ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 3.58 ಲಕ್ಷ ಅನರ್ಹ ಪಿಂಚಣಿದಾರರ ಪತ್ತೆ: ಸಚಿವ ಆರ್.‌ಅಶೋಕ

Last Updated 30 ಏಪ್ರಿಲ್ 2022, 7:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ಒಂಬತ್ತು ಮಾಸಿಕ ಪಿಂಚಣಿಗಳನ್ನು ನೀಡುತ್ತಿದೆ. ಅರ್ಹತೆ ಇಲ್ಲದೇ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದವರನ್ನು ಗುರುತಿಸಿ, ಸೌಲಭ್ಯ ರದ್ದು ಮಾಡಲಾಗಿದೆ’ಎಂದರು.

ಶ್ರೀಮಂತರು, ಉದ್ಯೋಗಿಗಳು ಅಕ್ರಮವಾಗಿ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದರು. ಮೃತಪಟ್ಟವರ ಹೆಸರಿನಲ್ಲಿ ಹಲವು ವರ್ಷಗಳಿಂದ ಪಿಂಚಣಿ ಪಾವತಿ ಆಗುತ್ತಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

2020-21ರಲ್ಲಿ ಸಾಮಾಜಿಕ ಪಿಂಚಣಿ ಯೋಜನೆಗಳ ಅಡಿಯಲ್ಲಿ ₹ 7,800 ಕೋಟಿ ನೆರವು ವಿತರಿಸಲಾಗಿತ್ತು. ಪ್ರಸಕ್ತ ವರ್ಷ ₹ 9,483.51 ಕೋಟಿ ಅನುದಾನ ಒದಗಿಸಲಾಗಿದೆ. ಅನರ್ಹ ಫಲಾನುಭವಿಗಳ ರದ್ಧತಿಯಿಂದ ಸರ್ಕಾರದ ಬೊಕ್ಕಸಕ್ಕೆ ₹ 430 ಕೋಟಿ ಉಳಿತಾಯವಾಗಲಿದೆ ಎಂದರು.

ಪಿಂಚಣಿ‌ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ಎಂಬ ಸಹಾಯವಾಣಿ ಆರಂಭಿಸಲಾಗುವುದು. ಮಧ್ಯವರ್ತಿಗಳ ಕಾಟವಿಲ್ಲದೆ, ಫಲಾನುಭವಿಗಳಿಗೆ ಅಲೆದಾಟ ಇಲ್ಲದೆ ಪಿಂಚಣಿ ಮಂಜೂರು ಮಾಡಲಾಗುವುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗೆ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಾಗುವುದು. ಇದು ದೇಶದಲ್ಲೇ ಮಾದರಿ ಎಂದು ಹೇಳಿದರು.

ಸ್ವಯಂ ನಕ್ಷೆ: ಕಂದಾಯ ಇಲಾಖೆ ಮೂಲಕ ಜಮೀನುಗಳ ಪೋಡಿ, 11-ಇ ನಕ್ಷೆ ಮತ್ತು ಭೂ ಪರಿವರ್ತನೆ ನಕ್ಷೆಗಳನ್ನು ಸ್ವಯಂ ಜಮೀನು ಮಾಲೀಕರೇ ಪಡೆಯಲು ಅನುಕೂಲ ಆಗುವಂತೆ ‘ಸ್ವಾವಲಂಬಿ’ಸ್ವಯಂ ನಕ್ಷೆ ಯೋಜನೆ ಜಾರಿಗೆ ತಂದಿದೆ ಎಂದು ಅಶೋಕ ಹೇಳಿದರು.

ಪ್ರತಿ ವರ್ಷ ಹತ್ತು ಲಕ್ಷ ಪೋಡಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ನಾಲ್ಕು ಲಕ್ಷ ಮಾತ್ರ ವಿಲೇವಾರಿ ಆಗುತ್ತಿದ್ದವು. ಈಗಲೂ ಆರು ಲಕ್ಷ ಅರ್ಜಿಗಳು ಬಾಕಿ ಇವೆ. ಸ್ವಾವಲಂಬಿ ಯೋಜನೆಯಿಂದ ಈ ಎಲ್ಲ ಅರ್ಜಿಗಳೂ ತ್ವರಿತವಾಗಿ ವಿಲೇವಾರಿ ಆಗಲಿವೆ ಎಂದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಭೂ ದಾಖಲೆಗಳ ಆಯುಕ್ತ ಮುನೀಶ್ ಮೌದ್ಗಿಲ್, ಸಾಮಾಜಿಕ ಪಿಂಚಣಿ ಇಲಾಖೆ ನಿರ್ದೇಶಕ ಸತೀಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT