ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಧಾರ್ಮಿಕ ನಾಯಕರ ಹಸ್ತಕ್ಷೇಪ ಬೇಕೆ?

Last Updated 2 ಡಿಸೆಂಬರ್ 2020, 21:44 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂನೀಡಿದ್ದಾರೆ.ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಾಜಕೀಯ ನಾಯಕರು ಹಾಗೂ ಮಠಾಧೀಶರ ಪ್ರತಿಕ್ರಿಯೆಗಳು ಇಲ್ಲಿವೆ...

***

‘ಜಾತಿ ಹೇಳಿಕೊಂಡು ಹೋಗಬಾರದು’

ಸ್ವಾಮೀಜಿಗಳು ಇಡೀ ಸಮಾಜದ ಸ್ವಾಮಿಗಳಾಗಬೇಕು. ಸಮಪಾಲು, ಸಮಬಾಳು, ಸರ್ವರೊಳಗೊಂದಾಗಿ ಬಾಳು ಎನ್ನುತ್ತೇವೆ. ಆದರೆ, ಸ್ವಾಮೀಜಿಗಳು ಖುದ್ದಾಗಿ ಜಾತಿ ಹೇಳಿಕೊಂಡು ಹೋಗಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು. ಅದು ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತಿರಬೇಕು. ಆದರೆ, ಧರ್ಮದಲ್ಲಿ ರಾಜಕೀಯ ಇರಬಾರದು. ಎಲ್ಲ ಧರ್ಮಗಳಿಗೆ ಬೇಕಾದ ಮುಖ್ಯಮಂತ್ರಿಯ ಮೇಲೆ ಯಾರೂ ಒತ್ತಡ ಹೇರಬಾರದು. ಸುಸೂತ್ರವಾಗಿ ಅವರು ಎರಡು ವರ್ಷ ಆಡಳಿತ ನಡೆಸಲು ಅವಕಾಶ ಕೊಡಬೇಕು.

-ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ,ಸುಲಫಲ ಮಠ, ಕಲಬುರ್ಗಿ

***

‘ಮಠಗಳ ಹಸ್ತಕ್ಷೇಪ ಆರೋಗ್ಯಕರ ಅಲ್ಲ’

ಇತಿಹಾಸದಲ್ಲಿ ಮಠಗಳು (ಪುರೋಹಿತಶಾಹಿ ಶಕ್ತಿಗಳು) ಮತ್ತು ಪ್ರಭುತ್ವ (ರಾಜಕೀಯ) ಒಂದಾದಾಗ ಸಾರ್ವಜನಿಕ ಬದುಕು ಅಸ್ತವ್ಯಸ್ತಗೊಂಡು ಜನವಿರೋಧಿಯಾಗಿ ಜನ ಅಂಥ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿರುವುದಕ್ಕೆ ಫ್ರಾನ್ಸ್‌ ಮತ್ತು ರಷ್ಯಾ ಕ್ರಾಂತಿಗಳೇ ಉದಾಹರಣೆಗಳು.

ಮಠಗಳು ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಿದರೆ ಅಥವಾ ಹಸ್ತಕ್ಷೇಪ ಮಾಡಿದರೆ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗುತ್ತದೆ. ಧರ್ಮಾತೀತವಾದ ಆಡಳಿತ, ಸಾರ್ವಜನಿಕರನ್ನು ಸಮಾನ ದೃಷ್ಟಿಯಿಂದ ಕಾಣುವ ವ್ಯವಸ್ಥೆಯಾಗಿರುತ್ತದೆ. ಅದರಲ್ಲಿ ಮುಕ್ತತೆ ಮತ್ತು ಪಾರದರ್ಶಕತೆ ಇರುತ್ತವೆ. ಆದರೆ, ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಚಿಂತನೆಯ ಮಠಗಳು ವ್ಯಾವಹಾರಿಕವಾದಾಗ (ಬಸವಣ್ಣ ಹೇಳಿದಂತೆ) ಅವುಗಳು ಒಂದು ರೀತಿಯಲ್ಲಿ ಶೋಷಣೆಯ ಕೇಂದ್ರಗಳಾಗುತ್ತವೆ. ಅವುಗಳು ಸರ್ಕಾರದಲ್ಲಿ ಪಾತ್ರ ನಿರ್ವಹಣೆ ಮಾಡತೊಡಗಿದಾಗ ಸರ್ಕಾರ ಸಹಜವಾಗಿಯೇ ಜನವಿರೋಧಿಯಾಗುತ್ತದೆ. ಆದ್ದರಿಂದ ಮಠಗಳು ಸರ್ಕಾರದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದು ಆರೋಗ್ಯಕರವೂ ಅಲ್ಲ ಮತ್ತು ಅಂಗೀಕಾರಾರ್ಹವೂ ಅಲ್ಲ.

-ವೈ.ಎಸ್‌.ವಿ. ದತ್ತ,ಜೆಡಿಎಸ್‌ ನಾಯಕ

***

‘ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ವಾಮೀಜಿಗಳು’

ವಿಶೇಷವಾಗಿ ನಮ್ಮಲ್ಲಿ ಮಠಗಳು ಆಯಾ ಸಮುದಾಯವನ್ನು ಆಧರಿಸಿ ಇವೆಯೇ ಹೊರತು, ಎಲ್ಲ ಧರ್ಮ, ಸಮಾಜದವರಿಗೆ ಸೇರಿದ ಮಠಗಳು ಕಡಿಮೆ. ಆಯಾ ಸಮುದಾಯದ ಹಿತಕ್ಕಾಗಿ ಸ್ವಾಮೀಜಿಗಳು ಮಾತನಾಡಬೇಕಾದ ಅನಿವಾರ್ಯ ಇದೆ. ಸಂಬಂಧಿತ ಸಮುದಾಯದವರು ತಮ್ಮ ಮಠಾಧೀಶರ ಮೇಲೆ ಸ್ವಾಭಾವಿಕವಾಗಿ ಒತ್ತಡ ತರುತ್ತಾರೆ. ಕೇವಲ ಮಠಾಧೀಶರತ್ತ ಬೆರಳು ತೋರಲು ಆಗದು. ಸರ್ಕಾರಗಳೂ ಇದುವರೆಗೆ ವಿವಿಧ ಸಮಾಜ ಹಾಗೂ ಸ್ವಾಮೀಜಿಗಳನ್ನು ಓಲೈಸುತ್ತ ಬರುತ್ತಿರುವುದರಿಂದ ರಾಜಕೀಯದಲ್ಲಿ ಮಠಾಧೀಶರ ಹಸ್ತಕ್ಷೇಪ ಸಾಮಾನ್ಯವಾಗಿದೆ. ಆದರೆ, ಸ್ವಾಮೀಜಿಗಳು ಪಕ್ಷಾತೀತವಾಗಿರಬೇಕು. ತಮ್ಮ ಇತಿಮಿತಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದು ಮಿತಿ ಮೀರಬಾರದು. ಈ ವಾಸ್ತವ ಸ್ಥಿತಿಯ ಬಗ್ಗೆ ಸಮಗ್ರವಾಗಿ ಚಿಂತನೆಯಾಗಬೇಕಾಗಿದೆ.

-ಎಂ.ಬಿ.ಪಾಟೀಲ,ಶಾಸಕ, ಬಬಲೇಶ್ವರ ವಿಧಾನಸಭಾ ಕ್ಷೇತ್ರ, ವಿಜಯಪುರ

***

‘ಅಸ್ಥಿರಗೊಳಿಸ್ತೀವಿ ಎಂಬುದು ಸರಿಯಲ್ಲ’

ಸ್ವಾಮೀಜಿಗಳು ತಾವು ಪ್ರತಿನಿಧಿಸುವ ಸಮುದಾಯದ ಏಳಿಗೆಗಾಗಿ ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಕೇಳುವುದು ತಪ್ಪಲ್ಲ. ಒಬ್ಬ ಜನಪ್ರತಿನಿಧಿಯಾಗಿರುವ ನನಗಿಂತಲೂ ಜನರು ಸ್ವಾಮೀಜಿಗಳ ಮಾತನ್ನು ಹೆಚ್ಚು ಕೇಳುತ್ತಾರೆ. ತಮ್ಮ ಸಮುದಾಯದವರಿಗೆ ರಾಜಕೀಯ ಸ್ಥಾನಮಾನಗಳನ್ನು ಕೇಳುವುದೂ ತಪ್ಪಲ್ಲ. ಆದರೆ, ಸ್ಥಾನಮಾನ ನೀಡದಿದ್ದರೆ ಇಡೀ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುತ್ತೇವೆ ಎನ್ನುವುದರ ಬಗ್ಗೆ ಆಲೋಚಿಸಬೇಕು. ಅದಕ್ಕೆ ಆಸ್ಪದ ಕೊಡದಂತೆ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕತೆಯ ಆಧಾರದ ಮೇಲೆ ಸೌಲಭ್ಯ ಕಲ್ಪಿಸಬೇಕು.

-ಪ್ರಿಯಾಂಕ್‌ ಖರ್ಗೆ,ಚಿತ್ತಾಪುರ ಶಾಸಕ

***

‘ಸ್ಥಿತಪ್ರಜ್ಞ ಹಸ್ತಕ್ಷೇಪ ಒಪ್ಪಿತ’

ನಾಡಿನೊಳಗೆ ಮಠ ಬೆರೆತ ಬಳಿಕ ಎಲ್ಲ ವಿದ್ಯಮಾನಗಳು ಮಠದಲ್ಲಿ ಚರ್ಚಿತವಾಗುತ್ತಿವೆ. ಮಠೀಕರಣ ವ್ಯವಸ್ಥೆ ಬಹಳಷ್ಟು ಪರಿವರ್ತನೆಯಾಗಿದೆ. ರಾಜಕಾರಣದಲ್ಲಿ ಧರ್ಮ ಬೆರೆಯಬೇಕಾದರೆ ಮಠಾಧೀಶರ ಭೌತಿಕ ಅಥವಾ ಬೌದ್ಧಿಕ ಹಸ್ತಕ್ಷೇಪದ ಅಗತ್ಯವಿದೆ.

ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಸಂಸ್ಕೃತಿ ಉಳಿವಿಗೆ ಹೋರಾಟ ಹೆಚ್ಚುತ್ತಿದೆ. ಹೆಚ್ಚು ಜನಸಂಖ್ಯೆ ಹೊಂದಿದ ಜಾತಿಗೆ ಗೌರವವೂ ಸಿಗುತ್ತಿದೆ. ಸಮುದಾಯದ ಹಿತರಕ್ಷಣೆಗಾಗಿ ಮಠಾಧೀಶರು ಎತ್ತುವ ದನಿ ಸಾಮಾಜಿಕ ನ್ಯಾಯದ ಪರವಾಗಿರಬೇಕು. ಸಾಮಾಜಿಕ ನ್ಯಾಯಕ್ಕಾಗಿ ಸಚಿವ ಸ್ಥಾನ ಕೇಳುವುದು, ಸಮಸಮಾಜ ನಿರ್ಮಾಣಕ್ಕೆ ಕೆಳಸ್ತರದ ಜಾತಿಯ ನಿಗಮಕ್ಕೆ ಬೇಡಿಕೆ ಇಡುವ ಸ್ಥಿತಪ್ರಜ್ಞ ರಾಜಕೀಯ ಹಸ್ತಕ್ಷೇಪ ಒಪ್ಪಿತವಾದದು.

-ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಭೋವಿ ಗುರುಪೀಠ, ಚಿತ್ರದುರ್ಗ

***

‘ರಾಜಕೀಯಕ್ಕಿಳಿದರೆ ಗೌರವ ಕಡಿಮೆಯಾದೀತು’

ಧಾರ್ಮಿಕ ನಾಯಕರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇತ್ತೀಚೆಗೆ ಈ ಪ್ರವೃತ್ತಿ ಜಾಸ್ತಿಯೇ ಆಗುತ್ತಿದೆ. ಧರ್ಮ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಲು ಬಹಳಷ್ಟು ಕೆಲಸಗಳಿವೆ.

ರಾಜಕಾರಣಿಗಳು ತಪ್ಪಿದಾಗ ಅವರನ್ನು ತಿದ್ದಿ ಜನರಿಗೆ ಅನುಕೂಲ ಆಗುವಂತೆ ಮಾಡುವುದಕ್ಕಾಗಿಯೇ ನಾವೆಲ್ಲರೂ ಇರುವುದು. ಪೂರ್ಣವಾಗಿ ರಾಜಕೀಯಕ್ಕೆ ಇಳಿದರೆ ಧರ್ಮದ ವ್ಯವಸ್ಥೆ ಹಾಳಾಗುತ್ತದೆ. ಮಠಾಧೀಶರ ವ್ಯಕ್ತಿತ್ವಕ್ಕೂ ಧಕ್ಕೆಯಾಗುತ್ತದೆ. ಧರ್ಮ ನೀತಿಸಂಹಿತೆ ಮರೆಯಬಾರದು.

ಯಾರಿಗೋ ಸಚಿವ ಸ್ಥಾನ ಅಥವಾ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಿಸಲು ಆ ಸಮಾಜದ ಹಿರಿಯರು ಆಥವಾ ನಾಯಕರು ಇರುತ್ತಾರೆ ಅಥವಾ ಮುಖ್ಯಮಂತ್ರಿ ಮಾಡುತ್ತಾರೆ. ಸ್ವಾಮೀಜಿಗಳೆಂದರೆ ಜನರು ಭಕ್ತಿ–ಭಾವದಿಂದ ನೋಡುತ್ತಾರೆ; ಗೌರವಿಸುತ್ತಾರೆ. ಅವರು ಅತಿಯಾಗಿ ರಾಜಕಾರಣಕ್ಕೆ ಇಳಿದರೆ, ಜನರಲ್ಲಿ ಧಾರ್ಮಿಕ ಗೌರವ ಕಡಿಮೆ ಆಗುತ್ತದೆ. ಇದಕ್ಕೆ ನಾವು ಅವಕಾಶ ಕೊಡಬಾರದು. ಇವರೂ ರಾಜಕಾರಣಿಗಳಂತೆಯೇ ಎಂಬ ಭಾವನೆ ಜನರಲ್ಲಿ ಬರುವಂತೆ ನಡೆದುಕೊಳ್ಳಬಾರದು.

-ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ,ಸಿದ್ಧಸಂಸ್ಥಾನ ಮಠ, ನಿಡಸೋಸಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT