ಗುರುವಾರ , ಜನವರಿ 21, 2021
21 °C

ಕೃಷಿ ವಿಜ್ಞಾನಗಳ ವಿವಿ ಘಟಿಕೋತ್ಸವ: ಕಲಬುರ್ಗಿಯ ರೇಖಾಗೆ 6 ಚಿನ್ನದ ಪದಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಯಂತ್ರೋಪಕರಣಗಳನ್ನು ಬಳಸಿ ಕೃಷಿ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ಬಿಎಸ್‌ಸಿ ಕೃಷಿ ಎಂಜಿನಿಯರಿಂಗ್‌ ಪದವಿಯಲ್ಲಿ ಪ್ರಾಜೆಕ್ಟ್‌ ಮಾಡಿ ತೋರಿಸಿರುವ ಕಲಬುರ್ಗಿಯ ರೇಖಾ ಗುಂಡಪ್ಪ ಅವರಿಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಆರು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ನೀಡಿ ಗಣ್ಯರು ಗೌರವಿಸಿದರು.

ಪದವಿ ಹಂತದಲ್ಲಿ ಹತ್ತಿ ಬಿಡಿಸುವ ಯಂತ್ರದ ಪ್ರಾಜೆಕ್ಟ್‌ ಆಯ್ಕೆ ಮಾಡಿಕೊಂಡಿದ್ದ ರೇಖಾ ಅವರು ವಿಭಾಗದಲ್ಲಿಯೇ ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ಇದೀಗ ದೆಹಲಿಯಲ್ಲಿ ಸ್ನಾತಕೋತ್ತರ ಕೃಷಿ ಓದುತ್ತಿದ್ದಾರೆ.

ತಾಯಿ ಸುಭದ್ರಮ್ಮ ಮತ್ತು ತಂದೆ ಗುಂಡಪ್ಪ ಅವರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ಮಗಳ ಸಾಧನೆಯನ್ನು ನೋಡಿ ಖುಷಿಯಾಗಿದ್ದರು. ‘ನನಗೆ ಬಹಳ ಹುರುಪ ಆಗಿದೆ. ಮುಂದೆಯೂ ಮಗಳನ್ನು ಓದಿಸುತ್ತೇನೆ’ ಎಂದು ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಗುಂಡಪ್ಪ ಹೇಳಿದರು.

‘ನನ್ನದು ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಮೊತಕಪಲ್ಲಿ ಗ್ರಾಮ. ನಮ್ಮಲ್ಲಿ ಕೃಷಿಯನ್ನು ಅವಂಬಿಸಿಯೇ ಎಲ್ಲರೂ ಜೀವನ ನಡೆಸುತ್ತಾರೆ. ಕೆಲವು ಗೆಳತಿಯರು ಬಿಎಸ್‌ಸಿ ಕೃಷಿ ಓದುತ್ತಿರುವುದನ್ನು ಗಮನಿಸಿದ್ದೆ. ಅವರನ್ನು ನೋಡಿಕೊಂಡು ಕೃಷಿಯಲ್ಲಿ ಸಾಧನೆ ಮಾಡುವುದಕ್ಕೆ ಕೃಷಿಯಲ್ಲಿ ಓದುತ್ತಿದ್ದೇನೆ. ನನ್ನ ಪಾಲಿನ ಕೆಲಸವನ್ನು ಬದ್ಧತೆಯಿಂದ ಮಾಡುವುದರಿಂದ ನನಗೆ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ’ ಎಂದು ರೇಖಾ ತಿಳಿಸಿದರು.

‘ಅಗ್ಗದಲ್ಲಿ ಕೃಷಿ ಯಂತ್ರೋಪಕರಣಗಳು ರೈತರಿಗೆ ಸಿಗಬೇಕು. ಯಂತ್ರಗಳನ್ನು ಬಳಸುವುದಕ್ಕೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅವುಗಳಿಂದಾಗಿ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ರೈತರಲ್ಲಿ ಮನವರಿಕೆ ಮಾಡುವುದು ನನ್ನ ಗುರಿ. ಇದೀಗ ದೆಹಲಿಯಲ್ಲಿ ಕೃಷಿ ಯಂತ್ರೋಪಕರಣದಲ್ಲಿಯೇ ಸ್ನಾತಕೋತ್ತರ ಓದುತ್ತಿದ್ದೇನೆ. ಕೃಷಿ ವಿಜ್ಞಾನಿ ಆಗುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು