಸಮೀಪದ ಸರ್ಕಾರಿ ಶಾಲೆಗಳಲ್ಲಿ ನೋಂದಾಯಿಸಿ, ‘ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ’ (ಎಸ್‌ಎಟಿಎಸ್‌) ಪೋರ್ಟಲ್‌ನಲ್ಲಿ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಬೇಕು. ಶಾಲೆ ತೊರೆದ ಮಕ್ಕಳನ್ನು ಪತ್ತೆ ಮಾಡಲು ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳು ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ನೋಂದಣಿ ಅಂಕಿ– ಅಂಶಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕಾರ್ಯಪಡೆ ಹೇಳಿದೆ.

ಮಧ್ಯಾಹ್ನದ ಬಿಸಿಯೂಟ ಮತ್ತೆ ಆರಂಭಿಸಬೇಕು. ಬಿಸಿಯೂಟ ನೀಡಲು ಸಾಧ್ಯವಾಗದೇ ಇದ್ದರೆ, ಒಣ ಆಹಾರ ನೀಡಬೇಕು (ಕೆಎಂಎಫ್‌ ಮೂಲಕ ನೀಡುತ್ತಿರುವ ಹಾಲಿನ ಪುಡಿ ಬದಲು ಬಿಸ್ಕತ್ತು, ಶೇಂಗಾ ಚಿಕ್ಕಿ). ಶಾಲೆ ಆರಂಭವಾಗುತ್ತಿದ್ದಂತೆ ಮಕ್ಕಳಲ್ಲಿನ ಅಪೌಷ್ಟಿಕತೆಯ ಬಗ್ಗೆ ಅರಿಯಲು ಎತ್ತರ ಮತ್ತು ತೂಕ ಅಳೆಯಬೇಕು. ಶಾಲೆಗಳು ಆರಂಭವಾದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದೂ ಸಲಹೆ ನೀಡಿದೆ.

‘ಶಾಲೆಗಳಿಗೆ ವಿಶೇಷ ಅನುದಾನ’

ಸುರಕ್ಷಿತ ಮತ್ತು ನಿರಂತರ ಕಲಿಕಾ ವಾತಾವರಣಕ್ಕೆ ಎಸ್‌ಒಪಿ ಪಾಲನೆ ಕಡ್ಡಾಯ. ಅದಕ್ಕೆ ಬೇಕಾದ ಖರ್ಚು ವೆಚ್ಚವನ್ನು ಅಂದಾಜಿಸಿ, ಅನುದಾನ ನೀಡಬೇಕು. ಅನುದಾನ ಹಂಚಿಕೆಯ ಹೊಣೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ನೀಡಬೇಕು. ಶಾಲೆಗಳಲ್ಲಿ ಸುರಕ್ಷತೆ, ಸ್ಯಾನಿಟೈಜೇಷನ್‌ ಚಟುವಟಿಕೆಗೆ ವಿಶೇಷ ಅನುದಾನ ನೀಡಬೇಕು. ಶಾಲೆ ಆರಂಭಕ್ಕೂ ಮೊದಲು ಎಲ್ಲ ಶಿಕ್ಷಕರು, ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು ಕನಿಷ್ಠ ಒಂದು ಡೋಸ್‌ ಲಸಿಕೆ ಹಾಕಿಸಿಕೊಂಡಿರಬೇಕು. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ನಿಗಾ ವಹಿಸುವ ಹೊಣೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರದ್ದು ಎಂದೂ ಕಾರ್ಯಪಡೆ ಹೇಳಿದೆ.

***

ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವಂತೆ ಐಸಿಎಂಆರ್‌, ಡಾ. ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಹೇಳಿದೆ. ಆರೋಗ್ಯ ಇಲಾಖೆ ಜೊತೆ ಚರ್ಚಿಸಿ 3–4 ದಿನಗಳಲ್ಲಿ ತೀರ್ಮಾನಿಸುತ್ತೇವೆ

- ಎಸ್‌. ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

***

ಶಾಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಮನೆ ಪಾಠ, ಕೋಚಿಂಗ್‌ ಕೇಂದ್ರಗಳಲ್ಲಿಯೂ ಎಸ್ಒಪಿ ಪಾಲನೆ ಆಗುತ್ತಿದೆಯೇ ಎಂದು ಕಟ್ಟುನಿಟ್ಟಾಗಿ ಪರಿಶೀಲಿಸುವ ಕೆಲಸ ಸರ್ಕಾರದಿಂದ ಆಗಬೇಕು

-ಡಿ. ಶಶಿಕಮಾರ್‌, ಪ್ರಧಾನ ಕಾರ್ಯದರ್ಶಿ, ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT