ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಮೀಸಲಾತಿಗಾಗಿ ಹೋರಾಡುತ್ತಿರುವುದು ದುರ್ದೈವ: ಸಚಿವ ಅರವಿಂದ ಲಿಂಬಾವಳಿ

ಬೇಸರ ತೋಡಿಕೊಂಡ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ
Last Updated 20 ಫೆಬ್ರುವರಿ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುಳಿದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸುವ ಉದ್ದೇಶದಿಂದ ಡಾ.ಬಿ.ಆರ್‌.ಅಂಬೇಡ್ಕರ್‌, ಮೀಸಲಾತಿಯ ಪರಿಕಲ್ಪನೆ ಜಾರಿಗೊಳಿಸಿದರು. ಅದು ತಾತ್ಕಾಲಿಕ ಎಂದೂ ಅವರು ಹೇಳಿದ್ದರು. ಅದು ಈಗಲೂ ಮುಂದುವರಿದಿದೆ. ಅನೇಕ ಸಮುದಾಯಗಳು ತಮಗೂ ಮೀಸಲಾತಿ ನೀಡಬೇಕೆಂದು ಹೋರಾಡುತ್ತಿವೆ. ಇದು ದುರ್ದೈವದ ಸಂಗತಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಲಂಡನ್‌ನಲ್ಲಿರುವ ಲ್ಯಾಂಬೆತ್‌ ಬಸವೇಶ್ವರ ಫೌಂಡೇಷನ್‌ ಶನಿವಾರ ವರ್ಚುವಲ್‌ ರೂಪದಲ್ಲಿ ಆಯೋಜಿಸಿದ್ದ ‘ಬಸವಣ್ಣ ಮತ್ತು ಅಂಬೇಡ್ಕರ್‌ ಸಂಸ್ಮರಣಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅವರು ರಾಜಕಾರಣಿಗಳು ‘ಒಡೆದು ಆಳುವ ನೀತಿ’ ಅನುಸರಿಸುತ್ತಿದ್ದಾರೆ. ಆರ್‌ಎಸ್‌ಎಸ್‌, ದಲಿತ ಸಂಘರ್ಷ ಸಮಿತಿಗಳು ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿವೆ. ಅವರೊಂದಿಗೆ ನಾವೂ ಕೈಜೋಡಿಸಬೇಕಿದೆ’ ಎಂದೂ ತಿಳಿಸಿದರು.

‘ಕೇಂದ್ರ ಸರ್ಕಾರವು ಸಾಮಾನ್ಯರ ಸೇವೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ, ಪದ್ಮಭೂಷಣದಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಆರಂಭಿಸಿದೆ. ವಿದೇಶಗಳಲ್ಲಿ ನೆಲೆಸಿರುವವರ ಪೈಕಿ ಅನೇಕರು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಅಗತ್ಯ ಪುರಸ್ಕಾರ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

ಬಸವಲಿಂಗ ಪಟ್ಟದೇವರು ಸ್ವಾಮಿ, ‘ಬಸವಣ್ಣನವರು 12ನೇ ಶತಮಾನದಲ್ಲೇ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆದಿದ್ದರು. ಅಂಬೇಡ್ಕರ್‌ ಹಾಗೂ ಬಸವೇಶ್ವರರು ಒಂದೇ ಬಗೆಯ ವಿಚಾರಧಾರೆಗಳನ್ನು ಹೊಂದಿದ್ದರು’ ಎಂದರು.

ಇಂಗ್ಲೆಂಡ್‌ನ ಕನ್ನಡ ಬಳಗ ಹಾಗೂ ಕನ್ನಡಿಗರ ಯು.ಕೆ, ಅಮೆರಿಕದ ಅಕ್ಕ ಮತ್ತು ನಾವಿಕ, ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿರುವ ಬಸವ ಸಮಿತಿ, ಐರಿಷ್‌ ಕನ್ನಡ ಬಳಗದ ಸದಸ್ಯರು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಚಿವರಿಗೆ ಅಗತ್ಯ ಸಲಹೆ ನೀಡಿದರು.

‘ರಾಷ್ಟ್ರಕವಿಯ ಸ್ಮಾರಕ ನಿರ್ಮಾಣ ಚುರುಕುಗೊಳಿಸಿ’
‘ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಸ್ಮಾರಕ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಬೇಕು’ ಎಂದು ಶಿವರುದ್ರಪ್ಪನವರ ಮಗ ಶಿವಪ್ರಸಾದ್‌ ಅವರು ಸಚಿವರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT