ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಕ್ಕೆ ಎರಡು ದಿನ ಶಾಸಕರ ಭೇಟಿಗೆ ಮೀಸಲು; ಅತೃಪ್ತಿ ಶಮನಕ್ಕೆ ಮುಂದಾದ ಸಚಿವರ ದಂಡು

ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಅಚಲ
Last Updated 5 ಜನವರಿ 2021, 19:06 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರ ಕಾರ್ಯವೈಖರಿಯಿಂದ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರನ್ನು ಸಮಾಧಾನ ಪಡಿಸಲು ಇನ್ನು ಮುಂದೆ ವಾರದಲ್ಲಿ ಎರಡು ದಿನ ವಿಧಾನಸೌಧದ ತಮ್ಮ ಕಚೇರಿಗಳಲ್ಲಿ ಶಾಸಕರ ಭೇಟಿಗೆ ಮೀಸಲಿಡಲು ಯಡಿಯೂರಪ್ಪ ಸಂಪುಟದ ಎಲ್ಲ ಸಚಿವರು ತೀರ್ಮಾನಿಸಿದ್ದಾರೆ.

ಅಲ್ಲದೆ, ತಮ್ಮಿಂದ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಂಡು ಶಾಸಕರ ಸಲಹೆ ಸೂಚನೆಗಳನ್ನು ಪಡೆದೇ ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿಯೂ ಸಚಿವರು ಭರವಸೆ ನೀಡಿದರು.

ಎರಡು ದಿನಗಳ ಶಾಸಕರ ಸಭೆಯ ಬಳಿಕ ಮಂಗಳವಾರ ಸಂಜೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿ, ಸಚಿವರಾದ ಎಸ್‌.ಟಿ.ಸೋಮಶೇಖರ್‌, ಶಶಿಕಲಾ ಜೊಲ್ಲೆ, ವಿ.ಸೋಮಣ್ಣ, ಬಿ.ಶ್ರೀರಾಮುಲು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಸಚಿವರು ತಮ್ಮ ಕೈಗೆ ಸಿಗುವುದಿಲ್ಲ, ತಾವು ಹೇಳಿದ ಕೆಲಸಗಳು ಆಗುತ್ತಿಲ್ಲ. ಸಚಿವರ ಮಾತಿರಲಿ, ಮುಖ್ಯಮಂತ್ರಿ ಸಹಿ ಮಾಡಿದ ಆದೇಶಗಳೂ ಕಾರ್ಯಗತ ಆಗುತ್ತಿಲ್ಲ ಎಂದು ಬಹುತೇಕ ಶಾಸಕರು ಮುಖ್ಯಮಂತ್ರಿ ಎದುರು ಸೋಮವಾರ ಅಸಮಾಧಾನ ತೋಡಿಕೊಂಡಿದ್ದರು.

ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಶಾಸಕರಿಗೆ ಭರವಸೆ ನೀಡುವುದರ ಜತೆಗೆ ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ಅಚಲ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ವಾರದಲ್ಲಿ ಎರಡು ದಿನ ಮೀಸಲು: ‘ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಪ್ರತಿ ಬುಧವಾರ ಮತ್ತು ಗುರುವಾರ ವಿವಿಧ ಸಮಿತಿಗಳ ಸಭೆಗೆ ಹಾಜರಾಗಲು ಶಾಸಕರು ಬೆಂಗಳೂರಿಗೆ ಬರುತ್ತಾರೆ. ಆ ಎರಡು ದಿನಗಳು ಪಕ್ಷದ ಶಾಸಕರ ಭೇಟಿಗೆ ನಿಗದಿ ಮಾಡುತ್ತೇವೆ. ಶಾಸಕರ ಬೇಡಿಕೆ, ದೂರು–ದುಮ್ಮಾನಗಳನ್ನು ಆಲಿಸಲು ಎಲ್ಲ ಸಚಿವರೂ ತೀರ್ಮಾನಿಸಿದ್ದೇವೆ’ ಎಂದರು.

‘ಎರಡು ದಿನಗಳ ಸಭೆಯಲ್ಲಿ ಎಲ್ಲ ಶಾಸಕರ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ಯಾವುದೇ ಅಸಮಾಧಾನ ಇದ್ದರೂ ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸದೇ ಪಕ್ಷದ ವೇದಿಕೆಯಲ್ಲೇ ಹೇಳಿಕೊಳ್ಳಲು ತೀರ್ಮಾನಿಸಲಾಯಿತು’ ಎಂದು ಅವರು ವಿವರಿಸಿದರು.

ನಾಯಕತ್ವದ ಮೇಲೆ ವಿಶ್ವಾಸ: ‘ನಿನ್ನೆ ಸ್ವಲ್ಪ ಗೊಂದಲ ಆಗಿದ್ದು ನಿಜ. ಉಳಿದಂತೆ ಎಲ್ಲ ಶಾಸಕರೂ ಮುಖ್ಯಮಂತ್ರಿಯವರ ಮೇಲೆ ನಿಷ್ಠೆ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತುಕೊಡಬೇಕು ಎಂಬ ಬೇಡಿಕೆ ಮಂಡಿಸಿದರು. ಸರ್ಕಾರದ ಕಾರ್ಯ ವೈಖರಿಯ ಬಗ್ಗೆ 118 ಶಾಸಕರೂ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಗೋವಿಂದ ಕಾರಜೋಳ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಹೆಚ್ಚು– ಕಡಿಮೆ ಆಗಿದ್ದರೆ ಸರಿ ಮಾಡಿಕೊಳ್ಳುತ್ತೇವೆ. ಈ ಎರಡು ದಿನಗಳ ಸಭೆಯಿಂದ, ಮುಂದೆ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಉಪಯುಕ್ತ ಸಲಹೆಗಳು ಸಿಕ್ಕಿದವು. ಎಲ್ಲ ಶಾಸಕರ ಸಲಹೆ– ಸೂಚನೆ ತೆಗೆದು ಕೊಂಡು ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಮೇಲೆ ವಾಗ್ದಾಳಿ ನಡೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ‘ಯಡಿಯೂರಪ್ಪ ಅವರು ಸರ್ಕಾರದ ಕ್ಯಾಪ್ಟನ್‌. ಅವರಿಗೆ ಮುಜುಗರ ಆಗುವಂತ ಘಟನೆಯನ್ನು ಖಂಡಿಸುತ್ತೇವೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪಕ್ಷದ ಅಧ್ಯಕ್ಷರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

ಇಂದಿನ ಸಭೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹಾಜರಾಗಿರಲಿಲ್ಲ.

ಮಲೆನಾಡು ಭಾಗದ ಶಾಸಕರು ಕಸ್ತೂರಿ ರಂಗನ್‌ ವರದಿ ಜಾರಿ ಆಗದಂತೆ ಎಚ್ಚರವಹಿಸಬೇಕು ಎಂಬುದಾಗಿ ಮನವಿ ಮಾಡಿದರು.

‘ತಂದೆಯನ್ನು ಮಗ ಭೇಟಿಯಾದ್ರೆ ತಪ್ಪೇನು?’

‘ಬಿ.ವೈ.ವಿಜಯೇಂದ್ರ ಅವರು ತಮ್ಮ ತಂದೆಯನ್ನು ನೋಡಲು ಹೋದರೆ ತಪ್ಪೇನು’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ನಡೆದ ಶಾಸಕರ ಸಭೆಯಲ್ಲಿ ಪ್ರಶ್ನಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಘಟನೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಯತ್ನಾಳರು ಟೀಕಾ ಪ್ರಹಾರ ನಡೆಸುವಾಗ ಮೌನವಾಗಿ ಕುಳಿತದ್ದು ಏಕೆ’ ಎಂದೂ ಪ್ರಶ್ನಿಸಿದರು.

ಯತ್ನಾಳ ಹೇಳಿಕೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕೆಲವರು ಮುಖ್ಯಮಂತ್ರಿಯವರ ಆರೋಗ್ಯದ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ನಿರಂತರ ನೋವು ಉಂಟು ಮಾಡುತ್ತಿರುವ ಯತ್ನಾಳ ಅವರನ್ನು ಯಡಿಯೂರಪ್ಪ ಸಹಿಸಿಕೊಳ್ಳಬಹುದು. ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

‘ಕೆಲವು ಸಚಿವರು ವಿಧಾನಸೌಧದಲ್ಲೇ ಕುಳಿತುಕೊಂಡು ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಪ್ರತಿ ಪಕ್ಷದವರಿಗೂ ಇವರೇ ಹೇಳಿಕೊಡುತ್ತಾರೆ. ಇವರ (ಸಚಿವರು) ಹೆಂಡ್ತಿ ಮಕ್ಕಳು ಚೆನ್ನಾಗಿರಬೇಕು. ಯಡಿಯೂರಪ್ಪ ಅವರ ಮನೆಗೆ ಅವರ ಮಗ ಬರಬಾರದಾ’ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

‘ಶಾಸಕರೇ ಹೇಳುವಂತಾಗಬೇಕು’

‘ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರೆಯವುದಾಗಿ ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದಾರೆ. ಅಂತಹ ಮಾತುಗಳು ಶಾಸಕರ ಬಾಯಿಯಿಂದ ಬರಬೇಕು. ಆ ರೀತಿಯಾಗಬೇಕಾದರೆ ಮುಖ್ಯಮಂತ್ರಿಯವರು ಶಾಸಕ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಹಿರಿಯ ಶಾಸಕ ರಾಮದಾಸ್‌ ಹೇಳಿದರು.

ನಮ್ಮ ಬೇಡಿಕೆಗಳಿಗೆ ಸ್ಪಂದನೆ ಇಲ್ಲ: ‘ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದು ಕಷ್ಟವಾಗಿದೆ. ನಮ್ಮ ಸಂಕಷ್ಟಗಳನ್ನು ಯಾರಿಗೆ ಹೇಳಿಕೊಳ್ಳುವುದು. ಪಕ್ಷದ ಶಾಸಕರಿಗೆ ಬೆಲೆ ಕೊಡದಿದ್ದರೆ ಹೇಗೆ’ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT