ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಕಾವೇರಿ: ಲಭ್ಯತೆ ನಿರ್ಧಾರದ ವಿಧಾನವೇ ತಪ್ಪು

Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಯಾವುದೇ ನದಿಯಲ್ಲಿನ ವಾರ್ಷಿಕ ಜಲ ಲಭ್ಯತೆ ಆ ಕಣಿವೆಯಲ್ಲಿ ಸುರಿಯುವ ಮಳೆಯ ತೀವ್ರತೆ, ಭೂಸಂರಚನೆ, ಸಸ್ಯಸಂಪತ್ತು, ಆವಿ, ಅಂತರ್ಜಲ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಮಳೆಯ ವಿನ್ಯಾಸವು ಪ್ರತಿ ವರ್ಷ ಒಂದೇ ತೆರನಾಗಿ ಇರುವುದಿಲ್ಲ. ಮಳೆಯ ವಿನ್ಯಾಸದಲ್ಲಿ ಮೂರು ವಿಧಗಳನ್ನು ಗುರುತಿಸಬಹುದು. ಅವೆಂದರೆ,ಸಮೃದ್ಧ, ಮಧ್ಯಮ ಮತ್ತು ಕನಿಷ್ಠ. ಹಾಗಾಗಿಯೇ ಯಾವುದೇ ನದಿಯಲ್ಲಿ ನೀರಿನ ಲಭ್ಯತೆಯನ್ನು ಸರಾಸರಿ ಅಥವಾ ಶೇಕಡವಾರು ವಿಧಾನದಲ್ಲಿ ನಿರ್ಧರಿಸುವುದು ಸರಿಯಾದ ಕ್ರಮ ಅಲ್ಲ. ನದಿಯಲ್ಲಿ ಎಷ್ಟು ನೀರು ಲಭ್ಯವಿದೆ ಎಂಬುದಕ್ಕೆ ವಾಸ್ತವಿಕ ಲಭ್ಯತೆಯೇ ಮಾನದಂಡ. ಸರಾಸರಿ ಅಥವಾ ಶೇಕಡಾವಾರು ವಿಧಾನವನ್ನು ಅನುಸರಿಸುವುದು ಮೂರ್ಖತನ ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ ಕೂಡ ಒಮ್ಮೆ ಹೇಳಿತ್ತು.

ಆದರೆ, ನೀರು ಹಂಚಿಕೆಯನ್ನು 1901ರಿಂದ 1972ರ (72 ವರ್ಷ) ವರೆಗಿನ ಸರಾಸರಿ ಆಧರಿಸಿ ನಿರ್ಧರಿಸಬೇಕು ಎಂದು ಕರ್ನಾಟಕ ಮತ್ತು 1934ರಿಂದ 1972ರ (38 ವರ್ಷ) ವರೆಗಿನ ಸರಾಸರಿ ಆಧರಿಸಿ ನಿರ್ಧರಿಸಬೇಕು ಎಂದು ತಮಿಳುನಾಡು ಕಾವೇರಿ ಜಲ ವಿವಾದ ನ್ಯಾಯಮಂಡಳಿಯನ್ನು ಕೋರಿತ್ತು. ಕರ್ನಾಟಕದ ವಾದದ ಪ್ರಕಾರ ಕಾವೇರಿಯಲ್ಲಿ ವಾರ್ಷಿಕ 752 ಟಿಎಂಸಿ ಅಡಿ ಮತ್ತು ತಮಿಳುನಾಡು ವಾದದ ಪ್ರಕಾರ 740 ಟಿಎಂಸಿ ಅಡಿ ನೀರು ಲಭ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. ವ್ಯತ್ಯಾಸವು 12 ಟಿಎಂಸಿ ಅಡಿ ಮಾತ್ರ. ಹಾಗಾಗಿ ನೀರಿನ ಲಭ್ಯತೆ 740 ಟಿಎಂಸಿ ಅಡಿ ಎಂದು ನ್ಯಾಯಮಂಡಳಿಯು ನಿರ್ಧರಿಸಿತು.ಕರ್ನಾಟಕ, ತಮಿಳುನಾಡು ಮತ್ತು ಕೇರಳವು ಇದಕ್ಕೆ ಒಪ್ಪಿಗೆಯನ್ನೂ ಕೊಟ್ಟವು. ನೀರಾವರಿ ಕಾರ್ಯದರ್ಶಿ ಸಿ.ಸಿ. ಪಟೇಲ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 1972ರಲ್ಲಿ ರಚಿಸಿದ್ದ ಕಾವೇರಿ ಸತ್ಯ ಶೋಧನ ಸಮಿತಿ ಕೂಡ ಕಾವೇರಿಯಲ್ಲಿ 740 ಟಿಎಂಸಿ ಅಡಿಗಳಷ್ಟು ನೀರು ಇದೆ ಎಂದು ವರದಿ ನೀಡಿತ್ತು.

ಕಾವೇರಿ ನ್ಯಾಯಮಂಡಳಿಯು ನೇಮಿಸಿಕೊಂಡಿದ್ದ ತಾಂತ್ರಿಕ ಸಮಿತಿಯು ಈ ಪರಿಮಾಣಕ್ಕೆ ಸಹಮತ ಸೂಚಿಸಿ, ರಾಜ್ಯಗಳ ನೀರಿನ ಕೊಡುಗೆಯನ್ನು ನಿರ್ಧರಿಸಿತು. ಸಮಿತಿಯ ಅಂದಾಜಿನಂತೆ ಕರ್ನಾಟಕ ಜಲಾನಯನ ಪ್ರದೇಶದಿಂದ 400 ಟಿಎಂಸಿ ಅಡಿ, ತಮಿಳುನಾಡಿನಿಂದ 236 ಟಿಎಂಸಿ ಅಡಿ ಮತ್ತು ಕೇರಳದಿಂದ 104 ಟಿಎಂಸಿ ಅಡಿ ನೀರು ಕಾವೇರಿಗೆ ಹರಿದು ಬರುತ್ತದೆ ಎಂದು ನಿರ್ಧರಿಸಿದೆ.

ಒಟ್ಟು 740 ಟಿಎಂಸಿ ಅಡಿ ನೀರನ್ನು ರಾಜ್ಯಗಳ ನಡುವೆ ಹಂಚುವಾಗ 20 ಟಿಎಂಸಿ ಅಡಿ ನೀರನ್ನು ಕಾಪು ದಾಸ್ತಾನು ಎಂದು ಪರಿಗಣಿಸಿ, ಕರ್ನಾಟಕ ಮತ್ತು ತಮಿಳುನಾಡಿಗೆ ತಲಾ 10 ಟಿಎಂಸಿಯಂತೆ ಹಂಚಬೇಕು; ಸದರಿ ನೀರನ್ನು ಮುಂಗಾರು ಮಳೆ ವಿಳಂಬವಾದಾಗ ಅಥವಾ ಮಳೆ ಕಡಿಮೆಯಾದ ಸಮಯದಲ್ಲಿ ಕುಡಿಯುವ ನೀರಾಗಿ ಬಳಸಿಕೊಳ್ಳುವಂತೆ ನಿರ್ದೇಶಿಸಬೇಕು ಎಂದು ತಾಂತ್ರಿಕ ಸಮಿತಿಯು ನ್ಯಾಯಮಂಡಳಿಗೆ ಶಿಫಾರಸು ಮಾಡಿತು.

1972ರಲ್ಲಿ ರಚನೆಯಾದ ಸತ್ಯ ಶೋಧ ಸಮಿತಿಯ ಕಾಲದಿಂದಲೂ ಕಾವೇರಿಯಲ್ಲಿ 1,200 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಕಾವೇರಿ ಕೊಳ್ಳದ ರಾಜ್ಯಗಳು ವಾದಿಸುತ್ತಲೇ ಬಂದಿದ್ದವು. ಹಾಗಾಗಿಯೇ ಲಭ್ಯವಿರುವ 740 ಟಿಎಂಸಿ ಅಡಿ ನೀರನ್ನು ರಾಜ್ಯಗಳ ನಡುವೆ ಹಂಚುವುದು ನ್ಯಾಯಮಂಡಳಿಗೆ ದೊಡ್ಡ ಸವಾಲಾಗಿತ್ತು.

ರಾಜ್ಯಗಳಿಗೆ ಎಕರೆವಾರು ನಿರ್ಬಂಧ ಮತ್ತು ಬೆಳೆ ನಿರ್ಬಂಧ ವಿಧಿಸಬೇಕು ಎಂಬುದು ನ್ಯಾಯಮಂಡಳಿಯ ತಾಂತ್ರಿಕ ಸಮಿತಿಯ ಸಲಹೆಯಾಗಿತ್ತು. ಅದರಂತೆ, ಪ್ರತಿ ಬೆಳೆಗೆ ಕಾಲಮಿತಿ ಮತ್ತು ಬಳಸುವ ನೀರಿನ ಪ್ರಮಾಣ ಮಿತಿಯನ್ನು ನ್ಯಾಯಮಂಡಳಿಯು ನಿಗದಿ ಮಾಡಿತ್ತು. ಕೃಷಿಗೆ ವಿಧಿಸಿದ್ದ ಈ ನಿರ್ಬಂಧಗಳನ್ನು ನ್ಯಾಯಮಂಡಳಿಯು ಮತ್ತೊಮ್ಮೆ ಅವಲೋಕನಕ್ಕೆ ಒಳಪಡಿಸಿತು. ರಾಜ್ಯಗಳಿಗೆ ಕೃಷಿಗೆ ನೀರು ವಿತರಣೆಯಾದ ಬಳಿಕ 25.08 ಟಿಎಂಸಿ ಅಡಿ ಹೆಚ್ಚುವರಿಯಾಗಿ ಉಳಿದಿದೆ ಎಂಬುದು ಈ ಅವಲೋಕನದಲ್ಲಿ ತಿಳಿಯಿತು.

ಈ ಹೆಚ್ಚುವರಿ ನೀರು ಮತ್ತು ಕಾಪು ದಾಸ್ತಾನಾಗಿ ಇರಿಸಿದ ನೀರನ್ನು (25.08 ಟಿಎಂಸಿ + 20 ಟಿಎಂಸಿ= 45.08 ಟಿಎಂಸಿ) ಹೆಚ್ಚುವರಿ ನೀರು ಎಂದು ನ್ಯಾಯಮಂಡಳಿ ಪರಿಗಣಿಸಿತು. ಈ ಪ್ರಮಾಣದ ನೀರನ್ನು ಹಂಚದೇ ಬಿಟ್ಟರೆ ಅದು ಮತ್ತೊಂದು ವಿವಾದಕ್ಕೆ ಕಾರಣ ಆಗಬಹುದು ಎಂದು ನ್ಯಾಯಮಂಡಳಿಯು ಭಾವಿಸಿತು. ಈ ನೀರನ್ನೂ ರಾಜ್ಯಗಳ ನಡುವೆ ಹಂಚಿಕೆ ಮಾಡಿತು. ಈ ನೀರನ್ನು ಆಯಾ ರಾಜ್ಯಗಳು ಆದ್ಯತೆಯ ಮೇರೆಗೆ ಯಾವುದೇ ಉದ್ದೇಶಕ್ಕೆ ಬಳಸಬಹುದು ಎಂದೂ ನ್ಯಾಯಮಂಡಳಿ ಹೇಳಿತು. ಹೆಚ್ಚುವರಿ ನೀರಿನ ಹಂಚಿಕೆ ಹೀಗಿದೆ: ಕರ್ನಾಟಕಕ್ಕೆ 17.64, ತಮಿಳುನಾಡಿಗೆ 26.71, ಕೇರಳಕ್ಕೆ 1.51 ಮತ್ತು ಪುದುಚೇರಿಗೆ 0.22 ಟಿಎಂಸಿ ಅಡಿ.

ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಿರುವ ನೀರಿನಲ್ಲಿ 14.75 ಟಿಎಂಸಿ ಅಡಿ ನೀರನ್ನು ಸುಪ್ರೀಂ ಕೋರ್ಟ್ ಕಡಿತಗೊಳಿಸಿದೆ. ಉಳಿದಂತೆ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಎಲ್ಲ ಶಿಫಾರಸುಗಳನ್ನೂ ಎತ್ತಿ ಹಿಡಿದಿದೆ. ಈ ಲೆಕ್ಕದಲ್ಲಿ ನೋಡಿದರೆ ಕಾವೇರಿ ನದಿಯಲ್ಲಿ ಹೆಚ್ಚುವರಿ ನೀರು ಎಂಬುದೇ ಇಲ್ಲ. ಇರುವ ಎಲ್ಲ ನೀರೂ ಹಂಚಿಕೆ ಆಗಿಬಿಟ್ಟಿದೆ.

ಲೇಖಕ: ಜಲತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT