ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಗೋಷ್ಠಿ: ಹೊರಹೊಮ್ಮಿದ ಒಡಲ ನೋವು, ನಿದ್ದೆಗೆ ಜಾರಿದ ಪ್ರೇಕ್ಷಕ:

ಸಮಾಜ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಕವಿತೆಯ ಮೂಲಕ ಖಂಡನೆ
Last Updated 7 ಜನವರಿ 2023, 15:46 IST
ಅಕ್ಷರ ಗಾತ್ರ

ಪಾಪು-ಚಂಪಾ ವೇದಿಕೆ (ಹಾವೇರಿ): ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ, ಜಾತಿ-ಧರ್ಮದ ಸಂಘರ್ಷ, ಸೈನಿಕರ ತ್ಯಾಗ-ಬಲಿದಾನ, ಹೆಣ್ಣು ಭ್ರೂಣ ಹತ್ಯೆ... ಹೀಗೆ ವಿವಿಧ ಸಂಗತಿಗಳ ಬಗ್ಗೆ ತಮ್ಮೊಳಗಿನ ಒಡಲ ನೋವು ಕವಿತೆಯಾಗಿ ಹೊರಹೊಮ್ಮುತ್ತಿದ್ದರೆ, ಅದಕ್ಕೆ ಕಿವಿಗೊಡಬೇಕಾದ ಕನ್ನಡದ ಮನಸುಗಳು ‘ಹಸಿದು’ ನಿದ್ದೆಗೆ ಜಾರಿದ್ದವು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನ ಶನಿವಾರ ಸಾಹಿತಿ ಮಲ್ಲಮ್ಮ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 24 ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಸಿಕ್ಕ ಅಲ್ಪ ಸಮಯದಲ್ಲಿಯೇ ತಮ್ಮ ಕಳಕಳಿ, ಆಕ್ರೋಶವನ್ನು ಕವಿತೆಯ ಮೂಲಕ ವ್ಯಕ್ತಪಡಿಸಿದರು. ಊಟದ ಸಮಯದಲ್ಲಿ ಮೂರು ಗಂಟೆಗಳ ಈ ಗೋಷ್ಠಿ ನಡೆದಿದ್ದರಿಂದ ನೆರೆದ ಪ್ರೇಕ್ಷಕರಲ್ಲಿ ಹಲವರು ತೂಕಡಿಸುತ್ತಿದ್ದರು. ಈ ನಡುವೆ ಕೆಲವರ ಗಟ್ಟಿ ಧ್ವನಿಯ ವಾಚನ ನಿದ್ದೆಗೆ ಜಾರಿದವರನ್ನು ಎಬ್ಬಿಸುವಂತಿತ್ತು.

ಗಿರಿಜಾ ರಾಜಶೇಖರ ಅವರು ‘ಹೆಣ್ಣು ಭ್ರೂಣ ಹತ್ಯೆ’ಯ ಬಗ್ಗೆ ಕವಿತೆ ವಾಚಿಸಿ, ಸಮಾಜ ಹೆಣ್ಣನ್ನು ಸ್ವೀಕರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಕವಿತೆ ಮೆಚ್ಚುಗೆಗೆ ಭಾಜನವಾಯಿತು. ಗುರು ಬಸವರಾಜ ಅವರು ತಮ್ಮ ‘ಪುನೀತ’ ಕವಿತೆಯ ಮೂಲಕ ಧರ್ಮ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದರು. ಮೌನೇಶ್ ಬಡಿಗೇರ ಅವರ ‘ದೇವರೇ ನಿನಗೊಂದು ಪತ್ರ ಬರೆಯುತ್ತಿರುವೆ’ ಕವಿತೆ, ದೇವರ ಬಗೆಗಿನ ಕಲ್ಪನೆ, ನಂಬಿಕೆ, ಜಾತಿ–ಧರ್ಮದ ಲೇಪನವನ್ನು ಅನಾವರಣ ಮಾಡಿತು.

ನೂರು ಜಹಾನ್ ಅವರು ‘ನಾವೆಲ್ಲರೂ ಒಂದೇ’ ಎಂಬ ಶೀರ್ಷಿಕೆಯ ಕವಿತೆ ವಾಚಿಸಿದರು. ‘ಭಾರತೀಯರಾದ ನಾವೆಲ್ಲ ಒಂದಾಗಿ, ಸೌಹಾರ್ದದಿಂದ ಸಾಗಬೇಕು’ ಎಂಬ ಸಂದೇಶ ಅವರ ಕವಿತೆಯಲ್ಲಿತ್ತು. ಶ್ರೀಧರ್ ಶೇಟ್ ಅವರು ‘ಅವಳ ಕಣ್ಣುಗಳಿಗೆ ವಿಶ್ರಾಂತಿ ಇಲ್ಲ’ ಎಂಬ ತಮ್ಮ ಕವಿತೆಯ ಮೂಲಕ ಹಿಜಾಬ್ ವಿವಾದ, ಕಾವಿಯ ದುರ್ಬಳಕೆ, ನಿರ್ಭಯಾ ಪ್ರಕರಣದ ಬಗೆಗೆ ಕಳವಳ ವ್ಯಕ್ತಪಡಿಸಿದರು.

ಬಸವಣ್ಣ ಅವರ ಪ್ರಸ್ತುತತೆ ಬಗ್ಗೆ ಕವನ ವಾಚಿಸಿದ ಪ್ರಭುಲಿಂಗ ದಂಡಿನ, ‘ಇಂದು ಶರಣರು ಕಳ್ಳರಾಗುತ್ತಿದ್ದಾರೆ’ ಎಂದು ಕಾವ್ಯದ ಮೂಲಕ ಬೇಸರ ಹೊರಹಾಕಿದರು. ಎಸ್‌.ಎಂ. ತುಕ್ಕಪ್ಪನವರ ‘ಜೈ ದೇಶ ರಕ್ಷಕ’ ಕವಿತೆ ಸೈನಿಕರ ತ್ಯಾಗವನ್ನು ನೆನಪಿಸಿತು. ಗಟ್ಟಿ ಧ್ವನಿಯಲ್ಲಿ ಅವರು ಕವನ ವಾಚಿಸಿದ ರೀತಿಗೆ ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. 75 ವರ್ಷದ ಬಿ.ಕೆ ಹೊಂಗಲ ಅವರು ‘ಶಿರಸಂಗಿ ಲಿಂಗರಾಜು ದೇಸಾಯಿ’ ಅವರ ಬಗ್ಗೆ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT