ಶನಿವಾರ, ಮೇ 28, 2022
31 °C

ಅಂಬೇಡ್ಕರ್‌ಗೆ ಅವಮಾನ: ಕ್ರಮ ಕೈಗೊಳ್ಳಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಅವಮಾನ ಮಾಡಿದ್ದಾರೆ ಎಂದು ದೂರಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಸದಸ್ಯ ಎಚ್‌.ವೆಂಕಟೇಶ್‌ ದೊಡ್ಡೇರಿ ಪತ್ರ ಬರೆದಿದ್ದಾರೆ.

ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಅಗೌರವ ತೋರಿಸಿದ್ದಾರೆ. ಜತೆಗೆ, ಕಾರ್ಯಕ್ರಮದ ಸ್ಥಳದಿಂದ ಭಾವಚಿತ್ರವನ್ನೂ ತೆಗೆದುಹಾಕಿಸಿದ್ದಾರೆ. ಮಾಧ್ಯಮಗಳು, ಸಾರ್ವಜನಿಕರು ಮತ್ತು ವಕೀಲರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ನ್ಯಾಯಾಂಗಕ್ಕೆ ಈ ಘಟನೆ ಕಪ್ಪು ಚುಕ್ಕೆಯಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನಿಟ್ಟು ಗೌರವ ಸಲ್ಲಿಸಬೇಕು ಎಂದು ಕರ್ನಾಟಕ ಸರ್ಕಾರ 2020ರ ಜನವರಿ 25ರಂದು ನಿರ್ದೇಶನ ನೀಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಾಲಯಗಳು ಸಹ ಭಾರತೀಯ ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಸಂವಿಧಾನದ ಗೌರವ ಕಾಪಾಡುವ ಜವಾಬ್ದಾರಿಯನ್ನು ನ್ಯಾಯಾಲಯಗಳು ಹೊಂದಿದೆ. ಹೀಗಾಗಿ, ನ್ಯಾಯಾಲಯಗಳು ಅಂಬೇಡ್ಕರ್‌ ಅವರನ್ನು ಗೌರವಿಸುತ್ತವೆ ಎನ್ನುವುದನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಯಚೂರಿನಲ್ಲಿ ನಡೆದಿರುವ ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ, ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಎಲ್ಲ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಇರಿಸಲು ಕ್ರಮಕೈಗಳ್ಳಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ: 

ಕ್ರಮ ಕೈಗೊಳ್ಳಿ: ಮಹದೇವಪ್ಪ ಆಗ್ರಹ

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಹೈಕೋರ್ಟ್‌ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.

‘ಕಾನೂನುಗಳನ್ನು ಕಾಪಾಡಲು ನೇಮಕವಾಗಿರುವ ನ್ಯಾಯಾಧೀಶರೇ ಹೀಗೆ ಹೇಳಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಊಳಿಗಮಾನ್ಯ ಮತ್ತು ಕೋಮುವಾದಿ ಮನಸ್ಥಿತಿಯು ದೇಶದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಜೀವಂತ ಉದಾಹರಣೆ’ ಎಂದು ಅವರು ಹೇಳಿದ್ದಾರೆ.

‘ಇಂತಹ ಪೂರ್ವಗ್ರಹ ಪೀಡಿತ ನ್ಯಾಯಾಧೀಶರು ಇನ್ನೆಂತಹ ತೀರ್ಪು ನೀಡಬಲ್ಲರು ಎಂದು ಚಿಂತಿಸಿದರೆ ಆತಂಕವಾಗುತ್ತದೆ. ನ್ಯಾಯಾಂಗ ಜನಸಾಮಾನ್ಯರ ನಂಬಿಕೆಯ ಗೂಡು. ಅಂತಹ ನಂಬಿಕೆಯು ಕಳೆದು ಹೋಗುವುದಕ್ಕೆ ಅವಕಾಶ ನೀಡಬಾರದು’ ಎಂದೂ ಪ್ರತಿಪಾದಿಸಿದ್ದಾರೆ.

ರಾಜ್ಯಪಾಲರಿಗೆ ದೂರು

ನ್ಯಾಯಾಧೀಶ ಮಲ್ಲಿಕಾರ್ಜುಗೌಡರ ವಿರುದ್ಧ ಕ್ರಮ ಜರುಗಿಸುವಂತೆ ಹೈಕೋರ್ಟ್ ವಕೀಲ ಸುನೀಲ್‌ಕುಮಾರ್ ಗುನ್ನಾಪುರ ಅವರು, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ‘ನ್ಯಾಯಾಧೀಶರೊಬ್ಬರು ಸಂವಿಧಾನ ಹಾಗೂ ಅದರ ರೂವಾರಿಯಾಗಿರುವ ಡಾ.ಅಂಬೇಡ್ಕರ್ ಅವರ ಬಗ್ಗೆ ಇಷ್ಟು ಪೂರ್ವಗ್ರಹ ನಿಲುವು ಇಟ್ಟುಕೊಂಡರೆ ಅವರಿಂದ ನಿಷ್ಪಕ್ಷಪಾತವಾಗಿ ನ್ಯಾಯದಾನ ನಿರೀಕ್ಷಿಸಲು ಸಾಧ್ಯವೇ’ ಎಂದೂ ಅವರು ಪ್ರಶ್ನಿಸಿದ್ದಾರೆ. ‘ನ್ಯಾಯಾಧೀಶರ ವಿಚಾರಣಾ ಕಾಯಿದೆ–1968ರ ಅನ್ವಯ ಅವರ ವಿರುದ್ಧ ಕ್ರಮಜರುಗಿಸುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ಗಮನಕ್ಕೆ ತರಬೇಕು. ಅನುಚಿತ ವರ್ತನೆಯ ಆಧಾರದಲ್ಲಿ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ನ್ಯಾಯಾಧೀಶರ ವಿರುದ್ಧ ದೂರು

ರಾಯಚೂರು: ‘ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು‘ ಎಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

‘ಪ್ರತಿಭಟನಾಕಾರರಿಂದ ದೂರನ್ನು ಸ್ವೀಕರಿಸಲಾಗಿದ್ದು, ಸ್ವೀಕೃತಿ ನೀಡಲಾಗಿದೆ‘ ಎಂದು ಇಲ್ಲಿಯ ಸದರ್‌ ಬಜಾರ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ. ‘ಎಫ್‌ಐಆರ್‌ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ. ಎಫ್‌ಐಆರ್‌ ದಾಖಲಿಸದಿದ್ದರೆ ಜ.28ರಂದು ಮತ್ತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘಟನೆಯವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು