ಶನಿವಾರ, ಜೂನ್ 25, 2022
26 °C
ತುರ್ತು ಸಭೆ ನಡೆಸಿದ ಪ್ರಭು ಚವ್ಹಾಣ

ಕಾಲುಬಾಯಿ ರೋಗ: ‘ರಿಂಗ್‌ ವ್ಯಾಕ್ಸಿನ್‌’ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸುವಿಗೆ ಲಸಿಕೆ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಲು ಬಾಯಿ ರೋಗ ತೀವ್ರವಾಗಿ ವ್ಯಾಪಿಸಿರುವ ಜಿಲ್ಲೆಗಳಲ್ಲಿ ತಕ್ಷಣವೇ ‘ರಿಂಗ್‌ ವ್ಯಾಕ್ಸಿನ್‌’ ಪ್ರಕ್ರಿಯೆ ನಡೆಸಲು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಇಲ್ಲಿ ತುರ್ತುಸಭೆ ನಡೆಸಿದ ಅವರು, ರೋಗ ಲಕ್ಷಣ ಉಲ್ಬಣಗೊಂಡ 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಸುಗಳಿಗೆ ಲಸಿಕೆ ನೀಡಬೇಕು ಎಂದು ಹೇಳಿದರು.

ಕೊಡಗು, ರಾಮನಗರ, ಚಿಕ್ಕಬಳ್ಳಾ ಪುರ, ಹಾಸನ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡಲೇ ‘ರಿಂಗ್‌ ವ್ಯಾಕ್ಸಿನ್‌’ ಪ್ರಕ್ರಿಯೆ ಆರಂಭಿಸಬೇಕು.  ರೋಗ ಉಲ್ಬಣ ಪರಿಸ್ಥಿತಿ ಕಂಡುಬಂದರೆ ಸಾರ್ವಜನಿಕರು ಕೂಡಲೇ ಪಶು ವೈದ್ಯಾಧಿಕಾರಿಗಳಿಗೆ ತಿಳಿಸಬೇಕು ಎಂದು ತಿಳಿಸಿದರು.

ಕಾಲು ಬಾಯಿ ರೋಗಕ್ಕೆ ರಾಸುಗಳಿಗೆ ಲಸಿಕೆ ನೀಡಲು ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಮತ್ತು ಕೆಎಂಎಫ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಸಿಬ್ಬಂದಿ ಕೊರತೆ ಇದ್ದರೂ ರೈತರು ಮತ್ತು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಭು ಚವ್ಹಾಣ ಹೇಳಿದರು.

ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ: ಕೋವಿಡ್‌ ಕಾರಣ ಕಲ್ಯಾಣ ಕರ್ನಾಟಕ ಭಾಗದ 61 ಪಶುವೈದ್ಯಾಧಿಕಾರಿಗಳು, 32 ಪಶು ವೈದ್ಯಕೀಯ ಪರೀಕ್ಷಕರು ಹಾಗೂ 83 ಪಶು ವೈದ್ಯಕೀಯ ಸಹಾಯಕರ ಹುದ್ದೆಗಳಿಗೆ ತಡೆ ನೀಡಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದರೆ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.


ಸಚಿವ ಪ್ರಭು ಚವ್ಹಾಣ

ಹೊಸ ಗೋಶಾಲೆಗಳಿಗೆ ಕ್ರಿಯಾ ಯೋಜನೆ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 30 ಜಿಲ್ಲೆಗಳಲ್ಲಿ ಹೊಸ ಗೋಶಾಲೆಗಳನ್ನು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರ ₹15 ಕೋಟಿ ಅನುದಾನ ನಿಗದಿ ಮಾಡಿದೆ. ಈಗಾಗಲೇ ₹7.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರ ಹೇಳಿದರು.

ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳಿಗೆ ಮೇ ಅಂತ್ಯದವರೆಗೆ ₹18.50 ಲಕ್ಷ ಅನುದಾನ ನೀಡಲಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು