ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಗ್ಗೆ ಸಲೀಂ–ಉಗ್ರಪ್ಪ ಮಾತು: ಕಾಂಗ್ರೆಸ್‌ನಲ್ಲಿ ಸಂಚಲನ– ಸಲೀಂ ಉಚ್ಚಾಟನೆ

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಸಲೀಂ ಉಚ್ಚಾಟನೆ
Last Updated 13 ಅಕ್ಟೋಬರ್ 2021, 11:25 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಪಕ್ಷದ ಮುಖಂಡ ವಿ.ಎಸ್. ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಸಮನ್ವಯಕಾರ ಎಂ.ಎ. ಸಲೀಂ ನಡುವೆ ನಡೆದ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿದೆ.

ಮಂಗಳವಾರ ನಡೆದ ಈ ಇಬ್ಬರ ಖಾಸಗಿ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆ. ರಹಮಾನ್‌ ಖಾನ್‌ ನೇತೃತ್ವದ ಪಕ್ಷದ ಶಿಸ್ತು ಪಾಲನಾ ಸಮಿತಿ, ಸಲೀಂ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಉಚ್ಚಾಟಿಸಿದೆ.

ಸಮಿತಿ ಉಗ್ರಪ್ಪ ಅವರಿಗೆ ಅಶಿಸ್ತಿನ ನಡವಳಿಕೆಗೆ ಕಾರಣ ಕೇಳಿ ನೋಟಿಸ್‌ ನೀಡಿದೆ. ‘ಇಬ್ಬರೂ ಮಾತನಾಡಿಕೊಂಡಿರುವ ವಿಚಾರಗಳು ಆಧಾರಹಿತವಾಗಿದ್ದು, ಪಕ್ಷ ಇದನ್ನು ಖಂಡಿಸಸುತ್ತದೆ. ಹೀಗಾಗಿ ತಮ್ಮ ಸಮಜಾಯಿಷಿಯನ್ನು ಮೂರು ದಿನಗಳ ಒಳಗೆ ನೀಡಬೇಕು’ ಎಂದು ಉಗ್ರಪ್ಪ ಅವರಿಗೆ ಸೂಚಿಸಿದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಸಲಿಂ ಮತ್ತು ಉಗ್ರಪ್ಪ ಅವರ ಮಾತಿನಿಂದ ಮುಜುಗರವಾಗಿದೆ. ಈ ವಿಷಯದಲ್ಲಿ ಪಕ್ಷದ ಶಿಸ್ತು ಸಮಿತಿಯ ತೀರ್ಮಾನಕ್ಕೆ ನಾವೆಲ್ಲ ಬದ್ದ. ಅವರಿಬ್ಬರ ಆಂತರಿಕ ಮಾತುಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು.

‘ಆಂತರಿಕವಾಗಿ ಕೆಲವು ವಿಚಾರಗಳನ್ನು ಅವರಿಬ್ಬರೂ ಮಾತನಾಡಿರುವುದು ಸತ್ಯ. ರಾಜಕಾರಣದಲ್ಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಕಲ್ಲು, ಚಪ್ಪಲಿ, ಮೊಟ್ಟೆ ಎಸೆಯುವವರೂ ಇರುತ್ತರೆ. ಜೈಕಾರ ಹಾಕುವವರೂ ಇರುತ್ತಾರೆ. ನಾನು ಯಾವುದೇ ಗುಂಪುಗಾರಿಕೆ ಮಾಡುವುದಿಲ್ಲ’ ಎಂದರು.

ಏನಿದು ಘಟನೆ?: ಕಾಂಗ್ರೆಸ್ ನಾಯಕರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುವ ಉದ್ದೇಶದಿಂದ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ್ದ ವಿ.ಎಸ್‌. ಉಗ್ರಪ್ಪ ಜೊತೆ ಸಲೀಂ ಕೂಡ ವೇದಿಕೆಯಲ್ಲಿದ್ದರು. ಈ ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಇಬ್ಬರ ನಡುವೆ ನಡೆದ ಖಾಸಗಿ ಸಂಭಾಷಣೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಕುರಿತು ವಿಚಾರ ಪ್ರಸ್ತಾಪವಾಗಿತ್ತು.

ಎಸ್.ಉಗ್ರಪ್ಪ-ಸಲೀಂ ಸಂಭಾಷಣೆ:

ಉಗ್ರಪ್ಪನವರ ಜೊತೆ ಮೆಲ್ಲಗೆ ಮಾತು ಆರಂಭಿಸಿದ ಸಲೀಂ, 'ಈ ಹಿಂದೆ 6ರಿಂದ 8 ಪರ್ಸೆಂಟ್‌ ಇತ್ತು. ಡಿಕೆಶಿ ಬಂದು ಅದನ್ನು 12 ಪರ್ಸೆಂಟ್‌ ಮಾಡಿದರು. ಹಾಗಾಗಿ, ಅಡ್ಜಸ್ಟ್‌ಮೆಂಟ್‌ ಡಿಕೆಶಿ ಅವರದ್ದೂ ಇದೆ’ ಎಂದರು. ಈ ಸಂದರ್ಭದಲ್ಲಿ ಉಪ್ಪಾರು, ಜಿ.ಶಂಕರ್, ಹನುಮಂತಪ್ಪ ಹಾಗು ಜಿ. ಶಂಕರ್ ಅವರ ಹೆಸರುಗಳನ್ನು ಪ್ರಸ್ತಾಪ ಮಾಡಿದರು. ಉಪ್ಪಾರು ಅವರು ಬೆಂಗಳೂರಿನಲ್ಲಿ ಎಸ್‌.ಎಂ.ಕೃಷ್ಣ ಅವರ ಮನೆ ಎದುರಿಗೆ ಮನೆ ನಿರ್ಮಿಸಿರುವ ಬಗ್ಗೆ ಹೇಳಿದರು. ಇದೇ ವೇಳೆ, 'ಇವರು' ದೊಡ್ಡ ಸ್ಕ್ಯಾಂಡಲ್‌, ಕೆದಕುತ್ತಾ ಹೋದರೆ ಇವರದ್ದೂ ಕೂಡಾ ಬರುತ್ತೆ' ಎಂದರು.

ಮತ್ತೆ ಮಾತು ಮುಂದುವರೆಸಿದ ಸಲೀಂ, ‘ನಮ್ಮ ಮುಳಗುಂದೆಯಲ್ಲಿ 5 ರಿಂದ 100 ಕೋಟಿ ರೂ ಮಾಡಿದ್ದಾನೆ. ಅವನು ಅಷ್ಟು ಮಾಡಿದ್ದಾನೆ ಅಂದ್ರೆ ಡಿಕೆಶಿ ಹತ್ತಿರ ಎಷ್ಟು ಇರಬೇಕು? ಇವನು ಬರೀ ಕಲೆಕ್ಷನ್ ಗಿರಾಕಿ' ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉಗ್ರಪ್ಪ, 'ನಾವೆಲ್ಲಾ ಪಟ್ಟುಹಿಡಿದು ಅಧ್ಯಕ್ಷನನ್ನಾಗಿ ಮಾಡಿದೆವು. ಆದರೂ ತಕ್ಕಡಿ ಏಳುತ್ತಿಲ್ಲ’ ಎಂದರು. ಈ ಸಂದರ್ಭದಲ್ಲಿ ಸಲೀಂ, 'ಇವರು ಎಮೋಷನ್‌ನಲ್ಲಿ ಮಾತನಾಡೋಕೆ ಹೋಗ್ತಾರೆ. ಆದ್ರೆ, ಸಿದ್ದರಾಮಯ್ಯನವರದ್ದು ಬಾಡಿ ಲಾಂಗ್ವೆಜ್‌ ಹೆಂಗಿದೆ. ಅವರದ್ದು ಖಡಕ್ ಅಂದ್ರೆ ಖಡಕ್‌’ ಎಂದು ಹೊಗಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT