ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ: ಕಂದಾಯ ಸಚಿವ ಅಶೋಕ್

Last Updated 20 ಮಾರ್ಚ್ 2021, 6:38 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ಶಿವಸೇನಾದವರ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ್‌ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಿವಸೇನಾದವರು ನಿರಂತರವಾಗಿ ಪುಂಡಾಟಿಕೆ ನಡೆಸುತ್ತಿರುವುದನ್ನು ಗಮನಿಸಿದ್ದೇವೆ. ಕಠಿಣ ಕ್ರಮದ ಮೂಲಕ ಅದನ್ನು ನಿಲ್ಲಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗೆ ಸೂಚನೆ ಕೊಡಲಾಗಿದೆ. ಅಂಥವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ’ ಎಂದರು.

‘ಬೆಳಗಾವಿಯಲ್ಲಿ ಬಹಳ ಜನ ಮರಾಠಿ ಭಾಷಿಗರಿದ್ದಾರೆ. ಅವರು ಶಾಂತಿ ಬಯಸುತ್ತಾರೆ. ಕೆಲವರು ಪುಂಡಾಟ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಪಾಠ ಕಲಿಸಲಾಗುವುದು. ಎಬಿಸಿಡಿಯಿಂದ ಹಿಡಿದು ಕನ್ನಡ ಅಕ್ಷರ ಮಾಲೆಯನ್ನೆಲ್ಲಾ ಅವರಿಗೆ ಕಲಿಸಿಕೊಡುತ್ತೇವೆ’ ಎಂದು ಹೇಳಿದರು.

‘ಶಿವಸೇನಾ ಒಂದು ರಾಜಕೀಯ ಪಕ್ಷ. ಅದನ್ನು ನಿಷೇಧಿಸಲು ಕಾನೂನಿನಲ್ಲಿ ಅವಕಾಶ ಇದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಬೆಳಗಾವಿ ಸೇರಿದಂತೆ ಗಡಿ ರಕ್ಷಣೆ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ನೆಲ, ಜಲ ಸಂರಕ್ಷಣೆಗೆ ಯಾವುದೇ ಬೆಲೆ ಬೇಕಾದರೂ ತೆರುವುದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

ಮೂವರ ಹೆಸರು ಶಿಫಾರಸು:‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ವಿಷಯದಲ್ಲಿ ಚರ್ಚೆಯಾಗಿದೆ. ನಾನೂ ಆ ಸಮಿತಿಯಲ್ಲಿದ್ದು, ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೇನೆ. ಯಾರಿಗೆ ಕೊಟ್ಟರೆ ಒಳ್ಳೆಯದು ಎಂದು ತಿಳಿಸಿದ್ದೇನೆ. ಟಿಕೆಟ್ ರೇಸಲ್ಲಿ ದಿವಂಗತ ಸುರೇಶ ಅಂಗಡಿ ಕುಟುಂಬದವರು ಸೇರಿ ಬಹಳ ಜನರು ಇದ್ದಾರೆ. ಕ್ಷೇತ್ರವು ನಮ್ಮದಾಗಿರುವುದರಿಂದ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ನೋಡೋಣ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT