ಶುಕ್ರವಾರ, ಜುಲೈ 23, 2021
22 °C
ಅಣ್ಣನ ಆಸೆ ಪೂರೈಸಿದ ಸಹನಾ ಪಾಟೀಲ

ಶಿರಹಟ್ಟಿ: ಕುಗ್ರಾಮದ ಯುವತಿ ಪಿಎಸ್‌ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 26ನೇ ರ‍್ಯಾಂಕ್‌

ಖಲೀಲಅಹ್ಮದ ಶೇಖ Updated:

ಅಕ್ಷರ ಗಾತ್ರ : | |

Prajavani

ಶಿರಹಟ್ಟಿ: ಕೋಚಿಂಗ್‌ ಕೇಂದ್ರಗಳ ನೆರವು ಪಡೆಯದೆ ಮನೆಯಲ್ಲೇ ತಯಾರಿ ನಡೆಸಿ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಹನಾ ಪಾಟೀಲ ಅನೇಕ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ತೆಗ್ಗಿನಭಾವನೂರು ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ ಕೊರೊನಾ ಸಂಕಷ್ಟದ ನಡುವೆ ಮಾರ್ಚ್‌ 8ರಂದು 300 ಹುದ್ದೆಗಳಿಗೆ ನಡೆದ ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಸೆ.11ರಂದು ಪ್ರಕಟವಾದ ಪಿಎಸ್‌ಐ ನೇಮಕಾತಿ ಫಲಿತಾಂಶದ ಮಹಿಳಾ ವಿಭಾಗದಲ್ಲಿ ಇವರು ರಾಜ್ಯಕ್ಕೆ 26ನೇ ರ‍್ಯಾಂಕ್‌ ಪಡೆಯುವ ಮೂಲಕ ಗ್ರಾಮೀಣ ಭಾಗದ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿರುವ ಸಹನಾ ಪಾಟೀಲ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಕೆ–ಸೆಟ್‌ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ಅವರು,  ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಎಸ್ಐ ಹುದ್ದೆಗೆ ಆಯ್ಕೆಯಾಗಿದ್ದು, ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

‘ಪ್ರತಿದಿನ 10ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ನಿತ್ಯವೂ ‘ಪ್ರಜಾವಾಣಿ’ ದಿನಪತ್ರಿಕೆ ಓದುವುದು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಇಂಟರ್‌ನೆಟ್‌ ಮೂಲಕ ಪರೀಕ್ಷೆಗೆ ಬೇಕಾಗುವ ಪೂರಕ ಮಾಹಿತಿಗಳನ್ನು ಸಂಗ್ರಹಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ವೆಬ್‌ಸೈಟ್‌ ಮತ್ತು ಚರ್ಚಾತಾಣಗಳಿಗೆ ಭೇಟಿ ನೀಡುತ್ತಿದ್ದೆ. ಸಮಯ ನಿರ್ವಹಣೆ ಮಾಡಿಕೊಂಡು ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಸುಲಭ’ ಎನ್ನುತ್ತಾರೆ ಸಹನಾ ಪಾಟೀಲ.

ಐಎಎಸ್‌ಗೂ ತಯಾರಿ...

‘ಸಮಾಜದ ಜನರು ಪೊಲೀಸರಿಗೆ ನೀಡುವ ಗೌರವವನ್ನು ನೋಡಿದಾಗ ನಾನು ಕೂಡ ಪೋಲಿಸ್‌ ಇಲಾಖೆಯಲ್ಲಿ ಉನ್ನತ ಅಧಿಕಾರಿ ಆಗಬೇಕು ಎಂಬ ಆಸೆ ಮೂಡಿತು. ಇದು ನನ್ನ ಅಣ್ಣನ ಆಸೆ ಕೂಡ ಆಗಿತ್ತು. ಈಗ ಇಬ್ಬರ ಆಸೆಯೂ ಈಡೇರಿದೆ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಐಎಎಸ್‌, ಕೆಎಎಸ್ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಸಹನಾ ಫಕ್ಕೀರಗೌಡ ಪಾಟೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು